ತುಮಕೂರು: ಕಲ್ಪತರು ನಾಡಿನಲ್ಲಿ ಮತ್ತೆ ರಾಜಕೀಯ ಗರಿಗೆದರಲಿದೆ. ರಾಜ್ಯ ಚುನಾವಣಾ ಆಯೋಗ ಜಿಲ್ಲೆಯ ತಿಪಟೂರು ನಗರಸಭೆ, ಕುಣಿಗಲ್ ಹಾಗೂ ಪಾವಗಡ ಪುರಸಭೆ, ತುರುವೇಕೆರೆ ಪಪಂ ಹಾಗೂ ತುಮಕೂರು ಮಹಾನಗರಪಾಲಿಕೆಯ 22ನೇ ವಾರ್ಡ್‌ಗೆ ಮೇ 29ರಂದು ಉಪ ಚುನಾವಣೆ ಘೋಷಣೆ ಮಾಡಿದೆ. ಈಗಷ್ಟೇ ಲೋಕಸಭಾ ಚುನಾವಣಾ ಸಮರ ಮುಗಿಸಿರುವ ರಾಜಕೀಯ ಪಕ್ಷಗಳಿಗೆ ಮತ್ತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸವಾಲಾಗಿದೆ. ಜಿಲ್ಲೆಯ ನಗರ, ಪಟ್ಟಣ, ಸ್ಥಳೀಯ ಸಂಸ್ಥೆಗಳಾದ ತುಮಕೂರು ಮಹಾನಗರ ಪಾಲಿಕೆ, ಚಿಕ್ಕನಾಯಕನ ಹಳ್ಳಿ, ಮಧುಗಿರಿ, ಗುಬ್ಬಿ, ಕೊರಟಗೆರೆ ಪಟ್ಟಣ ಪಂಚಾಯ್ತಿಗಳಿಗೆ 2018ರ ಆ.31ರಂದು ಚುನಾವಣೆ ನಡೆದಿತ್ತು.
ಇನ್ನು ಸ್ಥಳೀಯ ಸಂಸ್ಥೆಗಳಾದ ತಿಪಟೂರು ನಗರಸಭೆ, ಕುಣಿಗಲ್, ಪಾವಗಡ, ಪುರಸಭೆ, ತುರುವೇಕೆರೆ ಪಟ್ಟಣ ಪಂಚಾಯ್ತಿಗೆ ಮೇ 29ರಂದು ಚುನಾವಣೆ ಘೋಷಣೆಯಾಗಿದೆ. ಶಿರಾ ನಗರಸಭೆ ಚುನಾವಣೆ ದಿನಾಂಕ ಇನ್ನು ಘೋಷಣೆಯಾಗಿಲ್ಲ, ಕಾರಣ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿರು ವುದರಿಂದ ಈ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಣೆ ಮಾಡಿಲ್ಲ.
ರಾಜಕೀಯದಲ್ಲಿ ಪ್ರಮುಖ ಚುನಾವಣೆಗಳಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ಸ್ಥಳೀಯ ಅಭ್ಯರ್ಥಿಗಳ ಬೆಳವಣಿಗೆಗೆ ಪೂರಕವಾಗಿದೆ. ತಿಪಟೂರು ನಗರ ಸಭೆ, ಕುಣಿಗಲ್, ಪಾವಗಡ ಪುರಸಭೆ ತುರುವೇಕೆರೆ ಪಟ್ಟಣ ಪಂಚಾಯ್ತಿ ಚುನಾವಣೆ ದಿನಾಂಕ ಘೋಷಣೆಯಾಗಿ ರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ರಾಜಕೀಯ ರಂಗು ಪಡೆದುಕೊಂಡಿದೆ. 4 ಸ್ಥಳೀಯ ಸಂಸ್ಥೆಗಳ ಚುನಾವಣೆ ಯಲ್ಲಿ ತಿಪಟೂರು ನಗರ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಲ್ಲಿ ಟಿಕೇಟ್ ಪಡೆಯಲು ಕಾರ್ಯಕರ್ತರು ಮುಂದಾಗಿದ್ದು, ಬಿಜೆಪಿ ಶಾಸಕ ಬಿ.ಸಿ.ನಾಗೇಶ್, ಕಾಂಗ್ರೆಸ್ ಮಾಜಿ ಶಾಸಕ ಕೆ.ಷಡಕ್ಷರಿ, ಜೆಡಿಎಸ್ ಮುಖಂಡ ಲೋಕೇಶ್ವರ ಅವರ ಬಳಿ ಹೋಗಿ ತಮಗೇ ಟಿಕೇಟ್ ನೀಡಬೇಕು ಎನ್ನುವ ಒತ್ತಡ ಹಾಕುತ್ತಿದ್ದಾರೆ. ತುರುವೇಕೆರೆ ಪಪಂ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಬಿಜೆಪಿ ಶಾಸಕ ಮಸಾಲೆ ಜಯ ರಾಮ್, ಜೆಡಿಎಸ್ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್ ಬಳಿ ಜೆಡಿಎಸ್ ಟಿಕೆಟ್ ಆಕಾಂಕ್ಷೆಗಳು ದುಂಬಾಲು ಬಿದ್ದಿದ್ದಾರೆ.
ಉಳಿದಂತೆ ಕುಣಿಗಲ್, ಪಾವಗಡ ಪುರಸಭೆ, ಚುನಾವಣೆಗೂ ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ನಾಯಕರ ಬಳಿ ಟಿಕೆಟ್ ಪಡೆಯಲು ಮುಂದಾಗಿದ್ದಾರೆ. ಕುಣಿಗಲ್ ಮತ್ತು ಪಾವಗಡ ಕಾಂಗ್ರೆಸ್ ಶಾಸಕರಾದ ರಂಗನಾಥ್, ವೆಂಕಟರಮಣ್ಣಪ್ಪ, ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ವಿಚಾರವಾಗಿ ಸ್ಥಳೀಯ ಮಟ್ಟದಲ್ಲಿ ಚರ್ಚೆ ನಡೆಸಿದ್ದಾರೆ. ಬಿಜೆಪಿ- ಜೆಡಿಎಸ್ ಮುಖಂಡರು ತಮ್ಮ ಪಕ್ಷದಿಂದ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗೆ ಎಲ್ಲಾ ತಯಾರಿ ಮಾಡುತ್ತಿದ್ದಾರೆ. ತುಮಕೂರು ಮಹಾನಗರ ಪಾಲಿಕೆ 22ನೇ ವಾರ್ಡ್ ನ ಸದಸ್ಯರ ಆಯ್ಕೆಗೆ ಉಪಚುನಾವಣೆ ನಡೆಯಲ್ಲಿದೆ. ಈ ವಾರ್ಡ್‌ನಲ್ಲಿ ಈ ಹಿಂದೆ ಗೆದ್ದಿದ್ದ ಮಾಜಿ ಮೇಯರ್ ಎಚ್.ರವಿಕುಮಾರ್ ಬರ್ಬರ ಹತ್ಯೆಯಾದ ಹಿನ್ನೆಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕಾಗಿ ಜೆಡಿಎಸ್ ಮುಖಂಡ ಸಚಿವ ಎಸ್.ಆರ್.ಶ್ರೀನಿವಾಸ್ ಬಳಿ ಅಭ್ಯರ್ಥಿ ಆಕಾಂಕ್ಷಿಗಳ ದಂಡೇ ಹೋಗಿದೆ. ಇನ್ನು ಬಿಜೆಪಿಯಿಂದ ಸ್ಪರ್ಧಿಸಲು ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಳಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವವರು ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಅವರ ಬಳಿ ಹೋಗಿ ಟಿಕೆಟ್ ಕೊಡಿಸು ವಂತೆ ಒತ್ತಡ ಹಾಕುತ್ತಿದ್ದಾರೆ.
ಲೋಕಸಮರ ಮುಗಿದಿದೆ. ಅಭ್ಯರ್ಥಿಗಳು ಫಲಿತಾಂಶ ಏನು ಬರುತ್ತೋ ಏನ್ನುವ ಚಿಂತೆಯಲ್ಲಿದ್ದಾರೆ. ಈ ನಡುವೆ ಯಾವ ವಾರ್ಡ್‌ನಿಂದ ಯಾವ ಅಭ್ಯರ್ಥಿಯನ್ನು ಮತದಾರರು ಆಯ್ಕೆ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
● ಚಿ.ನಿ.ಪುರುಷೋತ್ತಮ್