ನಾವಿಬ್ಬರು ಚಂದಂಗ್ ಬದಕಾಕ್ ಏನ್ ಬೇಕೋ ಅದನ್ ಮಾಡ್ತೀನಿ. ನಾ ನಿಂಗ್ ಎಲ್ಲ ಕೊಡ್ತೀನಿ ಅಂತ ಹೇಳಲ್ಲ, ಆದ್ರ ನನ್ ಕಡೇ ಇರೋದೆಲ್ಲ ನಿಂಗ ಮೀಸಲು. ಅಲ್ಪ ಸ್ವಲ್ಪ ಕೊರತಿ ಆದ್ರ ನೀನ ಅನಸರಿಸಕೊಂಡ್ ಹೊಕ್ಕೀ ಅಂತ ನಂಗೊತ್ತೈತಿ.
“ಹ್ವಾಯ್.. ನಮಸ್ಕಾರ ಮಾರಾಯಿತಿ, ಎಂತ ಸಮಾಚಾರ?’.. ಇದು ನಾನು ನಿನ್ನನ್ನ ಕಂಡಾಗೆಲ್ಲ ಕೇಳ್ತಿದ್ದದ್ದು. ನೀನು ಮಂಗಳೂರು ಹುಡುಗಿ ಆಗಿದ್ದರಿಂದ ನಾನು ನಿಮ್ ಭಾಷೆದಾಗ ಮಾತಾಡ್ತಿದ್ದೆ. ಆದ್ರ ನೀನು “ಇಲ್ಲ ಮಾರ್ರೆ, ನೀವು ಹುಬ್ಬಳ್ಳಿ ಭಾಷೇಲೇ ಮಾತಾಡಿ’ ಅಂತಿದ್ದೆ. ನಾವು ಕಾಲೇಜಿನ್ಯಾಗ ಜೊತಿಗೆ ಇರತಿದ್ದಿವಿ. ಆವಾಗ ನಂಗ್ ಏನೂ ಅನಸಿದ್ದಿಲ್ಲ. ಈಗ ಕಾಲೇಜ… ಮುಗ್ಯಾಕತ್ತೈತಿ. ನಂಗ್ಯಾಕೋ ನಿನ್ ಬಿಟ್ಟ ಇರಾಕ್ ಆಗವಲ್ತ ಅನ್ಸಾಕತ್ತೇತಿ. ನಂಗೂ ಯಾಕೋ ನಿನ್ ಮೇಲೆ ಲೈಟಾಗಿ ಲವ್ ಆಗಿರೋ ಹಂಗೈತಿ. ನಾವ್ ಜೊತಿಗೆ ಕಳದಿದ್ ಸ್ವಲ್ಪ ದಿನ ಆದರೂ ನೀ ನಂಗ್ ಭಾಳ ಹಿಡಿಸಿಬಿಟ್ಟಿ. ಇಷ್ಟ ಆಗಾಕ ಜೊತಿಗೆ ಎ… ದಿನ ಇದ್ರೇನ? ಅರ್ಥ ಮಾಡ್ಕೊಳಾಕ ಮನಸ ಇರಬೇಕ ಅಷ್ಟ..
ನಿನ್ ನೆನಸ್ಕೊಂಡಾಗೆಲ್ಲ ಏನೋ ಒಂಥರಾ ಖುಷಿ ಆಕ್ಕೇತಿ, ನೀನ್ ಏನ್ ಅನ್ಕೊಂಡಿಯೋ ಏನೋ ನಂಗಂತೂ ಗೊತ್ತಿಲ್ಲ. ಆದ್ರ ನಾನಂತೂ ನಿನ್ ಭಾಳ ಹಚೊಡೀನಿ. ಕುಂತೂ, ನಿಂತೂ, ಊಟ ಮಾಡುವಾಗ, ಕೆಲಸ ಮಾಡುವಾಗ, ಎಲ್ಲಾ ಕಡೆನೂ ನೀನ ಮುಂದ್ ಬಂದ್ ನಿಂತಂಗ್ ಅಕ್ಕೇತಿ. ಬಿಟ್ಟು ಬಿಡಲಾರದಂಗ ಕಾಡಾಕತ್ತಿ. ಖರೆ ಹೇಳ್ತೀನಿ ಹಿಂದಕ ಯಾವತ್ತೂ ನಂಗ್ ಹಿಂಗ್ ಆಗಿದ್ದಿಲ್ಲ. ಮುಂದಕ ಆಕ್ಕೇತೋ ಇಲ್ಲೋ ಗೊತ್ತಿಲ್ಲ, ಈಗಂತೂ ಆಗಕತೈತಿ. ಅದಕ ಅದೇನರ ಆಗ್ಲಿ ನಮ್ಮವ್ವಗ ಈ ಜನ್ಮದಾಗ ನೀನ ಸೊಸಿ ಅಂತ ಡಿಸೈಡ್ ಮಾಡೇನಿ. ನಮ್ಮನಿಗೆ ನಿನಗಿಂತ ಚೊಲೊ ಸೊಸಿ ಸಿಗಲ್ಲ ಬಿಡ. ಹಂಗ ನಿಮ್ಮಪ್ಪಗ ನನಗಿಂತ ಅಳಿಯ ಎಲ್ಲಿ ಸಿಗತಾನ ಹೇಳು?..
ಎಲ್ಲ ಹುಡ್ಗಿರಂಗ ನಿಂಗೂ ಸುಳ್ಳು ಹೇಳ್ಳೋರಂದ್ರ ಆಗಲ್ಲ. ಅದಕ ನಾನು, ನಿನಗೋಸ್ಕರ ಅದನ್ ಮಾಡ್ತೀನಿ, ಇದನ್ ಮಾಡ್ತೀನಿ, ಚಂದ್ರನ ತಂದ್ ಕೊಡ್ತೀನಿ, ತಾಜ್ಮಹಲ್ ಕಟಿನಿ, ಗೋಲ್‌ಗುಂಬಜ್ ಕಟಿನಿ ಅಂತ ಎಲ್ಲಾರ್ ಹಂಗ್ ಮಾತಿನಾಗ ಮನಿ ಕಟ್ಟಂಗಿಲ್ಲ. ನಾವಿಬ್ಬರು ಚಂದಂಗ್ ಬದಕಾಕ್ ಏನ್ ಬೇಕೋ ಅದನ್ ಮಾಡ್ತೀನಿ. ನಿನ್ ತವರಮನಿ ನೆನಪ ಹಾರಬೇಕ್ ನೋಡ್ ಹಂಗ ನೋಡ್ಕೊಳಾಕ ಟ್ರೈ ಮಾಡ್ತೀನಿ. ನಾ ನಿಂಗ್ ಎಲ್ಲ ಕೊಡ್ತೀನಿ ಅಂತ ಹೇಳಲ್ಲ, ಆದ್ರ ನನ್ ಕಡೇ ಇರೋದೆಲ್ಲ ನಿಂಗ ಮೀಸಲು. ಅಲ್ಪ ಸ್ವಲ್ಪ ಕೊರತಿ ಆದ್ರ ನೀನ ಅನಸರಿಸಕೊಂಡ್ ಹೊಕ್ಕೀ ಅಂತ ನಂಗೊತ್ತೈತಿ.
ಕೊನೆಗೆ ಒಂದ್ ಮಾತ, ನೀನ್ ನಂಗ್ ಖಂಡಾಪಟ್ಟೆ ಇಷ್ಟ ಮಾರಾಯಿತಿ.
ಇಂತಿ ನಿನ್ನ ಹುಬ್ಬಳ್ಳಿ ಹುಡುಗ
ಈರಯ್ಯ ಉಡೇಜಲ್ಲಿ