Advertisement

ಭಜನೆಯಿಂದ ಅಂತರಂಗದಲ್ಲಿ ಭಗವಂತ ನೆಲೆ

10:58 AM Apr 08, 2019 | Team Udayavani |
ಹುಬ್ಬಳ್ಳಿ: ದೇವರ ಸ್ಮರಣೆಯೇ ದೊಡ್ಡ ಭಜನೆ. ಇಂತಹ ಭಜನಾ ಕಾರ್ಯಕ್ರಮವನ್ನು ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.
ಸಿದ್ಧಾರೂಢ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರ ಜಯಂತ್ಯುತ್ಸವ ನಿಮಿತ್ತ ನಡೆಯುತ್ತಿರುವ ರಾಜ್ಯಮಟ್ಟದ ಭಜನಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ದೇವರ ನಾಮಸ್ಮರಣೆಗೆ ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಭಜನೆಯೂ ಪ್ರಮುಖವಾಗಿದ್ದು, ಇದರ ಮೂಲಕ ದೇವರನ್ನು ಕಾಣುವ ಸಣ್ಣ ಪ್ರಯತ್ನ ಶ್ರೀಮಠದಿಂದ ಮಾಡಲಾಗುತ್ತಿದೆ. ಭಜನೆಯಿಂದ ಅಂತರಂಗ ಶುದ್ಧಿಯಾದರೆ ಅಲ್ಲಿ ಭಗವಂತ ನೆಲೆಸುತ್ತಾನೆ. ಭಜನೆ ನಿರಂತರವಾಗಿರಬೇಕು. ಆ ಮೂಲಕ ಸದ್ಗುರುವಿನ ಆಶೀರ್ವಾದ ಎಲ್ಲರ ಮೇಲಿರಬೇಕು ಎಂದರು.
ಬಾಗಲಕೋಟೆ ರಾಮಾರೂಢ ಮಠದ ಶ್ರೀ ಪರಮರಾಮಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದು ಶಾಸ್ತ್ರ, ಆಧ್ಯಾತ್ಮದ ಪರ ಗ್ರಂಥಗಳು ನಶಿಸಿ ಹೋಗುತ್ತಿದ್ದು, ಅವುಗಳ ಬೆಳವಣಿಗೆ ಅವಶ್ಯ. ಅದ್ವೈತ ಗ್ರಂಥಗಳು ಇಂದು ಕಣ್ಮರೆಯಾಗುತ್ತಿವೆ. ಇಂತಹ ಸ್ಪರ್ಧೆಗಳ ಮೂಲಕ ಅವುಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಜ್ಞಾನ ಮಾರ್ಗ ಮುಳ್ಳಿನ ಹಾದಿ, ತುಂಬಾ ಕಠಿಣವಾದದ್ದು. ಒಂದು ಬಾರಿ ಒಲಿಸಿಕೊಂಡರೆ ಎಲ್ಲವೂ ಹಾಲು-ಸಕ್ಕರೆ ಇದ್ದಂತೆ. ಭಜನೆ ಎಂದರೆ ಭಗವಂತನ ನಾಮಸ್ಮರಣೆ. ಮನುಷ್ಯನ ಹೃದಯವನ್ನು ಪರಿಪಕ್ವ ಮಾಡುತ್ತದೆ. ಸಮಾಜದಲ್ಲಿ ಆಸ್ಪತ್ರೆಗಳು ಹೆಚ್ಚಾದರೆ ರೋಗಿಗಳು ಹೆಚ್ಚಾದಂತೆ. ಪೊಲೀಸ್‌ ಠಾಣೆಗಳು ಹೆಚ್ಚಾದರೆ ಅಪರಾಧಗಳ ಸಂಖ್ಯೆ ಹೆಚ್ಚಳವಾದಂತೆ. ಮಠ-ಮಂದಿರಗಳು
ಹೆಚ್ಚಾದರೆ ಭಕ್ತರ ಸಂಖ್ಯೆ ಹೆಚ್ಚಾದಂತೆ ಎಂದರು.
ಅಣ್ಣಿಗೇರಿ ದಾಸೋಹಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ ಭಜನಾ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಶ್ರೀ ಸಹಜಾನಂದ ಸ್ವಾಮೀಜಿ, ವಾಸುದೇವಾನಂದ ಸ್ವಾಮೀಜಿ ಮಾತನಾಡಿದರು. ಶ್ರೀಮಠದ ಟ್ರಸ್ಟ್‌ ಕಮಿಟಿ ಚೇರನ್‌ ಡಿ.ಡಿ. ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿಗಳಾದ ನಾರಾಯಣಪ್ರಸಾದ ಪಾಠಕ, ವಿಜಯಲಕ್ಷ್ಮೀ ಪಾಟೀಲ, ಡಾ| ಬಸವರಾಜ ಸಂಕನಗೌಡರ, ಹನುಮಂತ ಕೊಟಬಾಗಿ, ಗಣಪತಿ ನಾಯಕ, ಮಹೇಶಪ್ಪ ಹನಗೋಡಿ, ಧರಣೇಂದ್ರ ಜವಳಿ, ಡಾ| ಗೋವಿಂದ ಮಣ್ಣೂರ, ಕೊಟ್ಟೂರೇಶ್ವರ ತೆರಗುಂಟಿ, ಪ್ರಕಾಶ ಉಡಿಕೇರಿ, ಜಗದೀಶ ಮಗಜಿಕೊಂಡಿ ಹಾಗೂ ನಿರ್ಣಾಯಕರಾದ ಶಿವಾಜಿ ಜಾಧವ, ಮಹದೇವ ಕೂಟೂರ, ರಾಯಪ್ಪ ಕುಚಲೂರ, ಕರಡಿ, ಪಾಳೇದ, ಶಂಕರಣ್ಣ, ಶಾಂತರಾಜ ಪೋಳ, ಆದಪ್ಪನವರ ಇನ್ನಿತರರಿದ್ದರು.
ಭಜನಾ ಸ್ಪರ್ಧೆಯ ಅಧ್ಯಕ್ಷ ಶಾಮಾನಂದ ಪೂಜೇರಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಎಸ್‌.ಐ. ಕೋಳಕೂರ ನಿರೂಪಿಸಿದರು. ಪ್ರಕಾಶ ಉಡಿಕೇರಿ ವಂದಿಸಿದರು.
ಭಜನಾ ಸ್ಪರ್ಧೆಯಲ್ಲಿ ಎಲ್ಲರೂ ವಯಸ್ಸಾದವರೇ ಕಾಣಿಸುತ್ತಿದ್ದಾರೆ. ಯುವಕರು ಹೆಚ್ಚು ಪಾಲ್ಗೊಳ್ಳಬೇಕು. ದಾರಿ
ತಪ್ಪಿದ ಯುವ ಪೀಳಿಗೆಯನ್ನು ಸರಿದಾರಿಗೆ ತರುವ ಕೆಲಸವಾಗಬೇಕು. ನಮ್ಮ ಜಾನಪದ ರಕ್ಷಣೆ, ಸಂಸ್ಕೃತಿ ಬೆಳವಣಿಗೆಗೆ ಮುಂದಾಗಬೇಕು.
 ಶ್ರೀ ಪರಮರಾಮಾರೂಢ ಸ್ವಾಮೀಜಿ, ಬಾಗಲಕೋಟ
ಚಳಕಾಪೂರದಲ್ಲಿ ಸಿದ್ಧಾರೂಢ ಶ್ರೀ ಜಯಂತಿ 
ಭಾಲ್ಕಿ: ಎಲ್ಲಕ್ಕಿಂತ ಜ್ಞಾನವೇ ಶ್ರೇಷ್ಠವಾಗಿದ್ದು, ಕರ್ಮ, ಉಪಾಸನೆ ಎಲ್ಲ ತತ್ವಗಳಲ್ಲೂ ಜ್ಞಾನವೇ ಪ್ರಮುಖವಾಗಿದೆ. ಜ್ಞಾನಕ್ಕಿಂತ ಮಿಗಿಲಾದದ್ದು ಮತ್ತೂಂದಿಲ್ಲ ಎಂದು ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು. ಚಳಕಾಪೂರ ಗ್ರಾಮದ ಬ್ರಹ್ಮ ವಿದ್ಯಾಶ್ರಮ ಶ್ರೀ ಶಿದ್ಧಾರೂಢ ಮಠದಲ್ಲಿ ರವಿವಾರ ನಡೆದ ಸದ್ಗುರು ಶ್ರೀ ಸಿದ್ಧಾರೂಢರ 183ನೇ ಜಯಂತಿ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪಾಪದಿಂದ ಗದ್ದಲವಾದ ಮನಸ್ಸಿಗೆ ಪರಮಾತ್ಮ ಕಾಣುವುದಿಲ್ಲ. ಪವಿತ್ರವಾದ ಮನಸ್ಸು, ಶುದ್ಧವಾದ ಅಂತಃಕರಣ, ಗುರುವಿನಲ್ಲಿ ಶ್ರದ್ಧೆ, ನಿಷ್ಠೆ ಹೊಂದಿರುವವರಿಗೆ ಮಾತ್ರ ಪರಮಾತ್ಮ ಕಾಣುವನು ಎಂದು ಹೇಳಿದರು.
ಶ್ರೀ ಸಿದ್ಧಾರೂಢಮಠ ಕಲಬುರಗಿಯ ಮಾತೋಶ್ರೀ ಲಕ್ಷ್ಮೀದೇವಿ ಮಾತನಾಡಿ, ನಮ್ಮಲ್ಲಿರುವ ಮಲ, ವಿಕ್ಷೇಪ, ಆವರಣ ದೋಷಗಳನ್ನು ಕಳೆದುಕೊಂಡಾಗ ಮಾತ್ರ ಸತ್ಸಂಗದಲ್ಲಿ ಭಾಗಿಯಾಗಲು ಮನಸ್ಸು ಬರುತ್ತದೆ ಎಂದರು. ಶ್ರೀ ಸಿದ್ಧಾರೂಢಮಠ ಚಳಕಾಪುರದ ಶ್ರೀ ಶಂಕರಾನಂದ ಮಹಾಸ್ವಾಮೀಜಿ ಮಾತನಾಡಿದರು.
ಶ್ರೀ ಜಡಿಸಿದ್ದ ಸ್ವಾಮೀಜಿ, ಶ್ರೀ ಪ್ರಣವಾನಂದ ಸ್ವಾಮೀಜಿ, ಶ್ರೀ ಗಣೇಶಾನಂದ ಮಹಾರಾಜರು, ಶ್ರೀ ಸದ್ರೂಪಾನಂದ ಸ್ವಾಮೀಜಿ, ಶ್ರೀ ಅದ್ವೈತಾನಂದ ಸ್ವಾಮೀಜಿ, ಮಾತೋಶ್ರೀ ಸಿದ್ದೇಶ್ವರಿ ತಾಯಿ, ಮಾತೋಶ್ರೀ ಆನಂದಮಯಿತಾಯಿ, ಮಾತೋಶ್ರೀ ಅಮೃತಾನಂದಮಯಿ ತಾಯಿ, ಮಾತೋಶ್ರೀ ಜ್ಞಾನೇಶ್ವರಿತಾಯಿ, ಮಾತೋಶ್ರೀ ಸಂಗೀತಾದೇವಿ, ಸರಸ್ವತಿ ಅಮೃತಪ್ಪಾ ಕನಕಟ್ಟೆ, ಬಸವಂತರಾಯ ಬಿರಾದಾರ, ವೈಜಿನಾಥಪ್ಪ ದಾಬಶೆಟ್ಟೆ, ಶಂಕರ ಜೈನಾಪೂರೆ ಹಾಜರಿದ್ದರು.
ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಚರಿತ್ರೆಯ ಸಾಮೂಹಿಕ ಪಾರಾಯಣ ನಡೆಯಿತು. ಮಹಾಪ್ರಸಾದ ದಾನಿಗಳಾದ ರಮೇಶ ಬೇಗಾರ ಸ್ವಾಗತಿಸಿದರು. ನಾಗಯ್ನಾ ಸ್ವಾಮಿ ನಿರೂಪಿಸಿದರು. ಸೋಮಯ್ನಾಸ್ವಾಮಿ ವಂದಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next