Advertisement
ರಾಮಣ್ಣ ಗೌಡರಿಗೆ ಈಗ ಅರುವತ್ತು ವರ್ಷ ದಾಟಿದೆ. ಆದರೆ ಅವರ ಜೀವನೋತ್ಸಾಹ, ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೀತಿ ಇಪ್ಪತ್ತೈದರ ಯುವಕರನ್ನು ನಾಚಿಸುವಂತಿದೆ. ಎಂಬತ್ತರ ದಶಕದಿಂದ ಈವರೆಗೆ ತರಕಾರಿ ಕೃಷಿಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡಿರುವ ಗೌಡರು ಇಂದಿಗೂ ಅದೇ ಉತ್ಸಾಹದಲ್ಲಿ ತನ್ನ ಮನೆಯ ಸುತ್ತ ಸುಮಾರು ಒಂದು ಎಕ್ರೆ ಪ್ರದೇಶದಲ್ಲಿ ಹಲವು ಬಗೆಯ ತರಕಾರಿ ಬೆಳೆದಿದ್ದಾರೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ನಿರಂತರವಾಗಿ ತರಕಾರಿ ಬೆಳೆಯುತ್ತಿದ್ದು, ಎರಡೂ ಅವಧಿಯಲ್ಲಿ ತರಕಾರಿಯಿಂದ ಲಾಭಗಳಿಸುತ್ತಾರೆ.
ಈ ಬಾರಿ ಮುಳ್ಳು ಸೌತೆಕಾಯಿ ಪ್ರಮುಖವಾಗಿದೆ. ಅಡಿಕೆ ಸಸಿ ನಾಟಿ ಮಾಡಿರುವ ಮಧ್ಯೆ ಸುಮಾರು 70 ಬುಡ ಸೌತೆ ಬಳ್ಳಿ ಬೆಳೆದು ಇದೀಗ ಸೌತೆ ಕಾಯಿಬಿಟ್ಟು ಮಾರಾಟಕ್ಕೆ ಸಿದ್ಧಗೊಂಡಿದೆ. ಈ ಬಾರಿ ಸೌತೆ ಕಾಯಿ ಅಧಿಕ ಇಳುವರಿಯನ್ನೇ ನೀಡಿದೆ. ವಾರಕ್ಕೊಮ್ಮೆ ಸೌತೆಕಾಯಿ ಮಾರಾಟ ಮಾಡುತ್ತಾರೆ. ಮಿಶ್ರ ಬೆಳೆಯಾಗಿ, ಹಾಗಲಕಾಯಿ, ಬೆಂಡೆ, ಬದನೆ, ಬಸಳೆ, ಹೀರೆಯ ಬಳ್ಳಿಯನ್ನು ನೆಟ್ಟಿದ್ದು ಕಾಯಿ ಕಟ್ಟುವ ಹಂತದಲ್ಲಿದೆ. ಅಲ್ಲದೆ ವೀಳ್ಯದ ಬಳ್ಳಿ ನಾಟಿ ಮಾಡಲಾಗಿದೆ. ಮಳೆಗಾಲದಲ್ಲಿ ಇಷ್ಟೊಂದು ತರಕಾರಿ ಬೆಳೆದರೆ ಬೇಸಿಗೆಯಲ್ಲಿ ಕೂಡ ಇದಕ್ಕೆ ಕಮ್ಮಿಯಿಲ್ಲದಂತೆ ಹಲವು ಬಗೆಯ ತರಕಾರಿ ಬೆಳೆಯುತ್ತಾರೆ. ಮುಖ್ಯವಾಗಿ ಒಡ್ಡು ಸೌತೆ, ತೊಂಡೆ ಬಸಳೆ ಹಾಗೂ ಹೀರೆಯನ್ನು ಬೇಸಿಗೆಯಲ್ಲೂ ಬೆಳೆದು ಬಂಪರ್ ಬೆಳೆ ಹಾಗೂ ಬೆಲೆ ಪಡೆಯುತ್ತಾರೆ. ಇಷ್ಟೊಂದು ತರಕಾರಿ ಬೆಳೆದರೂ ಇವರು ಯಾವುದೇ ಕೂಲಿಯಾಳುಗಳನ್ನು ಇಟ್ಟುಕೊಂಡಿಲ್ಲ. ಇಳಿವಯಸ್ಸಿನಲ್ಲೂ ಎಲ್ಲ ಕಾರ್ಯಗಳನ್ನು ಒಬ್ಬರೇ ಮಾಡುತ್ತಾ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
Related Articles
ಕೃಷಿ ತೋಟ ಮಾಹಿತಿ ಕೇಂದ್ರವಾಗಿ ಬದಲಾಗಿದೆ. ಕೆಲ ದಿನಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ಧನ ಎಸ್, ವಲಯ ಮೇಲ್ವಿಚಾರಕ ಬಾಬು, ಸೇವಾ ಪ್ರತಿನಿಧಿ ರೇಖಾ ಭೇಟಿ ನೀಡಿದ್ದಾರೆ. ತರಕಾರಿಯಿಂದ ತಿಂಗಳಿಗೆ 15,000 ಆದಾಯ ಪಡೆಯುತ್ತಿದ್ದು, 800 ಅಡಿಕೆ ಗಿಡ, 200 ರಬ್ಬರ್ ಬಾಳೆ, ಕರಿಮೆಣಸು ಬೆಳೆದಿದ್ದಾರೆ. ಒಟ್ಟಿಗೆ ಹೈನುಗಾರಿಕೆ ಕೂಡಾ ನಡೆಸುತ್ತಿದ್ದಾರೆ.
Advertisement
ತಾಜಾ ತರಕಾರಿ ಸೇವಿಸಿತರಕಾರಿ ಕೃಷಿ ನನಗೆ ಬದುಕು ಕಟ್ಟಿಕೊಟ್ಟಿದೆ. ತರಕಾರಿ ಕೃಷಿಯಲ್ಲಿ ಸೂಕ್ತ ಮಾಹಿತಿಯನ್ನು ಪಡೆದುಕೊಂಡು ಕೃಷಿ ಮಾಡಿದರೆ ನಷ್ಟ ಸಂಭವಿಸುವುದಿಲ್ಲ. ಶ್ರಮಪಟ್ಟು ದುಡಿದರೆ ತರಕಾರಿ ಕೃಷಿಯಲ್ಲಿ ಖಂಡಿತ ಲಾಭವಿದೆ. ಯುವಜನತೆ ಈಗ ಇಂತಹ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ಮನೆಯ ಖರ್ಚಿಗೆ ಬೇಕಾದಷ್ಟು ತರಕಾರಿ ಬೆಳೆದರೆ ತಾಜಾ ತರಕಾರಿ ಸೇವನೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು.
– ರಾಮಣ್ಣ ಗೌಡ •ಸದಾನಂದ ಆಲಂಕಾರು