Advertisement

Bengaluru Parks: ಪಾರ್ಕ್‌ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ

11:54 AM Jun 15, 2024 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಸೇರುವ ಉದ್ಯಾನವನಗಳನ್ನು ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಸಾರ್ವಜನಿಕ ಬಳಕೆಗೆ ತೆರೆದಿಡಲು ಮುಂದಾಗಿದ್ದು, ಶ್ರೀಸಾಮಾನ್ಯರ ವಲಯದಲ್ಲಿ ಇದಕ್ಕೆ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Advertisement

ಸಿಸಿ ಕ್ಯಾಮೆರಾ, ಭದ್ರತಾ ವ್ಯವಸ್ಥೆ, ಗಸ್ತು ನಿಯೋಜನೆ, ಸಮರ್ಪಕ ದೀಪ ವ್ಯವಸ್ಥೆ, ಶುಚಿತ್ವ, ಶೌಚಾಲಯ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಪಾರ್ಕ್‌ಗೆ ಕಲ್ಪಿಸಿ ಆ ನಂತರ ಸರ್ಕಾರ ರಾಜಧಾನಿಯ ಪಾರ್ಕ್‌ಗಳ ವೇಳೆ ವಿಸ್ತರಣೆ ಮಾಡಲಿ ಎಂಬ ಮಾತುಗಳು ಕೇಳಿ ಬಂದಿವೆ. ಹಿರಿಯ ನಾಗರಿಕರಿಗೆ ರಾತ್ರಿ ವೇಳೆ ಊಟ ಮುಗಿಸಿ ವಾಂಕಿಂಗ್‌ ಮಾಡಲು ಅನುಕೂಲವಾಗಲಿದ್ದು, ಸಾರ್ವಜನಿಕರು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಸಲಹೆಗಳು ಕೂಡ ವ್ಯಕ್ತವಾಗಿದೆ.

ತೋಟಗಾರಿಕೆ ಇಲಾಖೆ ವ್ಯಾಪ್ತಿಯ ಕಬ್ಬನ್‌ ಪಾರ್ಕ್‌ ಮತ್ತು ಲಾಲ್‌ ಬಾಗ್‌ ಉದ್ಯಾವನಗಳು ಇದರಿಂದ ಹೊರತು ಪಡಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,200ಕ್ಕೂ ಹೆಚ್ಚು ಪಾರ್ಕ್‌ಗಳು ಇದ್ದು, ಶೀಘ್ರದಲ್ಲೇ ಈ ಎಲ್ಲ ಪಾರ್ಕ್‌ಗಳು ಬೆಳಗ್ಗೆಯಿಂದ ರಾತ್ರಿವರೆಗೂ ಸಾರ್ವಜನಿಕರ ಬಳಕೆಗೆ ದೊರೆಯಲಿದೆ.

ವಾಯುವಿಹಾರಕ್ಕೆ ಅನುಕೂಲ: ಗರ್ಭಿಣಿಯರು ಮತ್ತು ಹಿರಿಯ ನಾಗರಿಕರು ರಾತ್ರಿ 9 ಗಂಟೆ ಮೇಲೆ ಹೆಚ್ಚಾಗಿ ವಾಕಿಂಗ್‌ಗೆ ತೆರಳುತ್ತಾರೆ. ಇಂತಹವರಿಗೆ ಇದು ಅನುಕೂಲವಾಗಲಿದೆ. ಮನೆಯ ಕೆಲಸವನ್ನೆಲ್ಲ ಮುಗಿಸಿ ರಾತ್ರಿ 10ರ ವರೆಗೂ ತಮ್ಮ ಮನೆಯ ಸಮೀಪದ ಪಾರ್ಕ್‌ಗಳಲ್ಲಿ ಮನೆಯಲ್ಲಿರುವ ಗೃಹಿಣಿಯರು ಪಾರ್ಕ್‌ನಲ್ಲಿ ಸುತ್ತಾಡಿ ಉತ್ತಮ ಗಾಳಿ ಸೇವಿಸಬಹುದು. ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ಕಬ್ಬನ್‌ಪಾರ್ಕ್‌ ಮತ್ತು ಲಾಲ್‌ಬಾಗ್‌ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಹಿರಿಯ ಪರಿಸರ ಹೋರಾಟಗಾರ ಯಲ್ಲಪ್ಪ ರೆಡ್ಡಿ ಹೇಳುತ್ತಾರೆ.

ಈ ಹಿಂದೆ ಹಿರಿಯ ನಾಗರಿಕರ ವಲಯದಿಂದ ಪಾಲಿಕೆ ವ್ಯಾಪ್ತಿಯ ಪಾರ್ಕ್‌ಗಳನ್ನು ರಾತ್ರಿ ವರೆಗೂ ಸಾರ್ವಜನಿಕ ಬಳಕೆಗೆ ಅವಕಾಶ ನೀಡಬೇಕು ಎಂಬ ಒತ್ತಾಯವಿತ್ತು. ಬೆಳಗ್ಗೆ ಪಾರ್ಕ್‌ಗಳಲ್ಲಿ ಹೆಚ್ಚು ಜನರು ಇರುವುದರಿಂದ ಹಿರಿಯ ನಾಗರಿಕರಿಗೆ ವಾಕಿಂಗ್‌ ಮಾಡಲು ಅನಾನುಕೂಲ ಆಗುತ್ತಿತ್ತು ಎಂದು ಹಿರಿಯ ನಾಗರಿಕರು, ಸಂಘ ಸಂಸ್ಥೆಗಳು, ವಾರ್ಡ್‌ ಕಮಿಟಿ ಅಧ್ಯಕ್ಷರು ಮತ್ತು ಮಹಿಳಾ ಅಧ್ಯಕ್ಷರು ಸರ್ಕಾರಕ್ಕೆ ಒತ್ತಾಯ ಮಾಡಿರುವುದೂ ಇದೇ. ಆ ಹಿನ್ನೆಲೆಯಲ್ಲಿ ಪಾರ್ಕ್‌ಗಳನ್ನು ಹಾಳಾಗದ ರೀತಿಯಲ್ಲಿ ಸಾರ್ವಜನಿಕರು ಸದ್ಭಳಕೆ ಮಾಡಿ ಪಾರ್ಕ್‌ಗಳ ರಕ್ಷಣೆಗೂ ಆದ್ಯತೆ ನೀಡಬೇಕು ಎನ್ನುತ್ತಾರೆ.

Advertisement

ದುರ್ಬಳಕೆಗೆ ಅವಕಾಶ ನೀಡಬಾರದು: ಸರ್ಕಾರದ್ದು ಒಳ್ಳೆಯ ನಿರ್ಧಾರವಾಗಿದೆ. ಆದರೆ ಪಾರ್ಕ್‌ಗಳ ದುರ್ಬಳಕೆಗೆ ಅವಕಾಶ ನೀಡಬಾರದು. ಸಾರ್ವಜನಿಕರೂ ಪಾರ್ಕ್‌ಗಳನ್ನು ತಪ್ಪು ಕಾರಣಕ್ಕಾಗಿ ಬಳಸಿಕೊಳ್ಳಬಾರದು ಎಂದು “ಟ್ರೀ ಡಾಕ್ಟರ್‌’ ವಿಜಯ್‌ ನಿಶಾಂತ್‌ ಹೇಳುತ್ತಾರೆ. ಬೆಳಗ್ಗೆ ಮತ್ತು ರಾತ್ರಿ ಹೊತ್ತಿನಲ್ಲಿ ಪಾರ್ಕ್‌ಗಳಲ್ಲಿ ವಾಕಿಂಗ್‌ ಮಾಡುವುದರಿಂದ ಅನೇಕ ರೀತಿಯ ಅನುಕೂಲಗಳಿವೆ. ವಾಯುವಿಹಾರಕ್ಕೆ ನೆರವಾಗಲಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಉತ್ತಮವಾದ ಹೆಜ್ಜೆಯಿರಿಸಿದೆ ಎಂದು ಹೇಳುತ್ತಾರೆ.

ಸರ್ಕಾರ ಒಳ್ಳೇಯ ಉದ್ದೇಶದಿಂದ ಈ ನಿಲುವು ತಗೆದುಕೊಂಡಿದೆ. ಸದ್ಬಳಕೆಯಾಗುವ ನಿಟ್ಟಿನಲ್ಲಿ ಜನರು ಮುಂದಾಗಬೇಕು ಎಂದು ಸಾಫ್ಟ್ವೇರ್‌ ಎಂಜಿನಿಯರ್‌ ಶಶಾಂಕ್‌ ಹೇಳುತ್ತಾರೆ. ರಾತ್ರಿ ವೇಳೆ ಮಹಿಳೆಯರಿಗೆ ಸುರಕ್ಷತೆ ಭಯ: ಬಿಬಿಎಂಪಿಗೆ ಸೇರಿದ ಉದ್ಯಾನವನಗಳು ಈ ಮೊದಲು ಪ್ರತಿ ದಿನ ಬೆಳಗ್ಗೆ 5 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತಿದ್ದವು. ನಿರ್ವಹಣೆ ಕಾರ್ಯವನ್ನು ಕೈಗೊಳ್ಳುವಾಗ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಮುಚ್ಚಿರುತ್ತಿದ್ದವು. ಈ ಹಿಂದಿನ ನಿರ್ಧಾರ ಸರಿಯಾಗಿತ್ತು. ರಾತ್ರಿ 10ರ ವರೆಗೂ ಪಾಕ್‌ಗಳು ತೆರೆದರೆ ಮುಂದೊಂದು ದಿನ ಅನೈತಿಕ ತಾಣಗಳಾಗುವ ಭಯ ಕಾಡುತ್ತಿದೆ ಎಂದು ವಿಲ್ಸನ್‌ ಗಾರ್ಡ್‌ನ ವ್ಹಿ ಲವ್‌ ರಾಣಿ ಪಾಕ್‌ನ ಖಜಾಂಚಿ ನಯನಾ ಹೇಳುತ್ತಾರೆ.

ಕುಡುಕರು ಬಂದು ಪಾಕ್‌ನಲ್ಲಿರುವ ಆಸನಗಳಲ್ಲಿ ಕುಳಿತುಕೊಂಡು ಕಾಲ ಕಳೆಯುವ ಸಾಧ್ಯತೆಯಿರುತ್ತದೆ. ಈ ವಾತಾವರಣದಲ್ಲಿ ಮಹಿಳೆಯರು ವಾಕ್‌ ಮಾಡಲು ಆಗುವುದಿಲ್ಲ. ಜತೆಗೆ ಪಾರ್ಕ್‌ನ ಅಕ್ಕ-ಪಕ್ಕದಲ್ಲಿರುವ ಸ್ಥಳೀಯ ನಿವಾಸಿಗಳಿಗೂ ಅನಾನುಕೂಲ ವಾಗುವ ಸಾಧ್ಯತೆ ಇದೆ ಎನ್ನುತ್ತಾರೆ. ರಾತ್ರಿ ವೇಳೆ ಕುಡುಕರು ಬರುವುದರಿಂದ ಮಹಿಳೆಯರಿಗೆ ಸುರಕ್ಷತೆಯ ಬಗ್ಗೆ ಭಯ ಕಾಡಲಿದೆ. ಈ ಬಗ್ಗೆ ಕೂಡ ಪಾಲಿಕೆ ಕಾಳಜಿ ತೋರಬೇಕು ಎಂದು ವಿಜಯನಗರ ಪಾರ್ಕ್‌ನ ನಡಿಗೆದಾರರಾದ ಎಸ್‌. ತ್ರಿಶಾಲ್‌ ಹೇಳುತ್ತಾರೆ.

ಬಿಬಿಎಂಪಿ ಉದ್ಯಾನವನಗಳಲ್ಲಿ ಕ್ಯಾಮೆರಾ ಅಳವಡಿಸಿಲ್ಲ. ಸರ್ಕಾರದ ಈ ನಿರ್ಧಾರ ಮುಂದೆ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆಗು ಹೋಗುಗಳ ಬಗ್ಗೆ ಆಲೋಚನೆ ಮಾಡಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಾರೆ.

ರಾಜಧಾನಿ ಬೆಂಗಳೂರಿನಲ್ಲಿ ನಿವೃತ್ತ ಉದ್ಯೋಗಿಗಳು ಹಲವು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅವರಿಗೆಲ್ಲಾ ಸರ್ಕಾರದ ಈ ನಿರ್ಧಾರ ಅನುಕೂಲವಾಗಲಿದೆ. ಹಿರಿಯ ನಾಗರಿಕರು ರಾತ್ರಿ ವೇಳೆ ಪಾರ್ಕ್‌ನಲ್ಲಿ ಕುಳಿತು ಬೇಸರ ಮರೆಯಲು ಸಹಾಯವಾಗಲಿದೆ. ಜತೆಗೆ ಮಹಿಳೆಯರು ಕೂಡ ತಮ್ಮ ದೈನಂದಿನ ಜಂಜಾಟ ಮರೆತು ಪಾರ್ಕ್‌ನಲ್ಲಿ ವಾಕಿಂಗ್‌ ಮಾಡಿ ತಣ್ಣನೆಯ ಗಾಳಿ ಪಡೆಯಲು ಲಾಭವಾಗಲಿದೆ. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಸಿ.ಕೆ.ರವಿಚಂದ್ರ , ನಡಿಗೆದಾರರ ಸಂಘದ ಅಧ್ಯಕ್ಷ

ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಉದ್ಯಾನಗಳನ್ನು ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ರವರೆಗೆ ತೆರೆಯಲು ಸರ್ಕಾರ ನಿರ್ಧರಿಸಿರು ವುದು ಒಳ್ಳೆಯ ಕ್ರಮ ಅಲ್ಲ. ರಾತ್ರಿಯಾಗುತ್ತಿ ದ್ದಂತೆ ಪಾರ್ಕ್‌ಗಳು ಅನೈತಿಕ ತಾಣಗಳಾಗುವ ಭಯ ಕಾಡುತ್ತಿದೆ. ಗುಂಡು, ತುಂಡುಗಳ ಪ್ರದೇಶವಾಗಿ ಮಾರ್ಪಡು ಸಾಧ್ಯತೆ ಇರುತ್ತದೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸುವ ಅಗತ್ಯವಿದೆ. ಎಸ್‌. ಉಮೇಶ್‌, ಅಧ್ಯಕ್ಷರು ಕಬ್ಬನ್‌ ಪಾಕ್‌ ನಡಿಗೆದಾರರ ಸಂಘ

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next