ಸಾಮಾನ್ಯವಾಗಿ ಪ್ರತಿಯೊಬ್ಬರ ಲೈಫಲ್ಲಿ ಒಂದಿಲ್ಲೊಂದು ಲವ್‌ಸ್ಟೋರಿ ಇದ್ದೇ ಇರುತ್ತೆ. ಕೆಲವರಿಗೆ ತಡವಾಗಿಯಾದರೂ ಲವ್ ಸೆಟ್ಟೇರಿರುತ್ತೆ. ಇನ್ನೂ ಕೆಲವರಿಗೆ ಬೇಗನೆ ಸೆಟ್ ಆಗಿ ಬ್ರೇಕಪ್ ಕೂಡ ಆಗಿಬಿಡುತ್ತೆ. ಈಗ ಇಲ್ಲೇಕೆ ಲವ್‌ಸ್ಟೋರಿ ವಿಷಯ ಎಂಬ ಪ್ರಶ್ನೆ ಎದುರಾಗಬಹುದು. ವಿಷಯ ಇದೆ. ಉತ್ತರ ಕರ್ನಾಟಕದ ಒಂದಷ್ಟು ಪ್ರತಿಭೆಗಳೆಲ್ಲಾ ಸೇರಿ, ಒಂದು ಸಿನಿಮಾ ಮಾಡಿದ್ದಾರೆ. ಅದಕ್ಕೆ “ಲೈಟಾಗಿ ಲವ್ವಾಗಿದೆ’ ಎಂದು ಹೆಸರಿಡಲಾಗಿದೆ. ಈಗಾಗಲೇ ಚಿತ್ರ ಮುಗಿಸಿರುವ ಚಿತ್ರತಂಡ, ಆ ಕುರಿತು ಒಂದಷ್ಟು ವಿಷಯ ಹಂಚಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಆಗಮಿಸಿತ್ತು.
ಮೊದಲು ಮಾತಿಗಿಳಿದದ್ದು ನಿರ್ದೇಶಕ ಗುರುರಾಜ ಗದಾಡಿ. ಇವರಿಗೆ ಇದು ಮೊದಲ ಚಿತ್ರ. ಹಾಗಂತ, ಸಿನಿಮಾ ಅನುಭವ ಇಲ್ಲವೆಂದಲ್ಲ, ಹಿಂದೆ ಕ್ಯಾಸೆಟ್ ಇರುವ ಕಾಲದಲ್ಲಿ ಜನಪದ ಗೀತೆಗಳಿಗೆ ಸಾಹಿತ್ಯ ಒದಗಿಸಿದ್ದವರು. ಕಿರುಚಿತ್ರ ನಿರ್ದೇಶನವನ್ನೂ ಮಾಡಿದ್ದರು. ಈಗ “ಲೈಟಾಗಿ ಲವ್ವಾಗಿದೆ’ ಚಿತ್ರ ಮಾಡಿದ್ದಾರೆ. ಅವರೇ ಹೇಳುವಂತೆ, “ಇದೊಂದು ಪಕ್ಕಾ ಲವ್‌ಸ್ಟೋರಿ ಸಿನಿಮಾ. ಅದರಲ್ಲೂ ಪ್ರೀತಿ ಮಾಡಿದರೆ, ಮೋಸ ಮಾಡುವುದಲ್ಲ. ತುಂಬಾ ಪ್ರಾಮಾಣಿಕವಾಗಿ ಪ್ರೀತಿಸಿ, ಅದನ್ನು ಉಳಿಸಿಕೊಳ್ಳಬೇಕು. ಲವ್ ಆಗೋದು ಕಷ್ಟ. ಆದ ಬಳಿಕ ಹೇಗೆ ಅದನ್ನು ಕಾಪಾಡಿಕೊಳ್ಳಬೇಕು, ಲೈಟಾಗಿ ಲವ್ ಆದಂತಹವರ ತಳಮಳ ಹೇಗೆಲ್ಲಾ ಇರುತ್ತೆ ಎನ್ನುವುದು ಚಿತ್ರದ ಹೈಲೈಟ್’ ಎನ್ನುತ್ತಾರೆ ನಿರ್ದೇಶಕರು.
ಬೆಳಗಾವಿ, ಕೊಪ್ಪಳ್ಳ, ಬೆಂಗಳೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ಇತರೆ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಇನ್ನು, ಚಿತ್ರಕ್ಕೆ ಚೇತನ ಚನ್ನಪ್ಪ ಹುದ್ದಾರ ಹೀರೋ. ಇವರು ಸರಿಗಮಪ ಸೀಸನ್ 11 ರ ವಿಜೇತ. ಅವರಿಲ್ಲಿ ಗೋಕಾಕ್ ಹುಡುಗನಾಗಿ ಕಾಣಿಸಿಕೊಂಡರೆ, ನಾಯಕಿಯಾಗಿ ದಿವ್ಯಾ ಅವರಿಗೆ ಇದು ಮೊದಲ ಅನುಭವ. ಎರಡನೇ ನಾಯಕಿಯಾಗಿ ಶ್ವೇತಾ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಆಕಾಶ್ ಪರ್ವ ಸಂಗೀತವಿದೆ. ಸಂಜಯ್ ಕುಮಾರ್ ಹಾಗೂ ಕಿನ್ನಾಳ ರಾಜ್ ಸಾಹಿತ್ಯವಿದೆ. ಚಿತ್ರದಲ್ಲಿ ಸಚ್ಚಿನ್ ತಿಮ್ಮಯ್ಯ, ಪ್ರದೀಪ್ ತಿಪಟೂರು, ಅನ್ವಿತಾ, ಯಲ್ಲೇಶ್ ಕುಮಾರ್, ಚೈತ್ರಾ ಹಿರೇಮಠ, ರತಿಕಾ, ಅಂಕಿತಾ, ಸೋನಿ ಸೇರಿದಂತೆ ಇತರರು ನಟಿಸಿದ್ದಾರೆ.
ಚಿತ್ರಕ್ಕೆ ಅಯ್ಯರ್ ಸ್ವಾಮಿ ಸಂಭಾಷಣೆ ಜೊತೆಗೆ ಸಂಕಲನ ಮಾಡಿದ್ದಾರೆ. ಶಿವಪುತ್ರ ಛಾಯಾಗ್ರಹಣವಿದೆ. ರಾಜು ಕೊಟ್ಯಾನ್ ಸಾಹಸವಿದೆ. ಅಂದಹಾಗೆ, ಲಹರಿ ವೇಲು, ಚಿತ್ರದ ಹಾಡುಗಳ ಹಕ್ಕು ಖರೀದಿಸಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್‌ರಾಮ್ ಹೊಸಬರನ್ನು ಪ್ರೋತ್ಸಾಹಿಸುವ ಸಲುವಾಗಿ, ಚಿತ್ರದ ಆಡಿಯೋ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಚಿತ್ರವನ್ನು ಎನ್.ಆರ್.ರಜಪೂತ, ಕಿಶೋರ್‌ಭಟ್, ಶಫೀಕ್ ಸನದಿ ನಿರ್ಮಿಸಿದ್ದಾರೆ. ಸದ್ಯಕ್ಕೆ ಸೆನ್ಸಾರ್‌ಗೆ ಚಿತ್ರ ರೆಡಿಯಾಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಶೀಘ್ರವೇ ಚಿತ್ರ ಬಿಡುಗಡೆಯಾಗಲಿದೆ.