ಬೆಂಗಳೂರು: ಲಾಲ್‌ಬಾಗ್ ಸಮೀಪದ ಕೃಂಬಿಗಲ್ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದು, ಆಕೆಯ ಸಹೋದರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಯನಗರದ ಸುರಾನ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ವ್ಯಾಸಾಂಗ ಮಾಡುತ್ತಿರುವ ಪ್ರೀತಿ (19) ಮೃತ ದುರ್ದೈವಿ.
ಪ್ರೀತಿ ಅವರ ಸಹೋದರಿ ಲಾವಣ್ಯ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅಪಘಾತವೆಸಗಿದ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದನಾದರೂ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಕುರಿತು ವಿ.ವಿ.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಟನ್‌ಪೇಟೆ ನಿವಾಸಿಯಾದ ರವಿಚಂದ್ರನ್ ದಂಪತಿಯ ಪುತ್ರಿಯರಾದ ಪ್ರೀತಿ ಹಾಗೂ ಲಾವಣ್ಯ ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಸ್ಕೂಟಿಯಲ್ಲಿ ಲಾಲ್‌ಬಾಗ್‌ಗೆ ತೆರಳುತ್ತಿದ್ದರು. ಈ ವೇಳೆ ಲಾವಣ್ಯ ಸ್ಕೂಟಿ ಚಾಲನೆ ಮಾಡುತ್ತಿದ್ದರು. ಮಾರ್ಗಮಧ್ಯೆ ಕೃಂಬಿಗಲ್ ರಸ್ತೆಯಲ್ಲಿ ತಿರುವು ಪಡೆಯುವಾಗ ಹಿಂಬದಿಯಿಂದ ಬಂದ ಸಿಮೆಂಟ್ ಮಿಕ್ಸರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಹಿಂಬದಿ ಕುಳಿತಿದ್ದ ಪ್ರೀತಿ ರಸ್ತೆ ಬದಿಯ ಕಾಂಪೌಂಡ್‌ಗೆ ಅಪ್ಪಳಿಸಿ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾವಣ್ಯ ಕೂಡ ರಸ್ತೆಬದಿ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಭೀಕರ ಅಪಘಾತ ಕಂಡ ಸ್ಥಳೀಯರು ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರೀತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಾವಿನಲ್ಲೂ ಸಾರ್ಥಕತೆ: ಅಪಘಾತದಲ್ಲಿ ಮೃತಪಟ್ಟ ಪ್ರೀತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸಾವಿನ ನಂತರ ಮಗಳು ಮತ್ತೂಬ್ಬರಿಗೆ ಬೆಳಕಾಗಲಿ ಎಂದು ನಿರ್ಧರಿಸಿದ ಪೋಷಕರು, ಪ್ರೀತಿ ಅವರ ಎರಡೂ ಕಣ್ಣುಗಳನ್ನು ಲಯನ್ಸ್ ಕ್ಲಬ್‌ಗ ದಾನ ಮಾಡಿದ್ದಾರೆ.
ಸದಾ ಲವಲವಿಕೆಯಿಂದ ಇರುತ್ತಿದ್ದ ಪ್ರೀತಿ ಬಡವರು, ಅಂಧರು, ವಿಶೇಷ ಚೇತರನ್ನು ಕಂಡ ಬಗ್ಗೆ ಕಾಳಜಿ ಹೊಂದಿದ್ದಳು. ನೇತ್ರದಾನ ಮಾಡುವ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದಳು. ಹೀಗಾಗಿ, ಆಕೆಯ ಕನಸನ್ನು ನೆರವೇರಿಸಿದ್ದೇವೆ ಎಂದು ಪೋಷಕರು ತಿಳಿಸಿದ್ದಾರೆ.