Advertisement
ದಸರಾ ಮಂಟಪಗಳಿಗೆ ಮೂರು ಬಹುಮಾನಗಳನ್ನು ನಿಗದಿ ಮಾಡಲಾಗಿರುತ್ತದೆ. ಬಹುಮಾನ ಪಡೆಯಲು ಮಂಟಪಗಳ ಪೂರ್ವತಯಾರಿ ಯೋಜನೆಗಳು ಹಲವಾರು ತಿಂಗಳಿನಿಂದ ನಡೆಯುತ್ತದೆ. ವಿಜಯದಶಮಿಯ ರಾತ್ರಿ ಪೂಜಾ ವಿಧಿವಿಧಾನಗಳನ್ನು ಮುಗಿಸಿ 11 ಗಂಟೆಯಿಂದ ಆರಂಭಗೊಳ್ಳುವ ದಶಮಂಟಪಗಳ ಪ್ರದರ್ಶನ ನಗರದ ಹಲವೆಡೆ ಮುಂಜಾನೆವರೆಗೂ ಸಂಚರಿಸಿ ಪ್ರದರ್ಶನ ನೀಡಲಿವೆ. ಪೌರಾಣಿಕ ಹಿನ್ನೆಲೆಯ ಕತೆಯನ್ನು ಪ್ರದರ್ಶನ ಮಾಡಲು ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿ ಸೇರಿದಂತೆ 10 ದೇವಾಲಯಗಳೂ ಕೂಡ ಒಂದೊಂದು ಕಥೆಯನ್ನು ಆಯ್ಕೆ ಮಾಡಿಕೊಂಡು ಪ್ರದರ್ಶನ ನೀಡುತ್ತವೆ. ಪೌರಾಣಿಕವಾಗಿ ಶ್ರೀರಾಮಪಟ್ಟಾಭಿಷೇಕ, ಗಣಪತಿಯಿಂದ ಚೌತಿ ಚಂದ್ರನ ಗರ್ವಭಂಗ, ಮತ್ಸ್ಯಅವತಾರ, ಗಜೇಂದ್ರಮೋಕ್ಷ, ಮಹಿಷಾಸುರಮರ್ಧಿನಿ, ನರಸಿಂಹ ಅವತಾರ ಇತ್ಯಾದಿ ಹಲವಾರು ಪುರಾಣಕಥೆಗಳನ್ನು ಅಳವಡಿಸಿಕೊಂಡು ದಶಮಂಟಪಗಳು ಜನರನ್ನು ಆಕರ್ಷಿಸುತ್ತದೆ.
Related Articles
Advertisement
ವಿಶ್ವ ವಿಖ್ಯಾತ ಮೈಸೂರಿನ ದಸರಾ ಉತ್ಸವದ ಜಂಬೂಸವಾರಿಯ ಮೆರವಣಿಗೆಯನ್ನು ನೋಡಿದ ನಂತರ ಜನ ಪ್ರವಾಹದಂತೆ ಮೈಸೂರಿನಿಂದ 120 ಕಿ. ಮಿ. ದೂರದಲ್ಲಿರುವ ಮಡಿಕೇರಿ ದಸರಾ ವೀಕ್ಷಿಸಲು ಬರುತ್ತಾರೆ.
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾವ್ ರವರು ಮಡಿಕೇರಿ ದಸರಾ ಉತ್ಸವಕ್ಕೆ 1980ರಲ್ಲಿ ಕರ್ನಾಟಕ ಸರ್ಕಾರದಿಂದ ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡುವಂತೆ ವ್ಯವಸ್ಥೆ ಮಾಡಿದರು. ನಂತರ ವರ್ಷದಲ್ಲಿ ಸಹಾಯ ಧನವನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ಒಂದು ಮಂಟಪ ನಿರ್ಮಾಣ ಮಾಡಲು 2–3 ತಿಂಗಳಿನಿಂದ ಪೂರ್ವತಯಾರಿ ನಡೆಯುತ್ತದೆ. ವಿವಿಧ ವಿನ್ಯಾಸದ ಮಂಟಪಗಳಲ್ಲಿ ವಿವಿಧ ಭಂಗಿಗಳಲ್ಲಿ ವಿವಿಧ ಕಥಾಪ್ರಸಂಗಗಳ ದೇವತಾಮೂರ್ತಿಗಳು 8 ರಿಂದ 15 ಅಡಿಗಳವರೆಗೆ ಇರುತ್ತದೆ.
ಧ್ವನಿ ಬೆಳಕಿನ ವ್ಯವಸ್ಥೆಯೊಂದಿಗೆ, ತಾಂತ್ರಿಕವಾಗಿ ಮಂಟಪಗಳು ಬಹಳ ಆಕರ್ಷಣೀಯವಾಗಿರುತ್ತದೆ. ಕೃತಕಮೋಡಗಳು, ಜಲಪಾತಗಳು, ಧೂಮಸೃಷ್ಟಿಗಳು ಒಂದನ್ನೊಂದು ಮೀರಿಸುವಂತಿರುತ್ತದೆ. ಅದರ ಜೊತೆಗೆ ವಿದ್ಯುತ್ ದೀಪಾಲಂಕಾರದ ಬೃಹತ್ ಸೆಟ್ಟಿಂಗ್ಸ್ ಗಳು, ಬೆಂಗಳೂರು, ಮಂಗಳೂರು, ತಮಿಳುನಾಡಿನ ದಿಂಡಿಗಲ್, ಚೆನ್ನೈನ ಸಿನೆಮಾ ಸ್ಟುಡಿಯೋಗಳಿಂದ ಬರುತ್ತದೆ. ಮಂಟಪಗಳ ಮುಂದೆ ಚೆಂಡೆವಾದ್ಯಗಳು, ತಂಜಾವೂರಿನಿಂದ ಕೀಲುಕುದುರೆ, ಮೈಸೂರು ಪ್ಯಾಲೆಸ್ ಬ್ಯಾಂಡ್, ಕೇರಳದ ತ್ರಿಶೂರಿನಿಂದ ಬೆಂಕಿಯೊಂದಿಗೆ ಸರಸವಾಡುತ್ತ ನುಡಿಸುವ ಗರಡಿ ಬ್ಯಾಂಡ್ ಗಳು ಉತ್ಸವದ ಮೆರಗನ್ನು ಇನ್ನಷ್ಟು ಹೆಚ್ಚಿಸುತ್ತದೆ.
ವೈಭವೋಪೇತ ಮೆರವಣಿಗೆಯಲ್ಲಿ ಡಿಜೆ ಕೂಡ ಇರುವುದರಿಂದ ಸಾವಿರಾರು ಯುವಕರು ರಾತ್ರಿಯಿಂದ ಬೆಳಗಿನವರೆಗೆ ಮೆರವಣಿಗೆಯ ಜೊತೆಗೆ ಕುಣಿದು ಕುಪ್ಪಳಿಸಿ ಆನಂದಿಸುತ್ತಾರೆ. ಮತ್ತೊಂದು ಪ್ರುಮುಖ ಆಕರ್ಷಣೆ ಎಂದರೇ ನಗರದ ಬೀದಿ ಬೀದಿಗಳನ್ನು ಶೃಂಗಾರ ಮಾಡಲಾಗಿರುತ್ತದೆ. ಪ್ರತಿಯೊಂದು ಅಂಗಡಿ-ಮುಂಗಟ್ಟುಗಳಲ್ಲಿ, ಮನೆಗಳಲ್ಲಿ ಸಣ್ಣಸಣ್ಣ ದೇವಾತಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಅತ್ಯಂತ ಹೆಚ್ಚು ಜನಾಕರ್ಷಣೆ ಪಡೆದ ಮೂರ್ತಿಗಳಿಗೆ ಬಹುಮಾನವೂ ನಿಗದಿಯಾಗಿರುತ್ತದೆ.