ನಾವು ಮೆಚ್ಚುವ ನಾಯಕನೊಬ್ಬ ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಬದಲಾದಾಗ ನಮಗೆ ಹೇಗನಿಸುತ್ತದೆ? ಆತ ನಮ್ಮನ್ನು ವಂಚಿಸಿದಂತೆ ಅನಿಸುತ್ತದೆ, ಆತನ ಬಗ್ಗೆ ನಮಗೆ ಸಿಟ್ಟು , ಅಸಹಾಯಕತೆ, ಅಸಹ್ಯ ಉಂಟಾಗುತ್ತದೆ, ಪ್ರೀತಿ ದ್ವೇಷವಾಗಿ ಬದಲಾಗುತ್ತದೆ, ಬಯ್ದುಬಿಡುತ್ತೇವೆ, ನಿರಾಕರಿಸುತ್ತೇವೆ. ಕನ್ನಡದ ನವ್ಯಕಾವ್ಯದ ಅಧ್ವರ್ಯುವಾಗಿದ್ದ ಗೋಪಾಲಕೃಷ್ಣ ಅಡಿಗರು “ಜನಸಂಘ’ದ ವತಿಯಿಂದ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಹಲವು ಕ್ರಾಂತಿಕಾರಿ ಅಭಿಮಾನಿಗಳಿಗೆ ಹಾಗನಿಸಿದ ಉದಾಹರಣೆ ನಮ್ಮ ಮುಂದಿದೆ. ಹಲವಾರು ಕ್ಷೇತ್ರಗಳಲ್ಲಿ, ಮುಖ್ಯವಾಗಿ ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಇಂಥ ಘಟನೆಗಳು ಎÇÉೆಲ್ಲೂ ನಡೆಯುತ್ತ ಬಂದಿವೆ. ಇಂಗ್ಲಿಷ್ ಸಾಹಿತ್ಯದ ಒಂದು ಕುಖ್ಯಾತ ಉದಾಹರಣೆಯನ್ನು ಇಲ್ಲಿ ನೀಡಲು ಬಯಸುತ್ತೇನೆ. ಹೆಸರಾಂತ ವಿಕ್ಟೋರಿಯನ್ ಕವಿ ರಾಬರ್ಟ್ ಬ್ರೌನಿಂಗ್‌ನದು ಒಂದು ಕವಿತೆಯಿದೆ; The Lost Leader (ಕಳೆದು ಹೋದ ನಾಯಕ) ಎಂದು ಅದರ ಹೆಸರು; 1845ರ ಕವಿತೆ. ತಾನು ಮತ್ತು ತನ್ನ ಸಮಕಾಲೀನರು ನಂಬಿದ, ಅನುಸರಿಸಿದ ನಾಯಕನೊಬ್ಬ ತಮ್ಮ ವಿಶ್ವಾಸಕ್ಕೆ ಸರಿಯಾಗಿ ನಡೆದುಕೊಳ್ಳಲಿಲ್ಲ, ಬದಲು ಅದಕ್ಕೆ ವಿರುದ್ಧವಾಗಿ ಮಾರ್ಪಾಟಾದ ಎಂದು ಟೀಕಿಸುವ ಈ ಕವಿತೆ ಬಹಳ ನಾಟಕೀಯವಾಗಿ ಶುರುವಾಗುತ್ತದೆ:
Just for a handful of silver he left us,
Just for a riband to stick in his coat—
Found the one gift of which fortune bereft us,
Lost all the others she lets us devote;
ಕೇವಲ ಒಂದು ಹಿಡಿ ಬೆಳ್ಳಿ ನಾಣ್ಯಗಳಿಗೋಸ್ಕರ ಅವನು ನಮ್ಮನ್ನು ತೊರೆದ,
ತನ್ನ ಕೋಟಿಗೆ ಒಂದು ರಿಬ್ಬನ್ ಸಿಕ್ಕಿಸುವುದಕ್ಕಾಗಿ-
ಅದೃಷ್ಟ ನಮಗೆ ದಕ್ಕಿಸದ ಒಂದು ಉಡುಗೊರೆಯನ್ನು ಅವನು ಕಂಡ,
ಆದರೆ, ನಾವು ಮುಡಿಪಾಗಿರಿಸಬಹುದಾದ ಉಳಿದೆಲ್ಲವನ್ನು ಕಳಕೊಂಡ;
ಮೊದಲ ಸಾಲಲ್ಲಿ ಬರುವ a handful of silver ಎಂಬ ಪದಗುತ್ಛಕ್ಕೆ ಬಿಬ್ಲಿಕಲ್ ಉÇÉೇಖ ಇದೆ: ಜೂಡಾಸ್ ಎಂಬ ಶಿಷ್ಯ ಕ್ರಿಸ್ತುವನ್ನು ವಂಚಿಸಿದ್ದು ಕೆಲವು ಬೆಳ್ಳಿ ನಾಣ್ಯಗಳಿಗೋಸ್ಕರ (thirty pieces of silver). ಅದೃಷ್ಟ ನಮಗೆ ದಕ್ಕಿಸದ ಒಂದು ಉಡುಗೊರೆ ಎಂದರೆ ರಾಜ ಮರ್ಯಾದೆ. ಮೂವತ್ತೆರಡು ಸಾಲುಗಳ ಇಡೀ ಕವಿತೆ ಈ ಧಾಟಿಯಲ್ಲಿ ಮುಂದುವರಿಯುತ್ತದೆ. Shakespeare was of us, Milton was for us, / Burns, Shelley, were with us,—they watch from their graves! ಎಂಬ ಸಾಲುಗಳು ಬರುತ್ತವೆ. ಎಂದರೆ ಬ್ರೌನಿಂಗ್ ಉದ್ದೇಶಿಸುವುದು ಯಾವನೋ ನಾಯಕಸಮಾನ ಕವಿಯನ್ನು. ಅದು ಯಾರು? ಯಾರೆನ್ನುವುದು ಕವಿತೆಯಲ್ಲಿ ನೇರವಾಗಿ ಉÇÉೇಖವಾಗಿಲ್ಲ. ಆದರೆ ಸೂಕ್ಷ¾ವಾಗಿ ಓದಿದರೆ ಗೊತ್ತಾಗುತ್ತದೆ, ಅದು ಬೇರೆ ಯಾರೂ ಅಲ್ಲ, ಪ್ರಸಿದ್ಧ ರೊಮ್ಯಾಂಟಿಕ್ ಕವಿ ವಿಲಿಯಂ ವರ್ಡ್ಸ್‌ವರ್ತ್. ಇದೇನೂ ರಹಸ್ಯವಾಗಿ ಉಳಿದಿಲ್ಲ; ಸ್ವತಃ ಬ್ರೌನಿಂಗ್‌ನೇ ತನ್ನ ಈ ಕವಿತೆ ವರ್ಡ್ಸ್ ವರ್ತನನ್ನು ಅವಲಂಬಿಸಿ ಬರೆದುದು ಎನ್ನುವುದನ್ನು ಒಪ್ಪಿಕೊಂಡಿ¨ªಾನೆ. ಈ ಕವಿತೆ ಪ್ರಕಟವಾದ ಐದು ವರ್ಷಗಳÇÉೇ ವರ್ಡ್ಸ್‌ವರ್ತ್ ತೀರಿಕೊಂಡ; ಬ್ರೌನಿಂಗ್ ಕೆಲವು ಸಲ ತನ್ನ ಈ ಕವಿತೆಯ ಕಠೊರತೆ ಬಗ್ಗೆ ಹಪಾಹಪಿಸಿದ್ದೂ ಇದೆ.
ಏನಿದರ ಹಿನ್ನೆಲೆಯೆಂದು ವಿಚಾರಿಸಿದರೆ ಇದು ಸ್ಪಷ್ಟವಾಗುತ್ತದೆ. ತನ್ನ ಈ ಯುವ ಸಮಕಾಲೀನ ಕವಿಯನ್ನು ವರ್ಡ್ಸ್‌ವರ್ತ್ ಹೆಚ್ಚೇನೂ ಮೆಚ್ಚಿದವನಾಗಿರಲಿಲ್ಲ ಎನ್ನುವುದು ಒಂದು ವಿಷಯ; ಬ್ರೌನಿಂಗ್‌ಗಿದು ಗೊತ್ತಿತ್ತು. ಇಷ್ಟೇ ಆಗಿದ್ದರೆ ಅದು ಕ್ಷುಲ್ಲಕವಾಗುತ್ತಿತ್ತು. ಹೆಚ್ಚು ವಸ್ತುನಿಷ್ಠವಾದ ವಿಷಯವೆಂದರೆ ಲಿಬರಲ್ ಮೌಲ್ಯಗಳಿಗೆ ಸಂಬಂಧಿಸಿದುದು.
ವರ್ಡ್ಸ್‌ವರ್ತ್ ಪಕ್ಕಾ ಲಿಬರಲ್ ಆಗಿ ಕಾವ್ಯಜೀವನ ಸುರುಮಾಡಿದವ. ಫ್ರೆಂಚ್ ಮಹಾಕ್ರಾಂತಿಯ (1789-99) ಕಾಲ ಅದು. ಆಗಿನ ಹಲವು ಇಂಗ್ಲಿಷ್ ಮತ್ತು ಅಮೇರಿಕನ್ ಲೇಖಕರಂತೆ, ವರ್ಡ್ಸ್‌ವರ್ತ್ ಕೂಡ ಫ್ರೆಂಚ್ ಮಹಾಕ್ರಾಂತಿಯ ಅಭಿಮಾನಿಯಾಗಿದ್ದ. 1891ರ ಸುಮಾರಿಗೆ ಅವನು ಫ್ರಾನ್ಸಿಗೆ ಹೋಗಿ ಅಲ್ಲಿ ಕೆಲವು ಸಮಯ ಇದ್ದ. ಅವನೇನೂ ಕ್ರಾಂತಿಯ ನೇರ ದರ್ಶನಕ್ಕೆಂದೋ ಅದರಲ್ಲಿ ಭಾಗವಹಿಸಲೆಂದೋ ಅಲ್ಲಿಗೆ ಬಂದವನಾಗಿರಲಿಲ್ಲ; ಬಂದ ಮೇಲೆ ಅವನು ಅಲ್ಪ ಕಾಲವಾದರೂ ಕ್ರಾಂತಿಗೆ ಸಾಕ್ಷಿಯಾಗಿದ್ದುದು ಸಹಜ. ಅಲ್ಲದೆ ಆಕಸ್ಮಿಕವಾಗಿ ಅಲ್ಲಿ ಅವನಿಗೆ Marie Anne Vallon ಎಂಬವಳ ಜತೆ ಪ್ರಣಯ ಸಂಬಂಧವೂ ಉಂಟಾಯಿತು. (ಮುಂದೆ ಅವಳಿಂದ ಅವನಿಗೊಂದು ಮಗುವಾಗುತ್ತದೆ.) ಇದೆಲ್ಲದರಿಂದಾಗಿ ಆ ಕಾಲದ ವರ್ಡ್ಸ್‌ವರ್ತ್‌ನ ಕವಿತೆಗಳ ತುಂಬಾ ಕ್ರಾಂತಿಯ ಪರವಾದ ಮಾತುಗಳು ಬರುತ್ತವೆ. Bliss it was in that dawn to be alive / But to be young was very heaven ಎಂಬ ಅವನ ಪ್ರಸಿದ್ಧ ಸಾಲುಗಳು ಈ ಮಹಾಕ್ರಾಂತಿಯ ಕುರಿತಾಗಿಯೇ ಇರುವುದು. ಫ್ರೆಂಚ್ ಮತ್ತು ಅಮೇರಿಕನ್ ಕ್ರಾಂತಿಗಳ ಧ್ಯೇಯವಾದ liberty, equality, fraternity ಅವನ ಕಾವ್ಯದ ಭದ್ರವಾದ ನೆಲೆಗಟ್ಟಾಯಿತು. ಆದರೆ ವರ್ಡ್ಸ್‌ವರ್ತ್‌ನ ಈ ಕ್ರಾಂತಿಯ ಪ್ರೀತಿ ಹೆಚ್ಚು ಕಾಲ ಉಳಿಯಲಿಲ್ಲ. ಕಾರಣ ಫ್ರಾನ್ಸಿನಲ್ಲಿ ಕ್ರಾಂತಿಯ ಜತೆಯÇÉೇ ಹುಟ್ಟಿಕೊಂಡ ಅರಾಜಕ ಹಿಂಸಾಚಾರ. 1793ರಲ್ಲಿ ಕ್ರಾಂತಿಕಾರಿಗಳು ಇಬ್ಭಾಗವಾಗಿ ರೋಬ್ಸ್ ಪಿಯರ್‌ನ ಕರಾಳ ಆಡಳಿತ (Reign of Terror) ಸುರುವಾಯಿತು ಹಾಗೂ 1794ರಲ್ಲಿ ರೋಬ್ಸ್ಪಿಯರ್‌ನ ತಲೆಯೇ ಗಿಲೆಟಿನ್‌ಗೆ ಬಲಿಯಾಯಿತು. ದಶಕದ ಕೊನೆಯಲ್ಲಿ ಹೊಸ ರಿಪಬ್ಲಿಕನ್ನು ಮೂಲೆಗೆ ತಳ್ಳಿ ನೆಪೋಲಿಯನ್ ಅಧಿಕಾರಕ್ಕೆ ಬರುತ್ತಾನೆ, 1804ರಲ್ಲಿ ತಾನೇ ರಾಜನೆಂದು ಪಟ್ಟಾಭೀಷೇಕ ಮಾಡಿಸಿಕೊಳ್ಳುತ್ತಾನೆ. ತದನಂತರ ವಿಶ್ವವಿಜಯಕ್ಕೆ ಹೊರಡುತ್ತಾನೆ. ಶೀಘ್ರವೇ ಬ್ರಿಟನ್ (ಇತರ ಯುರೊಪಿಯನ್ ದೇಶಗಳ ಪಕ್ಷ ವಹಿಸಿ) ನೆಪೋಲಿಯನ್‌ನ ವಿರುದ್ಧ ಯುದ್ಧ ಸಾರುತ್ತದೆ. ಹೀಗೆ ಯುದ್ಧ ಸಾರಿದ್ದು ವರ್ಡ್ಸ್‌ವರ್ತ್ ಸೇರಿದಂತೆ ಹಲವು ಬ್ರಿಟಿಷ್ ಲೇಖಕರಿಗೆ ಸರಿಬರಲಿಲ್ಲ. ಯಾಕೆಂದರೆ ಅವರು ನೆಪೋಲಿಯನ್‌ನಲ್ಲಿ ತಮ್ಮದೇ ದೇಶದ ಪರಿಪೂರ್ಣ ಪ್ರಜಾಪ್ರಭುತ್ವದ ಕನಸು ಕಾಣುತ್ತಿದ್ದರು. ಆರಂಭದಲ್ಲಿ ವರ್ಡ್ಸ್ ವರ್ತ್, ಕೋಲರಿಜ್, ಸದೆ (Southey) ಮುಂತಾದ ಕವಿಗಳು ನೆಪೋಲಿಯನ್‌ನ ಅಭಿಮಾನಿಗಳಾಗಿ ಅವನನ್ನು ಬದಲಾವಣೆಯ ಹರಿಕಾರನಾಗಿ ಕಂಡರೂ, ಬಹು ಬೇಗನೆ ಅವರು ಭ್ರಮನಿರಸನಗೊಳ್ಳುತ್ತಾರೆ. ಮುಖ್ಯವಾಗಿ ವರ್ಡ್ಸ್‌ವರ್ತ್ ರಕ್ತ ಕ್ರಾಂತಿಯನ್ನು ದ್ವೇಷಿಸಲು ಸುರುಮಾಡಿದ್ದ. ಅಲ್ಲದೆ ಅವನು ಇಂಗ್ಲೆಂಡಿನ ನಿಸರ್ಗದಲ್ಲಿ ತನ್ನ ಸಾಂತ್ವನವನ್ನು ಕಂಡುಕೊಳ್ಳಲು ಕಲಿತುಕೊಂಡಿದ್ದ. 1833ರ Warning ಎಂಬ ಕವಿತೆಯಲ್ಲಿ ದೇಶದಲ್ಲಿ ಸಾಮಾಜಿಕ ಅÇÉೋಲ ಕÇÉೋಲ ಎಬ್ಬಿಸುವುದರ ವಿರುದ್ಧ ಅವನು ಜನರನ್ನು ಎಚ್ಚರಿಸುವುದು ಕಂಡುಬರುತ್ತದೆ; ತಗ್ಗಿ ನಿಲ್ಲಲು, ಸಹನೆ ತೋರಲು ಅವನು ವಿನಂತಿಸುತ್ತಾನೆ. ಎಲ್ಲಕ್ಕಿಂತಲು ಮುಖ್ಯ ಶಾಂತಿ ಎನ್ನುವ ಭಾವನೆ ಅವನ ಮನಸ್ಸಿನಲ್ಲಿ ಬಹುಶಃ ಮೂಡಿರಬಹುದು. ಅಷ್ಟರಲ್ಲಿ ನೆಪೋಲಿಯನ್‌ನ ಸಾವು ಸಂಭವಿಸಿರುತ್ತದೆ (1921).
ಈ ಮಧ್ಯೆ ಕವಿಯಾಗಿ ಸುಪ್ರಸಿದ್ಧನಾಗಿದ್ದ ವರ್ಡ್ಸ್‌ವರ್ತ್‌ಗೆ ಕೆಲವು ಸರಕಾರಿ ಸವಲತ್ತುಗಳು ದೊರಕುತ್ತವೆ. 1813ರಲ್ಲಿ ಅವನನ್ನು ವೆಸ್ಟ್‌ಮೂರ್‌ಲ್ಯಾಂಡಿಗೆ ಠಸೆ ಕಾಗದದ ವಿತರಣಕಾರನನ್ನಾಗಿ ನಿಯಮಿಸಲಾಗುತ್ತದೆ. (ಅವನೇನೂ ಹುಟ್ಟಾ ಅನುಕೂಲಸ್ಥನಾಗಿರಲಿಲ್ಲ.) 1842ರಲ್ಲಿ ಸರಕಾರದಿಂದ ಅವನಿಗೆ ವರ್ಷಾಸನ ಘೋಷಿಸಲಾಗುತ್ತದೆ. ಹಾಗೂ 1843ರಲ್ಲಿ, ರಾಬರ್ಟ್ ಸದೆ ತೀರಿಕೊಂಡ ಮೇಲೆ, ಅವನನ್ನು ರಾಷ್ಟ್ರಕವಿಯನ್ನಾಗಿ ಆರಿಸಲಾಗುತ್ತದೆ. ಬ್ರೌನಿಂಗ್ ತನ್ನ ಕವಿತೆಯಲ್ಲಿ ಬೆಳ್ಳಿ ನಾಣ್ಯಗಳ ಮಾತೆತ್ತಿ ಹಂಗಿಸುವಲ್ಲಿ ಇವೆಲ್ಲವೂ ಸೂಚಿತವಾಗಿವೆ.
ವರ್ಡ್ಸ್‌ವರ್ತ್‌ನ್ನ ಟೀಕಿಸುವವರಲ್ಲಿ ಬ್ರೌನಿಂಗ್ ಮೊದಲಿಗನೇನೂ ಆಗಿರಲಿಲ್ಲ. ಒಮ್ಮೆ ಅವನ ಅಭಿಮಾನಿಯಾಗಿದ್ದ ಪ್ರಬಂಧಕಾರ ಹ್ಯಾಝಿÉಟ್ ಟೀಕಿಸುತ್ತಾನೆ. ಇನ್ನು ಶೆಲ್ಲಿ ತನ್ನದೊಂದು ಕವಿತೆಯಲ್ಲಿ (o Wordsworth) ಅವನನ್ನು ನೇರವಾಗಿ ವಿಮರ್ಶೆಗೆ ಗುರಿಯಾಗಿಸುತ್ತಾನೆ. ವರ್ಡ್ಸ್‌ವರ್ತನ್ನು ಹೊಗಳುತ್ತಲೇ ಅವನನ್ನು ಅಕ್ಷರಶಃ ಎಂಬಂತೆ ಹೊನ್ನ ಶೂಲಕ್ಕೆ ಏರಿಸುತ್ತಾನೆ ಎನ್ನಬಹುದು. ಬೆಳೆಯುತ್ತ ನಾವು ಏನೆಲ್ಲ ಕಳೆದುಕೊಂಡಿದ್ದೇವೆ ಎಂದ ಕವಿಗೆ, ತಾನೂ ಈಗ ಇನ್ನಷ್ಟು ಕಳೆದುಕೊಂಡಿದ್ದೇನೆ (ಎಂದರೆ, ವರ್ಡ್ಸ್‌ವರ್ತ್‌ನನ್ನು), ಹಾಗೂ ಅದಕ್ಕೆ ತಾನು ಮಾತ್ರವೇ ಇಂದು ಮರುಗಬೇಕಾಗಿದೆ ಎನ್ನುತ್ತಾನೆ. “ಗೌರವಯುತ ಬಡತನದಲ್ಲಿ ಸತ್ಯ ಮತ್ತು ಸ್ವಾತಂತ್ರ್ಯದ ಬಗ್ಗೆ ಹಾಡಿದ್ದಿಯಾ; ಈಗ ಅದನ್ನೆಲ್ಲ ತೊರೆದು ನನ್ನನ್ನು ದುಃಖೀತನನ್ನಾಗಿ ಮಾಡಿರುವಿ’ ಎನ್ನುತ್ತಾನೆ.
ಈ ಕವಿಗಳು ಹೇಳುವಂತೆ ವರ್ಡ್ಸ್‌ವರ್ತ್‌ನ ಧೋರಣೆ ಬದಲಾಗಿರಬಹುದು; ಆದರೆ ಅದು ಕೆಲವು ಆಮಿಷಗಳಿಂದಾಗಿ ಎಂದು ಹೇಳುವುದು ಸರಿಯಲ್ಲ. ಅಲ್ಲದೆ, ವಿಮರ್ಶಕರೊಬ್ಬರು ಅನ್ನುವಂತೆ, ಶೆಲ್ಲಿ, ಬ್ರೌನಿಂಗ್ ಮುಂತಾದವರು ಎರಡು ದಶಕಗಳಷ್ಟು ಹಿಂದಿನ ಕ್ರಾಂತಿಯ ಕುರಿತಾಗಿ ಆದರ್ಶೀಕೃತ ಕಲ್ಪನೆಯನ್ನು ತಾಳುವುದು ಸಹಜ; ಆದರೆ ಆ ಕ್ರಾಂತಿಯ ಬೆಳಕು ಮತ್ತು ಕತ್ತಲು ಎರಡನ್ನೂ ಕಣ್ಣಾರೆ ಕಂಡ ವರ್ಡ್ಸ್ ವರ್ತ್‌ನ ಕಲ್ಪನೆ ಅದೇ ಆಗಬೇಕೆಂದಿಲ್ಲ. ಆದರ್ಶ ಮತ್ತು ವಾಸ್ತವದ ನಡುವಿನ ಅಂತರವನ್ನು ನಿಭಾಯಿಸುವಲ್ಲಿ ಕೆಲವರು ಎಡುವುತ್ತಾ¤ರೆ. ವರ್ಡ್ಸ್‌ವರ್ತ್ ಹೀಗೆ ಎಡವಿರಬಹುದು. ಇನ್ನು ಅಮೇರಿಕನ್ ಸಾಹಿತ್ಯ ವಿಮರ್ಶಕ ಹೆರಾಲ್ಡ್ ಬ್ಲೂಮ್ ಇಂಥ (ಹಿರಿಯ ಸಾಹಿತಿಗಳನ್ನು ಸಮಕಾಲೀನ ಕಿರಿಯರು ಟೀಕಿಸುವ) ವಿದ್ಯಮಾನಕ್ಕೆ ಸೈದ್ಧಾಂತಿಕ ರೂಪವೊಂದನ್ನು ಕೊಡುತ್ತಾನೆ. ಅದನ್ನವನು ಪೈಶಾಚೀಕರಣ (Daemonization) ಎಂದು ಕರೆಯುತ್ತಾನೆ: a movement towards a personalized Counter-Sublime in relation to the precursor’s Sublime. ಹಿಂದಿನವರ ಉದಾತ್ತತೆಗೆ ಒಡ್ಡುವ ವ್ಯಕ್ತಿಗತ ಪ್ರತ್ಯುದಾತ್ತತೆ. ಇದೊಂದು ಹಿಂದಿನವರನ್ನು ವೈಯಕ್ತಿಕವಾಗಿ ತೆಗಳಿ ಅವರ ಸಾಧನೆಯನ್ನು ಮೀರುವ ಯತ್ನ-ಹೆರಾಲ್ಡ್ ಬ್ಲೂಮ್‌ನ ಸಾಹಿತ್ಯಸಿದ್ಧಾಂತದ ಒಂದು ತತ್ವ. ಇಂಥ ಸಿದ್ಧಾಂತವನ್ನು ಅಲ್ಲಗಳೆಯುವ ವಿಧಾನವೇ ಇಲ್ಲವೆನ್ನುವುದು ಇದರ ಸಮಸ್ಯೆ.
– ಕೆ. ವಿ. ತಿರುಮಲೇಶ್