ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕರಿಬ್ಬರ ಪೈಪೋಟಿಗೆ ಸರಣಿ ಅಪಘಾತ ಸಂಭವಿಸಿ ಕಿಲೋಮೀಟರ್ ಗಟ್ಟಲೆ ರಸ್ತೆ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ.
ಶನಿವಾರ ಮಧ್ಯಾಹ್ನ ತುಮಕೂರು ಕಡೆಯಿಂದ ಬೆಂಗಳೂರಿಗೆ ಸಾಗುತ್ತಿದ್ದ 2 ಲಾರಿಗಳ ಚಾಲಕರು ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬಿದ್ದು ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿಯೊಂದು ರಸ್ತೆ ತಡೆಗೋಡಿಗೆ ಡಿಕ್ಕಿ ಹೊಡೆಯಿತು.
ಪರಿಣಾಮ ಸ್ಥಳದಲ್ಲಿ ಲಾರಿ ಪಲ್ಟಿಹೊಡೆದರೆ ಮತ್ತೂಂದು ಲಾರಿ ಮುಂಭಾಗದಲ್ಲಿ ಸಾಗುತ್ತಿದ್ದ ಕಾರು ಮತ್ತು ಬೈಕ್ ಸವಾರನಿಗೆ ಡಿಕ್ಕಿ ಹೊಡೆಯಿತು. ಬಳಿಕ, ರಸ್ತೆ ತಡೆಗೋಡೆಯನ್ನೇರಿ ಹೆದ್ದಾರಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು.
ಘಟನೆ ಪರಿಣಾಮ ಕಾರು ಮತ್ತು ಬೈಕ್ ಜಖಂಗೊಂಡರೆ ಬೈಕ್ ಸವಾರ ನವೀನ್ (26) ಎಂಬಾತನ ಕಾಲು ಮುರಿದಿದೆ. ಮೂಲತಃ ತುಮಕೂರಿನ ನವೀನ್ ಕಳೆದ 6 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದು ಪಟ್ಟಣ ಸಮೀಪದ ಅರಿಶಿನಕುಂಟೆ ಗ್ರಾಮದಲ್ಲಿ ನೆಲೆಸಿದ್ದ.
ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ದುರ್ಘಟನೆ ಸಂಭವಿಸಿದೆ. ಲಾರಿ ಚಾಲಕರಿಬ್ಬರು ಘಟನೆ ಬಳಿಕ ಪರಾರಿಯಾಗಿದ್ದು ಪ್ರಕರಣ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಅಸ್ತವ್ಯಸ್ತ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಮನ್ಯ ದಿನಗಳಲ್ಲಿಯೇ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ ಆದರೆ, ವಾರಾಂತ್ಯದ ದಿನವಾದ ಶನಿವಾರ ಮಧ್ಯಾಹ್ನದ ವೇಳೆ ಅವಘಡ ಸಂಭವಿಸಿದ್ದರಿಂದ ಹೆದ್ದಾರಿಯಲ್ಲಿ ಸುಮಾರು ಮೂರ್‍ನಾಲ್ಕು ಕಿಲೋಮೀಟರ್ ರಸ್ತೆ ಸಂಚಾರ ಸ್ಥಗಿತಗೊಂಡು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಹೆದ್ದಾರಿಯಲ್ಲಿನ ವಾಹನ ಸಂಚಾರ ಸಮಸ್ಯೆ ಸುಗಮಗೊಳಿಸಲು ಸಂಚಾರಿ ಪೊಲೀಸರು ಹೈರಾಣಾದರು.