ಕೋಟೇಶ್ವರ: ಪರಿಸರ ಸ್ವಚ್ಛತೆಗೆ, ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ನಮ್ಮ ಪೂರ್ವಿಕರಿಂದ ಬಂದ ಜೀವನಕ್ರಮಗಳು ಕಾಲ ಕಳೆದ ಹಾಗೆ ಬದಲಾಗುತ್ತಿವೆ. ಮೌಲ್ಯಯುತವಾದ ಬದುಕನ್ನು ಬಿಟ್ಟು ಐಶಾರಾಮಿ ಜೀವನಕ್ರಮದತ್ತ ಸಾಗುತ್ತಿರುವ ನಮ್ಮ ನಡೆ ಪರಿಸರಕ್ಕೆ ಹಾನಿಕಾರಕ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹೇಳಿದರು.
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಜಂಟಿ ಆಶ್ರಯದಲ್ಲಿ ಸೆ. 8ರಂದು ಕೋಟೇಶ್ವರ ದೇಗುಲದ ಸಭಾಭವನದಲ್ಲಿ ನಡೆದ ಸ್ವಚ್ಛ ಭಾರತ್ ದಿವಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ಆಯುಕ್ತ ಪ್ರವೀಣ ನಾಯಕ್ ಅವರು ಮಾತನಾಡಿ, ಸ್ವತ್ಛತೆಯ ಪರಿಕಲ್ಪನೆ ಸಾಕಾರಗೊಳ್ಳಲು ವಿದ್ಯಾರ್ಥಿ ದೆಸೆಯಲ್ಲಿ ಆ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕೆಂದರು.
ಉಡುಪಿ ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆಗಳ ತಹಶೀಲ್ದಾರ ಪ್ರಶಾಂತ ಕುಮಾರ್ ಶೆಟ್ಟಿ, ಕಾಳಾವರ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಎಸ್. ರಾಜೇಂದ್ರ ನಾಯಕ್, ದೈಹಿಕ ಶಿಕ್ಷಣ ನಿರ್ದೇಶಕ ಡಾ| ರಮೇಶ್, ಸಾಮಾಜಿಕ ಕಾರ್ಯಕರ್ತ ಕೋಣಿ ಕೃಷ್ಣದೇವ ಕಾರಂತ, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ ಅವರು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳ ಕರ್ತವ್ಯದ ಬಗ್ಗೆ ವಿವರಿಸಿದರು.
ಕೋಟೇಶ್ವರ ದೇಗುಲದ ಇಒ ಗಣೇಶ ರಾವ್, ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ. ಗೋಪಾಲಕೃಷ್ಣ ಶೆಟ್ಟಿ, ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ವಂದಿಸಿದರು. ಕಾಲೇಜಿನ ಎನ್ನೆಸ್ಸೆಸ್ ಘಟಕದ 150 ವಿದ್ಯಾರ್ಥಿಗಳು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಸಹಿತ ಪರಿಸರದ ಸ್ವತ್ಛತೆಯಲ್ಲಿ ಪಾಲ್ಗೊಂಡರು.