Advertisement

1000 ಕೋಟಿ ವೆಚ್ಚದಲ್ಲಿ ಬರಲಿದೆ ಮಹಾಭಾರತ ಸಿನಿಮಾ!

03:45 AM Apr 18, 2017 | Harsha Rao |

ಕೊಚ್ಚಿ: ಭಾರತ ಚಲನಚಿತ್ರ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಸಾವಿರ ಕೋಟಿ ವೆಚ್ಚದಲ್ಲಿ ಅದ್ಧೂರಿ, ಬಹುಭಾಷಾ “ದಿ ಮಹಾಭಾರತ’ ಸಿನಿಮಾ ತೆರೆಗೆ ಬರಲಿದೆ.

Advertisement

ಚಿತ್ರಕ್ಕೆ ಕನ್ನಡಿಗ, ದುಬೈನ ಪ್ರಸಿದ್ಧ ಉದ್ಯಮಿ, ಯುಎಇ ಎಕ್ಸ್‌ಚೇಂಜ್‌ ಮತ್ತು ಎನ್‌ಎಂಸಿ ಹೆಲ್ತ್‌ಕೇರ್‌ನ ಸ್ಥಾಪಕ ಮತ್ತು ಅಧ್ಯಕ್ಷ ಬಿ.ಆರ್‌. ಶೆಟ್ಟಿ ಅವರು ಹಣ ಹಾಕಲಿದ್ದು, ಮಲೆಯಾಳಂನ ಶ್ರೇಷ್ಟ ನಿರ್ದೇಶಕ ವಿ.ಎ. ಶ್ರೀಕುಮಾರನ್‌ ಮೆನನ್‌ ನಿರ್ದೇಶಿಸಲಿದ್ದಾರೆ. ಈ ಚಿತ್ರಕ್ಕೆ ಮಲೆಯಾಳಂನ ಜ್ಞಾನಪೀಠ ಪುರಸ್ಕೃತ ಸಾಹಿತಿ ಎಂ.ಟಿ. ವಾಸುದೇವನ್‌ ನಾಯರ್‌ ಅವರ ಕಥೆಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ.

ವಿಶೇಷವೆಂದರೆ ಇದು ಕನ್ನಡವೂ ಸೇರಿದಂತೆ ಇಂಗ್ಲಿಷ್‌, ಹಿಂದಿ, ಮಲೆಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ. ಇದನ್ನು ಜಗತ್ತಿನ 100 ಭಾಷೆಗಳಿಗೆ ಪಸರಿಸುವ ಆಶಯ ಬಿ.ಆರ್‌. ಶೆಟ್ಟಿ ಅವರದ್ದು. 2018ರ ಸೆಪ್ಟೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದ್ದು, 2020ರ ಆರಂಭದಲ್ಲೇ ಬಿಡುಗಡೆಯಾಗಲಿದೆ. ಚಿತ್ರ ಎರಡು ಭಾಗದಲ್ಲಿ ಇರಲಿದ್ದು, ಮೊದಲ ಭಾಗ ರಿಲೀಸ್‌ ಆದ ಮೂರು ತಿಂಗಳಲ್ಲೇ 2ನೇ ಭಾಗವೂ ಬಿಡುಗಡೆ ಕಾಣಲಿದೆ ಎಂಬುದು ವಿಶೇಷ.

ಆರಂಭದಲ್ಲಿ ಆರು ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡುತ್ತೇವೆ, ಬಳಿಕ ದೇಶದ ಉಳಿದ ಭಾಷೆಗಳು ಮತ್ತು ವಿದೇಶಿ ಭಾಷೆಗಳಿಗೆ ಡಬ್‌ ಮಾಡಿ ಬಿಡುಗಡೆ ಮಾಡುತ್ತೇವೆ ಎಂದು ಉದ್ಯಮಿ ಬಿ.ಆರ್‌. ಶೆಟ್ಟಿ ಹೇಳಿದ್ದಾರೆ. ಈ ಚಿತ್ರದಲ್ಲಿ ಹಾಲಿವುಡ್‌ ಮತ್ತು ಭಾರತೀಯ ಸಿನಿಮಾವೂ ಸೇರಿದಂತೆ ಪ್ರಸಿದ್ಧ ನಟರು, ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಅಂದರೆ ಆಸ್ಕರ್‌ ಸೇರಿದಂತೆ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ ಪಡೆದಿರುವಂಥ ತಂತ್ರಜ್ಞರು, ನಟರು ಭಾಗಿಯಾಗಲಿದ್ದಾರೆ ಎಂದು ಶೆಟ್ಟಿ ವಿವರಿಸಿದ್ದಾರೆ. ಅಂತಾರಾಷ್ಟ್ರೀಯ ಗರಿಮೆಯುಳ್ಳ ನಿರ್ದೇಶಕ ವಿ.ಎ. ಶ್ರೀಕುಮಾರನ್‌ ಮೆನನ್‌ ಇದನ್ನು ನಿರ್ದೇಶಿಸುತ್ತಿದ್ದು, ಅವರೇ ನಟರನ್ನೂ ಆರಿಸಲಿದ್ದಾರೆ ಎಂದಿದ್ದಾರೆ. ಜತೆಗೆ ಶ್ರೀಕುಮಾರ್‌ ಅವರು ಹಲವಾರು ವರ್ಷಗಳಿಂದ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದು, ಸಂಪೂರ್ಣ ಸಿದ್ಧತೆಯಲ್ಲಿದ್ದಾರೆ.

ಈ ಚಿತ್ರ ಸಂಪೂರ್ಣವಾಗಿ ಮೇಕ್‌ ಇನ್‌ ಇಂಡಿಯಾ ಭಾಗವಾಗಲಿದ್ದು, ಜಗತ್ತಿನ ಎಲ್ಲ ಕಡೆಗಳಲ್ಲಿ ತನ್ನದೇ ಛಾಯೆ ಮೂಡಿಸಲಿದೆ. ಸರಿಸುಮಾರು ಮೂರು ಶತಕೋಟಿ ಜನರಿಗೆ ಈ ಚಿತ್ರ ತಲುಪುವಂತೆ ಮಾಡಲಾಗುವುದು ಎಂದು ಬಿ.ಆರ್‌. ಶೆಟ್ಟಿ ಹೇಳಿದ್ದಾರೆ.

Advertisement

ಎಂ.ಟಿ. ವಾಸುದೇವನ್‌ ನಾಯರ್‌ ಅವರ ಭೀಮನನ್ನು ಪ್ರಮುಖವಾಗಿ ಚಿತ್ರಿಸಿರುವಂಥ “ರಂಡಮೋಳಮ್‌'(ದಿ ಸೆಕೆಂಡ್‌ ಟರ್ನ್)ಕಾದಂಬರಿಯನ್ನು ಆಧರಿಸಿ ಈ ಚಿತ್ರ ತಯಾರಿಸಲಾಗುತ್ತಿದೆ. ಇಷ್ಟೇ ಅಲ್ಲದೇ, ಇವರೇ ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆಯಲಿದ್ದಾರೆ. ವಿಶೇಷವೆಂದರೆ, ಚಿತ್ರಕಥೆ ವಿಚಾರದಲ್ಲಿ ಭಾರತದ ಸಿನಿಮಾ ಇತಿಹಾಸದಲ್ಲೇ ಇವರಿಗೇ ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.

ಹಿಂದೆಯೂ ಹಲವಾರು ಭಾರಿ ಮಹಾಭಾರತವನ್ನು ಬೆಳ್ಳಿತೆರೆಗೆ ತರಲು ಬಹಳಷ್ಟು ಮಂದಿ ಪ್ರಯತ್ನಿಸಿದ್ದಾರೆ. ಆದರೆ ಇದರಲ್ಲಿ ಯಶಸ್ಸು ಸಿಕ್ಕಿರುವುದು ವಿರಳ. ಇದಕ್ಕೆ ಕಾರಣ, ಇದೊಂದು ಸುದೀರ್ಘ‌ ಕಥೆಯಾಗಿರುವುದು. ಆದರೆ ಆಧುನಿಕ ಕಾಲಘಟ್ಟದಲ್ಲಿ ಭಾರಿ ಪ್ರಮಾಣದ ಹಣ ಹಾಕಿ, ಚಿತ್ರ ನಿರ್ಮಿಸಲು ಹೊರಟಿರುವುದು ಇದೇ ಮೊದಲ ಬಾರಿ ಎಂದು ಹೇಳಬಹುದು.

ಬಿ.ಆರ್‌. ಶೆಟ್ಟಿ ಅವರು, ಜಾಗತಿಕ ಮಟ್ಟದ ಪ್ರೇಕ್ಷಕರಿಗಾಗಿ ರಂಡಮೋಳಮ್‌ ಕಾದಂಬರಿಯ ಹೂರಣವನ್ನು ಗುರುತಿಸಿ ಚಿತ್ರ ಮಾಡುತ್ತಿರುವ ವಿಚಾರ ನನಗೆ ಖುಷಿ ತಂದಿದೆ.
– ಎಂ.ಟಿ. ವಾಸುದೇವನ್‌ ನಾಯರ್‌, ಜ್ಞಾನಪೀಠ ಪುರಸ್ಕೃತ ಸಾಹಿತಿ

ಅತ್ಯಂತ ಉತ್ಕೃಷ್ಟ ನಿರ್ಮಾಣ ಮತ್ತು ದೃಶ್ಯದ ಶ್ರೀಮಂತಿಕೆಯ ಜತೆಗೆ ನಿರೂಪಣೆಯಲ್ಲೂ ಮಾಂತ್ರಿಕತೆ ಸೃಷ್ಟಿಸಿ ಚಿತ್ರವನ್ನು ನಿರ್ಮಾಣ ಮಾಡುತ್ತೇವೆ.
– ಶ್ರೀಕುಮಾರ್‌ ಮೆನನ್‌, ನಿರ್ದೇಶಕ

– ಕನ್ನಡ, ಮಲೆಯಾಳಂ, ಇಂಗ್ಲಿಷ್‌, ಹಿಂದಿ, ತಮಿಳು, ತೆಲಗು ಭಾಷೆಯಲ್ಲಿ ನಿರ್ಮಾಣ
– ಚಿತ್ರಕ್ಕೆ ಕನ್ನಡಿಗ ಬಿ.ಆರ್‌. ಶೆಟ್ಟಿ ಅವರಿಂದ ಹಣ ಹೂಡಿಕೆ
– ಮಲಯಾಳಂನ ಜ್ಞಾನಪೀಠ ಪುರಸ್ಕೃತ ಸಾಹಿತಿ ಎಂ.ಟಿ. ವಾಸುದೇವನ್‌ ಕಥೆ ಆಧರಿತ
– ವಿ.ಎ. ಶ್ರೀಕುಮಾರನ್‌ ನಿರ್ದೇಶನದಲ್ಲಿ ಮೂಡಿಬರಲಿದೆ ಸಿನಿಮಾ
– 2018ರ ಸೆಪ್ಟೆಂಬರ್‌ನಿಂದ ನಿರ್ಮಾಣ ಶುರು, 2020ಕ್ಕೆ ರಿಲೀಸ್‌
– ಎರಡು ಭಾಗಗಳಲ್ಲಿ ಬರಲಿದೆ ಅದ್ಧೂರಿ ಸಿನಿಮಾ
– ಮೊದಲನೇ ಭಾಗ ರಿಲೀಸ್‌ ಆದ 90 ದಿನಗಳಲ್ಲೇ 2ನೇ ಭಾಗವೂ ಬಿಡುಗಡೆ

Advertisement

Udayavani is now on Telegram. Click here to join our channel and stay updated with the latest news.

Next