Advertisement

ಪುಟ್ಟದೊಂದು ಕತೆಯ ಹಾಗೆ

08:26 PM Apr 13, 2019 | mahesh |

ಇಷ್ಟೆಲ್ಲ ದೇವರ ಕೆಲಸ ಮಾಡ್ತೀರಿ. ದೇವರ ಸೇವಕ ನಾನು ಅಂತೀರಿ. ಅಂಥಾದ್ದರಲ್ಲಿ ದುಡ್ಡಿಗಾಗಿ ದೇವರನ್ನೇ ಯಾಕೆ ಬೇಡಿಕೊಳ್ಳಬಾರದು ಒಂದು ಸಲ? ಯಾವ ಧಣಿಯಾದರೂ ಪಗಾರ ಕೊಡದೆ ಸೇವಕನನ್ನು ದುಡಿಸಿಕೊಳ್ಳುತ್ತಾನಾ?” ಎಂದಳು ಮುಲ್ಲಾನ ಹೆಂಡತಿ.

Advertisement

ಮನೆಯಲ್ಲಿ ಆಕೆ ಅನುಭವಿಸುತ್ತಿದ್ದ ಕಿತ್ತು ತಿನ್ನುವಂಥ ಬಡತನವೇ ಅವಳಿಂದ ಈ ಮಾತುಗಳನ್ನು ಹೇಳಿಸಿತ್ತು. “”ನೀನು ಹೇಳುವುದು ಸರಿಯಿದೆ” ಎಂದ ಮುಲ್ಲಾ ತನ್ನ ಮನೆಯ ಹಿತ್ತಲಿಗೆ ಹೋಗಿ ಮಂಡಿಯೂರಿ ಕೂತು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸತೊಡಗಿದ.

“”ದೇವರೇ! ಇಷ್ಟು ದಿನ ನಿನ್ನ ಸೇವೆಯನ್ನು ನಿರ್ವಂಚನೆಯಿಂದ ಮಾಡಿದ್ದೇನೆ. ಒಂದು ಸಾವಿರ ಚಿನ್ನದ ನಾಣ್ಯ ಕೊಡು. ಇಷ್ಟು ವರ್ಷದ ನನ್ನ ಸೇವೆಗೆ ತಕ್ಕಂತೆ ಅಷ್ಟಾದರೂ ದುಡ್ಡು ನನಗೆ ಸೇರಲೇಬೇಕು” ಎಂದು ಜೋರಾಗಿ ಕೇಳಿಕೊಂಡ.

ಇದನ್ನೆಲ್ಲ ನೋಡುತ್ತಿದ್ದ ಮುಲ್ಲಾನ ನೆರೆಮನೆಯ ಸಲೀಲ ಮನೆಯೊಳಗಿನಿಂದ ನೂರು ಚಿನ್ನದ ನಾಣ್ಯಗಳ ಗಂಟು ತಂದು ದೂರದಿಂದಲೇ ಮುಲ್ಲಾನ ಮೇಲೆ ಒಗೆದ. ಶ್ರೀಮಂತನಾಗಿದ್ದ ಆತನಿಗೆ ಈ ದುಡ್ಡನ್ನು ಕಳೆದುಕೊಂಡರೂ ಆಗುವ ನಷ್ಟವೇನಿರಲಿಲ್ಲ. ಆ ಕ್ಷಣಕ್ಕೆ ಮುಲ್ಲಾನ ಜೊತೆ ಸ್ವಲ್ಪ ಈ ತಮಾಷೆ ಆಟ ಆಡಿ ನೋಡಬೇಕು ಅನ್ನಿಸಿತ್ತು ಅವನಿಗೆ, ಅಷ್ಟೆ.  ಮುಲ್ಲಾ ಕಣ್ಣು ತೆರೆದಾಗ ತಾನು ಕೇಳಿದಷ್ಟು ದುಡ್ಡಿನ ಗಂಟು! ಖುಷಿಯಿಂದ ಕುಣಿದಾಡುತ್ತ ಮುಲ್ಲಾ ಮನೆಗೆ ಹೋದ.

ದಿನಗಳೆದಂತೆ ಮುಲ್ಲಾನ ಮನೆಯಲ್ಲಿ ಬದಲಾವಣೆಗಳಾದವು. ಹೊಸ ಪೀಠೊಪಕರಣಗಳು ಬಂದವು. ದಂಪತಿ ಹೊಸ ಬಟ್ಟೆಯಲ್ಲಿ ರಾರಾಜಿಸಿದರು. ಮುಲ್ಲಾನ ಹೆಂಡತಿ ಸ್ವಲ್ಪ ಚಿನ್ನದ ಆಭರಣಗಳನ್ನೂ ಮಾಡಿಸಿದಳು. ಇವನ್ನೆಲ್ಲ ನೋಡಿದ ಸಲೀಲನಿಗೆ ಈಗ ತಾನು ನಿಜ ವಿಷಯ ಹೇಳಿ ದುಡ್ಡನ್ನು ವಾಪಸು ತೆಗೆದುಕೊಳ್ಳಬೇಕು ಅನಿಸಿತು.

Advertisement

ಸೀದಾ ಮುಲ್ಲಾನಲ್ಲಿಗೆ ಬಂದ. ಅಂದು ಮುಲ್ಲಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾಗ ನಡೆದ ನಿಜಸಂಗತಿ ಏನೆಂಬುದನ್ನು ಹೇಳಿದ. ನೂರು ನಾಣ್ಯಗಳ ಗಂಟನ್ನು ಒಗೆದಿದ್ದು ತಾನೇ ಎಂಬ ಸತ್ಯವನ್ನೂ ಬಿಚ್ಚಿಟ್ಟ. ಆದರೆ ಮುಲ್ಲಾ ಈಗ ಈ ಕತೆಯನ್ನು ನಂಬಲು ಸಿದ್ಧನಿರಲಿಲ್ಲ!

“”ನಾನು ಜೋರಾಗಿ ಪ್ರಾರ್ಥಿಸುತ್ತಿದ್ದಾಗ ಆ ಮಾತುಗಳನ್ನು ನೀನು ಕದ್ದು ಕೇಳಿಸಿ ಕೊಂಡಿರಬೇಕು ಅಷ್ಟೆ! ನನಗೆ ದುಡ್ಡು ಬಂದದ್ದು ದೇವರ ಕಡೆಯಿಂದಲೇ” ಎಂದು ವಾದ ಮುಂದಿಟ್ಟ ಮುಲ್ಲಾ. ಇಬ್ಬರ ನಡುವೆಯೂ ಜಗಳದ ಕಿಡಿ ಹತ್ತಿತು. ಹತ್ತಿದ ಕಿಡಿ ಬೆಂಕಿಯಾಗಿ ಉರಿಯಿತು. ಮೂಗಿಗೆ ಮೂಗು ತಾಗಿಸಿ ಇಬ್ಬರೂ ಕುಸ್ತಿ ಯುದ್ಧಕ್ಕೆ ನಿಂತರು. “”ಬಾ, ಇದನ್ನು ನ್ಯಾಯಾಲಯದಲ್ಲೇ ಪರಿಹರಿಸಿಕೊಳ್ಳೋಣ” ಎಂದ ಸಲೀಲ.

“”ಅದು ಹೇಗೆ ಆಗುತ್ತೆ? ನೀನೋ ಸಿರಿವಂತ. ಕುದುರೆ ಮೇಲಿಂದ ಹೋಗುತ್ತೀಯೆ. ನಾನು ಬಡವ. ಹರಿದ ಬಟ್ಟೆ ಹಾಕುವಾತ. ನಾವಿಬ್ಬರು ನ್ಯಾಯಾಧೀಶರ ಮುಂದೆ ಹೋದರೆ ನ್ಯಾಯದೇವತೆ ನಿನ್ನ ಕಡೆಯೇ ವಾಲುತ್ತಾಳೆ. ನನಗೂ ನಿನ್ನಂಥಾದ್ದೇ ಬಟ್ಟೆಬರೆ, ಕುದುರೆ ಇದ್ದರೆ ನ್ಯಾಯಯುತವಾಗಿರುತ್ತದೆ” ಎಂದ ಮುಲ್ಲಾ.

ಸಲೀಲ ತಕ್ಷಣ ತನ್ನದೊಂದು ಬಟ್ಟೆಯನ್ನು ಮುಲ್ಲಾನಿಗೆ ಹಾಕಿ, ಒಂದು ಕುದುರೆಯನ್ನೂ ಕೊಟ್ಟ. ಈಗ ನ್ಯಾಯಾಲಯಕ್ಕೆ ಹೋಗದಿರಲು ಹೊಸ ನೆಪ ಹುಡುಕುವಂತೆಯೇ ಇರಲಿಲ್ಲ. ಇಬ್ಬರೂ ನ್ಯಾಯಾಧೀಶರ ಮುಂದೆ ಹೋಗಿನಿಂತರು.

ವ್ಯಾಜ್ಯ ಏನೆಂಬುದನ್ನು ನ್ಯಾಯಾಧೀಶರ ಮುಂದೆ ಅರುಹಲಾಯಿತು. ಅದು ನ್ಯಾಯವಾಗಿ ನನಗೆ ಸೇರಬೇಕಾದ ದುಡ್ಡು. ನಾನು ಕೊಟ್ಟಷ್ಟು ನನಗೆ ಮರಳಿ ಬರಬೇಕು ಎಂದು ಸಲೀಲ ತನ್ನ ವಾದ ಮಂಡಿಸಿದ. ನಂತರದ ಸರದಿ ಮುಲ್ಲಾನದ್ದು. ನ್ಯಾಯಾಧೀಶರು ಅವನತ್ತ ತಿರುಗಿ, “”ಏನು ಹೇಳುತ್ತೀಯಾ?” ಎಂದು ಕೇಳಿದರು.

“”ಏನು ಹೇಳಲಿ ಮಹಾಸ್ವಾಮಿ! ಈ ಸಲೀಲನಿಗೆ ಹುಚ್ಚು ಹಿಡಿದಿದೆ. ನನ್ನ ಮನೆಯ ಸಕಲ ಸಂಗತಿಗಳನ್ನೂ ತನ್ನದು ಎನ್ನಲು ಶುರು ಮಾಡಿದ್ದಾನೆ. ಬಿಟ್ಟರೆ ಈತ ನಾನು ಹಾಕಿಕೊಂಡ ಅಂಗಿಯನ್ನೂ ನಾನು ಹತ್ತಿಬಂದ ಕುದುರೆಯನ್ನೂ ಕೂಡ ತನ್ನದೇ ಅನ್ನುವವನೇ!” ಎಂದ ಮುಲ್ಲಾ.
“”ಆದರೆ ಮಹಾಸ್ವಾಮಿ, ಆ ಅಂಗಿ ಮತ್ತು ಕುದುರೆ ನನ್ನದೇ” ಎಂದು ಸಲೀಲ ಕಿರುಚಿದ.
ನ್ಯಾಯಾಧೀಶರು ಪ್ರಕರಣವನ್ನು ಕಸದ ಬುಟ್ಟಿಗೆ ಎಸೆದರು!

Advertisement

Udayavani is now on Telegram. Click here to join our channel and stay updated with the latest news.

Next