Advertisement

ಲಿಂಗಾಯತ ಧರ್ಮದ ನಿಷ್ಠುರ ನಿಲುವು ಅಗತ್ಯ: ದತ್ತಾ

01:04 PM Oct 25, 2018 | |

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಖಚಿತ ಹಾಗೂ ಸ್ಪಷ್ಟ ನಿಲುವು ಹೊಂದಿದ್ದ ಗದುಗಿನ ತೋಂಟದಾರ್ಯ ಸ್ವಾಮೀಜಿಯರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಕೆಯಾಗಬೇಕಾದರೆ “ಲಿಂಗಾಯತ ಧರ್ಮವನ್ನು ಹಿಂದೂ ಧರ್ಮದ ಕಳಂಕಗಳಿಂದ ಮುಕ್ತ ಮಾಡುವ ಬಗ್ಗೆ
ನಿಷ್ಠುರವಾದ ನಿಲುವು ತೆಗೆದುಕೊಳ್ಳುವ ಅಗತ್ಯವಿದೆ’ ಎಂದು ಮಾಜಿ ಶಾಸಕ ವೈ.ಎಸ್‌.ವಿ.ದತ್ತಾ ಹೇಳಿದ್ದಾರೆ.

Advertisement

ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಗದುಗಿನ ತೋಂಟದಾರ್ಯ ಸಂಸ್ಥಾನ ಮಠದ ಡಾ. ಶ್ರೀ ತೋಂಟದ ಸಿದ್ಧಲಿಂಗ ಸ್ವಾಮಿಯವರ ಶ್ರದ್ಧಾಂಜಲಿ, ನುಡಿನಮನ-ಗೀತ ನಮನ ಕಾರ್ಯಕ್ರಮದಲ್ಲಿ ಸ್ವಾಮೀಜಿಗೆ ನುಡಿ ನಮನ ಸಲ್ಲಿಸಿ ಮಾತನಾಡಿದರು. 

ಲಿಂಗಾಯತ ಧರ್ಮದ ಬಗ್ಗೆ ಸ್ವತಂತ್ರವಾದ ಮತ್ತು ಸ್ಪಷ್ಟವಾದ ಧೋರಣೆ ತೋಂಟದಾರ್ಯ ಸ್ವಾಮೀಜಿಯವರಿಗೆ ಇತ್ತು. ಅದೇ ಸ್ಪಷ್ಟತೆ ಉಳಿದವರಿಗೆ ಬಂದಿಲ್ಲ. ಈಗ ಅವರು ನಮ್ಮ ನಡುವೆ ಇಲ್ಲದ ಸಂದರ್ಭದಲ್ಲಿ ಆ ಸ್ಪಷ್ಟತೆ ಮತ್ತಷ್ಟು ಗರಿಗೆದರಬೇಕಾಗಿದೆ. ಬಸವಣ್ಣ ಮತ್ತು ಅಲ್ಲಮ ಪ್ರಭುವಿನ ಉತ್ತರಾಧಿಕಾರಿಗಳು ಅಥವಾ ವಾರಸುದಾರರು ಎಂದು ಹೇಳಿಕೊಳ್ಳುವವರು ಈ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
 
ಲಿಂಗಾಯತ ಧರ್ಮದ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳ ಇಟ್ಟುಕೊಂಡು ಹಿಂದೂ ಧರ್ಮದ ಅವೈಚಾರಿಕ ಮತ್ತು ಅವೈಜ್ಞಾನಿಕ ಸಂಪ್ರದಾಯಗಳನ್ನು ಸ್ಪಷ್ಟವಾಗಿ ವಿರೋಧಿಸಿ, ಧಿಕ್ಕರಿಸದೇ ಹೋದರೆ ಬಸವಣ್ಣನ ಅನುಯಾಯಿಗಳು ಎಂದು ಕರೆಸಿಕೊಳ್ಳುವ ನೈತಿಕತೆ ಇರುವುದಿಲ್ಲ. ಲಿಂಗಾಯತ ಧರ್ಮದ ಬಗ್ಗೆ ಪ್ರಗತಿಪರ ವಿಚಾರ ಹಾಗೂ ವೈಚಾರಿಕ ಚಿಂತನೆ ಇಟ್ಟುಕೊಂಡು ವೈದಿಕ ಸಂಪ್ರದಾಯವನ್ನು 12ನೇ ಶತಮಾನದಲ್ಲಿ ವಿರೋಧಿಸಿದ್ದ ಬಸವಣ್ಣನ ತತ್ವಗಳಿಗೆ ತೋಂಟದಾರ್ಯರು ಮಾದರಿಯಾಗಿದ್ದರು ಎಂದರು.
 
ದೇವರ ದಾಸಿಯ್ಯ, ಡೊಹರ ಹಕ್ಕಯ್ಯ ಮುಂತಾದ ಹೆಸರುಗಳನ್ನು ಕೇವಲ ಪ್ರಾಸಕ್ಕೆ ಹೇಳಿಕೊಳ್ಳದೇ ಶೋಷಿತ ಸಮುದಾಯಗಳನ್ನು ತಮ್ಮವರೆಂಬ ಭಾವನೆ ಬಸವಣ್ಣನ ಧರ್ಮವನ್ನು ಗುತ್ತಿಗೆ ಪಡೆದ ಜಾತಿಯವರಿಗೆ ಬರಬೇಕು. ಸನಾತನವಾದವೇ ರಾಷ್ಟ್ರಭಕ್ತಿ ಹಾಗೂ ರಾಷ್ಟ್ರೀಯತೆಯ ಅಸ್ಮಿತೆ ಎಂದು ಹೇಳಿಕೊಳ್ಳುವ ಈ ಸಂದರ್ಭದಲ್ಲಿ ಹಿಂದೂ ಧರ್ಮದ ಕಳಂಕಗಳನ್ನು ವಿರೋಧಿಸುವ ನೇರ ನಿಷ್ಟುರತೆ ಅಲ್ಲದಿದ್ದರೂ ಸಹಿಸಿಕೊಳ್ಳುವ ಹೃದಯವಂತಿಕೆ ಇರಬೇಕು ಎಂದು ತಿಳಿಸಿದರು.

ಕೂಡಲಸಂಗಮ ಕ್ಷೇತ್ರದ ಪಂಚಮಸಾಲಿ ಲಿಂಗಾಯತ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಬೇಲಿಮಠದ ಶಿವರುದ್ರಮಹಾಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌, ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ, ಸಾಹಿತಿ ಡಾ. ಗೊ.ರು. ಚನ್ನಬಸಪ್ಪ, ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಸಾದರ ನುಡಿನಮನ ಸಲ್ಲಿಸಿದರು. ಗಾಯಕರಾದ ರವೀಂದ್ರ ಸೊರಗಾವಿ ಹಾಗೂ ಸಂಗೀತ ಕಟ್ಟಿ ಕುಲಕರ್ಣಿ ಗೀತ ನಮನ ಸಲ್ಲಿಸಿದರು. ಕೆ.ವಿ. ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next