Advertisement

ಸ್ಥಳೀಯರು-ಹೊರಗಿನವರು ಕಿತ್ತಾಟ!

03:18 PM Apr 06, 2019 | keerthan |

ಗದಗ: ಲೋಕಸಭಾ ಚುನಾವಣೆಗೆ ಹಾವೇರಿ ಕ್ಷೇತ್ರದ ಅಖಾಡ ಸಿದ್ಧವಾಗಿದೆ. ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಡಿ.ಆರ್‌.ಪಾಟೀಲ ಸೇರಿದಂತೆ ಹಲವು ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಗದಗ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿದ್ದರಿಂದ ಮತ್ತೆ ಜಿಲ್ಲೆಯವರು, ಹೊರಗಿನವರು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

Advertisement

ಹಾವೇರಿ ಲೋಕಸಭಾ ಕ್ಷೇತ್ರದವರೇ ಆದ ಹಾಲಿ ಸಂಸದ ಶಿವಕುಮಾರ ಉದಾಸಿ ಅವರು ಸತತ ಎರಡು ಬಾರಿ ಲೋಕಸಭೆ ಪ್ರ ವೇಶಿಸಿದ್ದಾರೆ. ಕಳೆದ ಒಂದು ದಶಕದಿಂದ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಈ ಬಾರಿ ಜಿಲ್ಲೆಯವರೇ ಆದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಡಿ.ಆರ್‌.ಪಾಟೀಲ ಅವರು ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಿದ್ದರಿಂದ ಇದೀಗ ಚರ್ಚೆಗೆ ಕಾರಣವಾಗಿದೆ.

ಅವಿಭಜಿತ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹಾವೇರಿ ಮತ್ತು ಗದಗ ಏಕಕಾಲಕ್ಕೆ ಪ್ರತ್ಯೇಕ ಜಿಲ್ಲೆಗಳಾಗಿ ಹೊರ ಹೊಮ್ಮಿವೆ. ಆದರೆ, 2008ರಲ್ಲಿ ಲೋಕಸಭಾ ಕ್ಷೇತ್ರ ಪುನರ್‌ ವಿಂಗಡನೆ ಬಳಿಕ ಧಾರವಾಡ ದಕ್ಷಿಣ ಕ್ಷೇತ್ರವು ಹಾವೇರಿ ಲೋಕಸಭಾ ಕ್ಷೇತ್ರವಾಗಿ ಬಡ್ತಿ ಪಡೆಯಿತು. ಆದರೆ, ಉಡುಪಿ- ಚಿಕ್ಕಮಗಳೂರು ಮಾದರಿಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರವನ್ನಾಗಿಸಬೇಕು ಎಂಬ ಬೇಡಿಕೆ ಈಡೇರದೇ, ಹಾವೇರಿ ಲೋಕಸಭಾ ಕ್ಷೇತ್ರವಾಗಿ ಉದಯಗೊಂಡಿತು.

ಹಾವೇರಿ ಲೋಕಸಭಾ ಕ್ಷೇತ್ರವಾದ ನಂತರ ಇದೀಗ ಮೂರನೇ ಬಾರಿಗೆ ಲೋಕ ಸಮರಕ್ಕೆ ಅಣಿಯಾಗುತ್ತಿದೆ. ಈವರೆಗೆ ನಡೆದ ಎರಡು ಚುನಾವಣೆಗಳಲ್ಲಿ ನಾನಾ ಕಾರಣಗಳಿಂದಾಗಿ ಗದಗಿನವರಿಗೆ ಯಾವುದೇ ರಾಷ್ಟ್ರೀಯ ಪಕ್ಷದಿಂದ
ಟಿಕೆಟ್‌ ಸಿಕ್ಕಿರಲಿಲ್ಲ. ಹೀಗಾಗಿ ಅನಿವಾರ್ಯ ಕಾರಣಗಳಿಂದ ಅನ್ಯ ಜಿಲ್ಲೆಯವರನ್ನು ತಮ್ಮ ಪ್ರತಿನಿಧಿಯನ್ನಾಗಿಸಿ ಆರಿಸಿ ಕಳುಹಿಸಿದ್ದರು. ಪ್ರಸ್ತುತ 17ನೇ ಲೋಕಸಭೆ ಚುನಾವಣೆ ಮಾತ್ರ ಸ್ವಲ್ಪ ಭಿನ್ನವಾಗಿದೆ. ಈ ಬಾರಿ ಕಾಂಗ್ರೆಸ್‌ನಿಂದ ಡಿ.ಆರ್‌.ಪಾಟೀಲ ಕಣಕ್ಕಿಳಿದಿದ್ದರಿಂದ ಜಿಲ್ಲೆಯಲ್ಲಿ ಚುನಾವಣೆ ರಂಗೇರಿದೆ.

ಶುರುವಾಗಿದೆ ಸ್ಥಳೀಯ ಅಭ್ಯರ್ಥಿ ಚರ್ಚೆ: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ 2009ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ
ಶಿವಕುಮಾರ ಉದಾಸಿ, ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್‌ , ಜೆಡಿಎಸ್‌ ಅಭ್ಯರ್ಥಿಯಾಗಿ ಜಿಲ್ಲೆಯವರೇ ಆದ ಮಾಜಿ ಸಚಿವ ಎಸ್‌.ಎಸ್‌. ಪಾಟೀಲ ಅವರ ಪುತ್ರ ಶಿವಕುಮಾರಗೌಡ ಪಾಟೀಲ ಸ್ಪರ್ಧಿಸಿದ್ದರು. ಆಗಲೂ ಸ್ಥಳೀಯ ಮತ್ತು ವಲಸಿಗರು ಎಂಬ ಚರ್ಚೆ ಜೋರಾಗಿತ್ತು.

Advertisement

ಇದೀಗ ಡಿ.ಆರ್‌.ಪಾಟೀಲ ಸ್ಪರ್ಧೆಯಿಂದ ಮತ್ತೆ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಮಹಾಲಿಂಗಪುರ ತಾಂಡಾ, ಕಣವಿ, ಹೊಸೂರು, ಅತ್ತಿಕಟ್ಟಿ ಸೇರಿದಂತೆ ಹಲವು ಹಳ್ಳಿಗಳಿಗೆ ಸಂಸದ ಉದಾಸಿ ಅವರ ದರ್ಶನವೇ ಇಲ್ಲ. ಇನ್ನೂ ಕೆಲವು ಹಳ್ಳಿಗರಿಗೆ ಸಂಸದರ ಬಳಿ ಕೆಲಸವಾಗಬೇಕಿದ್ದರೆ, ಸಂಸದರ ಗದಗ ಆಪ್ತ ಸಹಾಯಕರನ್ನು ಸಂಪರ್ಕಿಸಬೇಕು. ಸಂಸದರ ಪ್ರವಾಸ ಪಟ್ಟಿಯನ್ನು ತಿಳಿದುಕೊಂಡು, ಅವರು ಗದಗಿಗೆ ಬಂದಾಗಲೇ ಅವರನ್ನು ಭೇಟಿ ಮಾಡಬೇಕಿತ್ತು ಎಂಬಿತ್ಯಾದಿ ಅಂಶವನ್ನು ಎದುರಾಳಿ ಕಾಂಗ್ರೆಸ್‌ ನಾಯಕರು ಚುನಾವಣಾ ಅಸ್ತ್ರವನ್ನಾಗಿಸಿಕೊಳ್ಳುತ್ತಿದ್ದಾರೆ.

ಆದರೆ, ಉದಾಸಿ ಅವರು ಸಂಸದರಾದ ಬಳಿಕ 10 ವರ್ಷಗಳಲ್ಲಿ ಬೇರು ಮಟ್ಟದಲ್ಲಿ ಉತ್ತಮ ಜನ ಸಂಪರ್ಕ ಹೊಂದಿದ್ದಾರೆ ಎಂಬ ಮಾತುಗಳು
ಇದೀಗ ಸ್ಥಳೀಯರು ಮತ್ತು ಹೊರಗಿನವರು ಎಂಬುದರ ಕುರಿತು ಪರ-ವಿರೋಧ ಚರ್ಚೆಗೆ ಚಾಲನೆ ಪಡೆಯುತ್ತಿದೆ.

1951 ಈವರೆಗೆ ಯಾವುದೇ ರಾಷ್ಟ್ರೀಯ ಪಕ್ಷದಿಂದ ಗದಗಿನವರಿಗೆ ಟಿಕೆಟ್‌ ಸಿಕ್ಕಿರಲಿಲ್ಲ. ಈ ಬಾರಿ ಡಿ.ಆರ್‌.ಪಾಟೀಲರ ಸ್ಪರ್ಧೆಯಿಂದ ಸ್ಥಳೀಯರು ಮತ್ತು ಅನ್ಯ ಜಿಲ್ಲೆಯವರು ಎಂಬ ಚರ್ಚೆಗಳು ಸಹಜವಾಗಿಯೇ ಕೇಳಿ ಬರುತ್ತಿವೆ. ಡಿ.ಆರ್‌.ಪಾಟೀಲರ ಕಾರ್ಯವೈಖರಿ ಜನರಿಗೆ ಗೊತ್ತಿದೆ. ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರಿಂದ ಅವರನ್ನು ಗೆಲ್ಲಿಸಬೇಕೆಂದು ಜನರೇ ತೀರ್ಮಾನಿಸಿದ್ದಾರೆ.
ರವಿ ಮೂಲಿಮನಿ, ಕಾಂಗ್ರೆಸ್‌ ಮುಖಂಡ

ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯರು, ಹೊರ ಜಿಲ್ಲೆಯವರು ಎಂಬ ಚರ್ಚೆಗಳು ಮಹತ್ವ ಪಡೆಯುವುದಿಲ್ಲ. ಈವರೆಗೆ ಅಭಿವೃದ್ಧಿ, ರಾಷ್ಟ್ರೀಯ ವಿಚಾರಗಳಿಗೆ ಜನರು ಮತ ಹಾಕುತ್ತಿದ್ದರು. ಆದರೆ, ಪುಲ್ವಾಮಾ ದಾಳಿ ಬಳಿಕ ದೇಶದ ಭದ್ರತೆಗಾಗಿಯೂ ಮತ ನೀಡಬೇಕು ಎಂದು ಚಿಂತನೆ ಮೊಳಕೆಯೊಡೆಯುತ್ತಿವೆ. ಗದಗ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗಿಂತ ಈ ಬಾರಿ ಹೆಚ್ಚಿನ ಮತ ಪಡೆಯುತ್ತೇವೆ.
ರಾಜು ಕುರಡಗಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next