Advertisement

ಊಟದ ಬಿಲ್‌ 70 ರೂಪಾಯಿ ಕೊಡ್ಬೇಕು ಅಂದಿದ್ದರು!

07:30 AM Apr 03, 2018 | Team Udayavani |

ಎಸ್ಸೆಸ್ಸೆಲ್ಸಿ ಉತ್ತೀರ್ಣನಾದ ಬಳಿಕ ಒಂದು ವರ್ಷ ಪಿಯುಸಿ ಸಲುವಾಗಿ ಕಾಲೇಜಿಗೆ ಮಣ್ಣು ಹೊತ್ತ ನನಗೆ ಮನೆಯಲ್ಲಿನ ಇರಿಸುಮುರಿಸಿನ ವಾತಾವರಣದಿಂದ ಬೇಸರವಾಗಿ ಒಂದು ದಿನ ಇದ್ದಕ್ಕಿದ್ದಂತೆ ಮನೆ ಬಿಟ್ಟು ದಾವಣಗೆರೆಗೆ ಉದ್ಯೋಗ ಅರಸಿ ಹೊರಟೆ. ಆಗ ನನಗಿನ್ನೂ 18 ವರ್ಷ. ತುಟಿಯ ಮೇಲೆ ಚಿಗುರು ಮೀಸೆ ಬಂದಿದ್ದ ಕಾಲ.

Advertisement

ದಾವಣಗೆರೆಯ ಜಿಲ್ಲಾ ಪತ್ರಿಕಾಲಯವೊಂದರಲ್ಲಿ ಕೆಲಸ ಕೇಳ್ಳೋಣವೆಂದು ಅಲ್ಲಿನ ಉಪ ಸಂಪಾದಕ ಹಳೇಬೀಡು ಕೃಷ್ಣಮೂರ್ತಿಯವರನ್ನು ಭೇಟಿಯಾದೆ. ಅವರು ತಮ್ಮ ಕಚೇರಿಯಲ್ಲಿ ಸದ್ಯಕ್ಕೆ ಯಾವುದೇ ಕೆಲಸ ಖಾಲಿಯಿಲ್ಲವೆಂದು ಕೈಯಾಡಿಸಿದಾಗ ಮುಖದಲ್ಲಿ ಮೂಡಿದ್ದು ಹತಾಶೆಯ ಭಾವ. ನನ್ನ ಪೆಚ್ಚುಮೋರೆಯನ್ನು ನೋಡಿಯೋ ಏನೋ ಅವರು “ನನ್ನ ಸ್ನೇಹಿತರೊಬ್ಬರ ಆಟೊಮೊಬೈಲ್‌ ಅಂಗಡಿಯಲ್ಲಿ ಕೆಲಸವಿದೆ. ಸೇರುತ್ತೀಯಾ?’ ಎಂದು ಕೇಳಿದರು. ಹಿಂದೆಮುಂದೆ ಯೋಚಿಸದೆ “ಹೂಂ’ ಎಂದು ಉಲಿದೆ.

ಅವರಿಂದ ವಿಳಾಸ ಪಡೆದು, ಪಿ.ಬಿ. ರಸ್ತೆಯ ವಿಜಯ ಟ್ರೇಡರ್ ಎಂಬ ಆಟೊಮೊಬೈಲ್‌ ಅಂಗಡಿಯನ್ನು ಹುಡುಕಿ ಅದರ ಮಾಲೀಕ ಆರ್‌.ಎಸ್‌. ನಾಗಭೂಷಣ್‌ ಅವರನ್ನು ಕಂಡು ವಿಷಯ ತಿಳಿಸಿದೆ. ಅವರು ಮರುಮಾತಿಲ್ಲದೆ “ಇಂದಿನಿಂದಲೇ ಸೇಲ್ಸ್‌ಬಾಯ್‌ ಕೆಲಸಕ್ಕೆ ಸೇರು’ ಎಂದು ಹೇಳಿದರು. ಬ್ಯಾಂಕ್‌ಗೆ ಹೋಗಿ ಚೆಕ್‌ ಕಟ್ಟಿ ಬರುವ, ಲಾರಿ ಕಚೇರಿಯಿಂದ ಸರಕು ಹೇರಿಸಿಕೊಂಡು ಬರುವ, ಎದುರಿನಲ್ಲೇ ಇದ್ದ ಹೋಟೆಲ್‌ನಿಂದ ದಿನಕ್ಕೆ ಎರಡು ಬಾರಿ ಕಾಫಿ ತಂದುಕೊಡುವ, ಗಿರಾಕಿ ಬಂದು ಕೇಳಿದ ವಸ್ತುವನ್ನು ಒಳಗಿನಿಂದ ತಂದುಕೊಟ್ಟು ಬಿಲ್‌ ಹಾಕಿಕೊಡುವ ಕೆಲಸಗಳು ನನ್ನ ಪಾಲಿಗೆ ಬಂದವು.

ಕೆಲಸವೇನೋ ಮೊದಲ ದಿನವೇ ಸಿಕ್ಕಿತು. ನಂತರ ನಮ್ಮ ದೊಡ್ಡಮ್ಮನ ಮನೆಗೆ ಹೋಗಿ “ಕೆಲಸ ಸಿಕ್ಕಿದೆ. ಇವತ್ತಿನಿಂದಲೇ ಹೋಗುತ್ತಿದ್ದೇನೆ. ನಿಮ್ಮ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶವಿದೆಯೇ?’ ಎಂದು ಕೇಳಿದೆ. ನಮ್ಮ ದೊಡ್ಡಪ್ಪ ಸಹೃದಯಿಯಾದರೂ ಮುಲಾಜಿಲ್ಲದೆ ನೇರವಾಗಿ ಮಾತಾಡುವ ಆಸಾಮಿ. “ತಿಂಗಳಿಗೆ 70 ರೂ. ಊಟದ ಬಾಬ್ತು ಕೊಡೋದಾದರೆ ನನ್ನ ಅಭ್ಯಂತರವೇನೂ ಇಲ್ಲ’ ಎಂದರು! ನನಗೆ ಇನ್ನೂ ಕೆಲಸಕ್ಕೆ ಸೇರಿದ ದಿನ. ಸಂಬಳ ಎಷ್ಟು ಎಂದು ಅವರು ಹೇಳೇ ಇಲ್ಲ, ಹೀಗಿರುವಾಗ ದೊಡ್ಡಪ್ಪ ಮೆಸ್‌ನವರು ಹೇಳುವಂತೆ ದುಡ್ಡು ಫಿಕ್ಸ್‌ ಮಾಡಿಬಿಟ್ಟರಲ್ಲ? ನನಗೆ ತುಂಬಾ ಕಡಿಮೆ ಸಂಬಳ ಸಿಕ್ಕಿದರೆ ಏನು ಮಾಡೋದು ಎಂಬ ಚಿಂತೆ ಕಾಡಿತು. ಹಾಗೇ ಒಂದು ತಿಂಗಳು ಕಳೆಯಿತು. ನಾಗಭೂಷಣ್‌ ಅವರು ಮೂರನೇ ತಾರೀಖು ಬಂದ ಕೂಡಲೇ, ನೂರಾ ಮೂವತ್ತು ರೂ.ಗಳನ್ನು ನನ್ನ ಮೊದಲ ಸಂಬಳವೆಂದು ನೀಡಿದಾಗ ಮೊದಲ ಗಳಿಕೆಯ ಹಣವನ್ನು ಕಂಡು ಕಣ್ಣಾಲಿಗಳು ತುಂಬಿಬಂದವು. 

ಈಗ ಎಷ್ಟೇ ಸಂಬಳ ತೆಗೆದುಕೊಳ್ಳುತ್ತಿದ್ದರೂ, ಮೊದಲ ಸಂಬಳ ನೀಡಿದ ಅನನ್ಯ ಖುಷಿಗೆ ಅದು ಸಮನಾಗಲು ಸಾಧ್ಯವೇ ಇಲ್ಲ.

Advertisement

ಎಚ್‌.ಕೆ. ರಾಘವೇಂದ್ರ, ಕೋಲಾರ

Advertisement

Udayavani is now on Telegram. Click here to join our channel and stay updated with the latest news.

Next