ಬೆಂಗಳೂರು: ಪೆಟ್ರೋಲ್, ಡೀಸೆಲ್ ಹಾಗೂ ವಾಹನಗಳ ಥರ್ಡ್ ಪಾರ್ಟಿ (ಮೂರನೆ ವ್ಯಕ್ತಿ) ಪಾಲಿಸಿ ಪ್ರೀಮಿಯಂ ದರಗಳ ಹೆಚ್ಚಳ ವಿರೋಧಿಸಿ ದೇಶಾದ್ಯಂತ ಜೂ.18 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಆಲ್ ಇಂಡಿಯಾ ಕಾನ್‌ಫೆಡರೇಷನ್ ಆಫ್ ಗೂಡ್ಸ್ ವೆಹಿಕಲ್ ಓನರ್ ಅಸೋಸಿಯೇಷನ್ ತೀರ್ಮಾನಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಚನ್ನಾರೆಡ್ಡಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮತ್ತೂಂದು ಕಡೆ ವಾಹನಗಳ ಮೂರನೇ ವ್ಯಕ್ತಿ ಪಾಲಿಸಿ ಪ್ರೀಮಿಯಂ ಅನ್ನು 2002ರಿಂದಲೂ ನಿರಂತರವಾಗಿ ಏರಿಕೆ ಮಾಡಿಕೊಂಡು ಬಂದಿದ್ದು, ಈವರೆಗೆ ಶೇ.1117ರಷ್ಟು ಏರಿಕೆಯಾಗಿದೆ. ಇದನ್ನು ನಿಯಂತ್ರಿಸುವಂತೆ ಕೇಂದ್ರಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಶೇ.80ರಷ್ಟು ಲಾರಿ ಮಾಲೀಕರು ಬ್ಯಾಂಕ್‌ನಿಂದ ಸಾಲ ಪಡೆದು ವಾಹನಗಳನ್ನು ಖರೀದಿ ಮಾಡಿರುತ್ತಾರೆ. ಲಾರಿ ಮಾಲೀಕರು ಸಾಮಾನ್ಯವಾಗಿ ಬಾಡಿಗೆ ದರವನ್ನು ದಿನನಿತ್ಯದ ಬೇಡಿಕೆ ಮತ್ತು ಪೂರೈಕೆ ಆಧಾರದ ಮೇಲೆ ನಿಗದಿಪಡಿಸುತ್ತಾರೆ. ಇನ್ನು ಡಿಸೇಲ್ ಖರ್ಚು ಮಾಡುತ್ತಿರುವ ಹಣವನ್ನು ಬಾಡಿಗೆಯಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಕಟ್ಟಬೇಕಿದೆ ಹಾಗೂ ಪ್ರತಿ ವರ್ಷದಿಂದ ವರ್ಷಕ್ಕೆ ಟೋಲ್ ದರ ಏರಿಕೆಯಾಗುತ್ತಿದೆ.
ಈ ವೆಚ್ಚಗಳನ್ನು ನಿರ್ವಹಿಸಿಕೊಂಡು, ಲಾರಿಗಳಿಗೆ ಕಟ್ಟಬೇಕಾದ ಮಾಸಿಕ ಕಂತುಗಳ ಹಣ ಕಟ್ಟಲು ಸಾಧ್ಯವಾಗದೇ ಬಹಳಷ್ಟು ಮಾಲೀಕರು ಲಾರಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ ಸಮಸ್ಯೆಗಳನ್ನು ಸಾಕಷ್ಟು ಬಾರಿ ಮನವರಿಕೆ ಮಾಡಿಕೊಟ್ಟಿದ್ದರೂ,ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಜೂ.18 ರೊಳಗೆ ನಮ್ಮ ಮನವಿಯನ್ನು ಅಂಗೀಕರಿಸದಿದ್ದರೆ, ಅಂದು ರಾತ್ರಿಯಿಂದಲೇ ದೇಶವ್ಯಾಪ್ತಿ ಅನಿರ್ಧಿಷ್ಟಾವಧಿ ಕಾಲ ಸರಕು-ಸಾಗಣೆ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.