Advertisement

ಹೂಡಿಕೆ ಕಥೆ! ಮ್ಯೂಚುವಲ್ ಫಂಡ್ ನ ಸಿಪ್ ಮ್ಯಾಜಿಕ್ ಅಂದ್ರೆ ಏನು ?

12:35 PM Apr 23, 2018 | udayavani editorial |

ಎಲ್ಲ ಹೂಡಿಕೆಗಳ ಪೈಕಿ ಈಕ್ವಿಟಿ ಶೇರುಗಳಲ್ಲಿನ ಹೂಡಿಕೆಯೇ ಅತ್ಯಧಿಕ ಇಳುವರಿ ತರುತ್ತದೆ ಎಂದು ಹೇಳಿದರೆ ಸಾಮಾನ್ಯವಾಗಿ ಯಾರೂ ನಂಬುವುದಿಲ್ಲ.

Advertisement

ಅದಕ್ಕೆ ಕಾರಣವೇ ಶೇರು ಮಾರುಕಟ್ಟೆಯಲ್ಲಿನ ಏರಿಳಿತ. ಆದರೆ ಈ ಏರಿಳಿತಗಳಿಂದ ಕಂಗಾಲಾಗಿ ಕೈ ಸುಟ್ಟುಕೊಳ್ಳುವವರು ಕಿರು ಅವಧಿಯ ಹೂಡಿಕೆದಾರರೇ ಹೊರತು ದೀರ್ಘಾವಧಿಯ ಹೂಡಿಕೆದಾರರು ಅಲ್ಲ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ದೀರ್ಘಾವಧಿಯ ಹೂಡಿಕೆದಾರರಿಗೆ ಶೇರು ಮಾರುಕಟ್ಟೆಯಲ್ಲಿನ ದೈನಂದಿನ ಏರಿಳಿತಗಳಿಂದ ಯಾವುದೇ ಬಾಧೆ ಇಲ್ಲ; ಆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ.

ಅದೇಕೆ ಎಂದು ನೀವು ಪ್ರಶ್ನಿಸಬಹುದು. ಶೇರುಗಳು ಬಿದ್ದಾಗಲೇ ಅವುಗಳನ್ನು ಖರೀದಿಸಬೇಕು; ಅದು ಗಗನ ಮುಖಿಯಾದಾಗಲೇ ಮಾರಬೇಕು ಎಂಬುದು ಸಾಮಾನ್ಯ ತತ್ವ. ಈ ತತ್ವವನ್ನು ಕಡ್ಡಾಯವಾಗಿ ಅನುಸರಿಸುವವರು ಮಾತ್ರವೇ ಶೇರು ಮಾರುಕಟ್ಟೆಯಲ್ಲಿ ಲಾಭ ಮಾಡಬಹುದು.

ಇದಕ್ಕೆ ಬೇಕಿರುವುದು ಸಹನೆ, ತಾಳ್ಮೆ ಮತ್ತು ದೂರದೃಷ್ಟಿ !  ಈ ಗುಣಗಳು ಇಲ್ಲದವರು ನಿಜವಾದ ಅರ್ಥದಲ್ಲಿ ದೀರ್ಘಾವಧಿಯ ಹೂಡಿಕೆದಾರರು ಆಗಲು ಸಾಧ್ಯವಿಲ್ಲ.  ಶೇರು ಮಾರುಕಟ್ಟೆಯಲ್ಲಿ ಖರೀದಿಗೂ ಒಂದು ಕಾಲವಿದೆ; ಮಾರಾಟಕ್ಕೂ ಒಂದು ಕಾಲವಿದೆ. ಇದನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಬೇಕಾಗುತ್ತದೆ. 

ಶೇರುಗಳ ಏರಿಳಿತಗಳು, ನಷ್ಟಗಳು, ಅಸ್ಥಿರತೆ ಇತ್ಯಾದಿಗಳ ಬಗ್ಗೆ ತಲೆ ಕೆಡಸಿಕೊಳ್ಳುವುದು ಬೇಡ ಎನ್ನುವವರಿಗೆ ಮ್ಯೂಚುವಲ್  ಫಂಡ್ ಸ್ಕೀಮ್ಗಳು ಅತ್ಯಂತ ಆಕರ್ಷಕ, ಸುಭದ್ರ. ಆದರೆ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಕೂಡ ದೀರ್ಘಾವಧಿಯ ಉದ್ದೇಶದೊಂದಿಗೆ ಮಾಡಬೇಕು; ಇಲ್ಲದಿದ್ದರೆ ಅಲ್ಲಿಯೂ ಲಾಭ ಮಾಡಲಾಗದು.

Advertisement

ಆದರೆ ದೀರ್ಘಾವಧಿಯ ಹೂಡಿಕೆ ತತ್ವವನ್ನು ಅನುಸರಿಸಿದರೆ ಮ್ಯೂಚುವಲ್ ಫಂಡ್ ಮೂಲಕ ಸಿಗುವ ಸಿರಿ ಸಂಪತ್ತು ಅಪಾರ ! ಅದು ಹೇಗೆ ಎನ್ನುವಿರಾ ? ಅದುವೇ ಸಿಎಜಿಆರ್ ಮ್ಯಾಜಿಕ್ ! ಸಿಎಜಿಆರ್ ಎಂದರೆ : ಕಾಂಪೌಂಡೆಡ್ ಆ್ಯನುವಲ್ ಗ್ರೋತ್ ರೇಟ್. ನೀವು ಹೂಡುವ ಹಣ ವರ್ಷದಿಂದ ವರ್ಷಕ್ಕೆ 2 ಪಟ್ಟು, 4 ಪಟ್ಟು, 6 ಪಟ್ಟು, 12 ಪಟು, 24 ಪಟ್ಟು, 48 ಪಟ್ಟು – ಹೀಗೆ ಬೆಳೆಯುತ್ತಾ ಹೋಗುವುದೇ ಸಿಎಜಿಆರ್ ನಿಯಮದ ಗುಟ್ಟು. 

24ರ ಹರೆಯದ ರೋಹಿತ್ ಎಂಬ, ಈಗಷ್ಟೇ ಉದ್ಯೋಗಕ್ಕೆ ಸೇರಿದ, ತರುಣನೋರ್ವನ ಉದಾಹರಣೆಯನ್ನು ಇಲ್ಲಿ ಕೊಡಬಹುದು : 

ರೋಹಿತ್‌ ಗೆ ತೆರಿಗೆಗಳನ್ನೆಲ್ಲ ಕಳೆದು ತಿಂಗಳಿಗೆ 20,000 ರೂ. ಕೈಗೆ ಸಿಗುವ ಆಕರ್ಷಕ ಉದ್ಯೋಗವಿದೆ. ಆದರೆ ಪ್ರಾಯದೋಷದಿಂದಾಗಿ ಆತ ಕೈಗೆ ಸಿಕ್ಕಿದ ಹಣವನ್ನೆಲ್ಲ ತನ್ನ ಶೋಕಿನ ಜೀವನ ಶೈಲಿಗಾಗಿ ಖರ್ಚು ಮಾಡುತ್ತಾನೆ. ಹಾಗಾಗಿ ಸಹಜವಾಗಿಯೇ ತಿಂಗಳಾಂತ್ಯದಲ್ಲಿ ಆತನ ಕೈಯಲ್ಲಿ ಏನೂ ಉಳಿಯುವುದಿಲ್ಲ. ಸ್ನೇಹಿತರ ಬಳಿ ಸಾಲಕ್ಕೆ ಕೈಯೊಡ್ಡುವ ಪರಿಸ್ಥಿತಿ !

ರೋಹಿತನಿಗೊಬ್ಬ ಒಳ್ಳೆಯ ಸ್ನೇಹಿತನಿದ್ದಾನೆ. ಆತ ಸದಾ ಉಳಿತಾಯದ ಮಂತ್ರವನ್ನು ಜಪಿಸುತ್ತಿರುತ್ತಾನೆ ಮತ್ತು ರೋಹಿತನಿಗೆ ಅದನ್ನು ಬೋಧನೆ ಮಾಡುತ್ತಿರುತ್ತಾನೆ. “ನೀನು ದಿನಕ್ಕೆ ಕೇವಲ 75 ರೂ. ಉಳಿಸಬಲ್ಲೆಯಾ ಹೇಳು; 20 ವರ್ಷದಲ್ಲಿ ನಿನ್ನ ಉಳಿತಾಯ ಯಾವ ಗಾತ್ರಕ್ಕೆ ಬೆಳೆಯುತ್ತದೆ ಎಂದು ಹೇಳಿದರೆ ನೀನು ನಂಬಲಿಕ್ಕಿಲ್ಲ’ ಎಂದು ಆತ ರೋಹಿತನಿಗೆ ಹೇಳುತ್ತಾನೆ. ರೋಹಿತ್ ಕೊನೆಗೂ ದಿನಕ್ಕೆ 75 ರೂ. ಉಳಿಸಲು ತೀರ್ಮಾನಿಸುತ್ತಾನೆ. 

ಹೀಗೆ ದಿನಂಪ್ರತಿ ಉಳಿಸಿದ 75 ರೂಪಾಯಿಗಳನ್ನು ರೋಹಿತ್, ತನ್ನ ಸ್ನೇಹಿತನ ಸಲಹೆಯ ಮೇರೆಗೆ ತಿಂಗಳಾಂತ್ಯದಲ್ಲಿ 2,250 ರೂ. ಆದಾಗ ಅದನ್ನು ಮ್ಯೂಚುವಲ್ ಫಂಡ್ ನ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ನಡಿ ಹೂಡಿಕೆ ಮಾಡುತ್ತಾನೆ. ಹೀಗೆ ತಿಂಗಳಿಗೆ 2,250 ರೂ. ಕಂತಿನ ಹೂಡಿಕೆ 20 ವರ್ಷಗಳ ವರೆಗೂ ನಿರಾಂತಕವಾಗಿ ಮತ್ತು ನಿರಂತರವಾಗಿ ಸಾಗುತ್ತದೆ. 

ಶೇ.15ರ ಇಳುವರಿ ಕೊಡುವ ಸಾಮಾನ್ಯ ಹೂಡಿಕೆಯಲ್ಲಿ ರೋಹಿತ್ ಹೂಡಿದ ಹಣ 20 ವರ್ಷಗಳ ಅಂತ್ಯಕ್ಕೆ 9 ಲಕ್ಷ ರೂ.ಗೆ ಬೆಳೆಯುತ್ತದೆ. ಆದರೆ ಮ್ಯೂಚುವಲ್ ಫಂಡ್ ನಲ್ಲಿ ಸಿಎಜಿಆರ್ ತತ್ವದಡಿ ರೋಹಿತ್ನ ತಿಂಗಳ 2,250 ರೂ.ಗಳ 20 ವರ್ಷಗಳ ಹೂಡಿಕೆಯು ಯಾವ ಪ್ರಮಾಣಕ್ಕೆ ಬೆಳೆಯುತ್ತದೆ ಎಂದು ನೀವು ಊಹಿಸಬಲ್ಲಿರಾ ? ಅಥವಾ ನಂಬಬಲ್ಲಿರಾ ?

ಅದು ಬರೋಬ್ಬರಿ 33,68.789 ರೂ. ಪ್ರಮಾಣಕ್ಕೆ ಬೆಳೆದಿರುತ್ತದೆ ! ಎಂದರೆ ದಿನವಹಿ 75 ರೂ.ಗಳ ಉಳಿತಾಯವು ಮ್ಯೂಚುವಲ್ ಫಂಡ್ ನ ಸಿಪ್ ಹೂಡಿಕೆಯಡಿ 20 ವರ್ಷಗಳ ಕಾಲದ ಹೂಡಿಕೆಯಲ್ಲಿ ಸರಿ ಸುಮಾರು 34 ಲಕ್ಷ ರೂ. ಪ್ರಮಾಣಕ್ಕೆ  ಬೆಳೆಯುತ್ತದೆ !

ಹೇಗಿದೆ ಮ್ಯೂಚುವಲ್ ಫಂಡ್ ನ ಸಿಪ್ ಮ್ಯಾಜಿಕ್ ?

Advertisement

Udayavani is now on Telegram. Click here to join our channel and stay updated with the latest news.

Next