Advertisement
ಬಸವರಾಜ ಕಟ್ಟಿಮನಿ ಕನ್ನಡ ಸಾಹಿತ್ಯ ಲೋಕದ ಪ್ರಮುಖ ಹೆಸರು ಎಂದರೆ ಬಹಳ ಸೀಮಿತ ಪರಿಚಯವೆನಿಸೀತು. ಬಡತನ ಮತ್ತು ಅಲೆದಾಟದ ಬಾಲ್ಯ, ಅದಮ್ಯ ಸಾಹಿತ್ಯ ಪ್ರೀತಿಯಿಂದಾಗಿ ದೊರೆತ ಅಗಾಧವಾದ ಓದು ಜೊತೆಗೆ ಸ್ವಾತಂತ್ರ್ಯ ಹೋರಾಟದ ಕೆಚ್ಚು ಅವರ ಬದುಕನ್ನು ಶ್ರೀಮಂತವಾಗಿಸಿತು. ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕಟ್ಟೀಮನಿ ನಮ್ಮೊಂದಿಗೆ ಇದ್ದಿದ್ದರೆ ಅವರಿಗೆ ನೂರು ವರ್ಷ ತುಂಬುತ್ತಿತ್ತು. ಕಾಲನ ಕರೆಗೆ ಅವರು ಓಗೊಟ್ಟು ಆಗಲೇ ಮೂವತ್ತು ವರ್ಷ. ಆದರೆ ಅವರು ಬರೆದಿಟ್ಟ ಕೃತಿಗಳು ಅವರ ನೆನಪಿನ ಜೊತೆ ಜೀವಂತ.
Related Articles
Advertisement
ಅವರ ದೊಡ್ಡತನವೆಂದರೆ ಅವರು ಏನನ್ನೂ ನಂಬಿದ್ದರೋ ಹಾಗೆಯೇ ಬದುಕಿದರು. ಸ್ವಾತಂತ್ರ್ಯ ಹೋರಾಟದಲ್ಲಿ 1942ರ ಆಗಸ್ಟ್ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲಿಗೆ ಹೋಗಲೇಬೇಕಾಯಿತು. ಅಲ್ಲಿಯೂ ಅವರ ಸಾಹಿತ್ಯ ಕೃಷಿ ಮುಂದುವರೆಯಿತು. 1944ರ ಹೊತ್ತಿಗೆ ಅವರ ಪ್ರಥಮ ಕಥಾಸಂಗ್ರಹ ಕಾರವಾನ್ ಪ್ರಕಟವಾಯಿತು. ಅಂದಿನಿಂದ ಕಟ್ಟೀಮನಿ ಕನ್ನಡ ಓದುಗರ ಪ್ರೀತಿಯ ಮೂಟೆಯನ್ನು ತಮಗಾಗಿ ಕಟ್ಟಿಕೊಂಡರು. ಹತ್ತಕ್ಕೂ ಹೆಚ್ಚು ಕಥಾ ಸಂಕಲನಗಳು ಪ್ರಕಟಗೊಂಡವು. ಸಮಾಜವನ್ನೇ ವಸ್ತುವಾಗುಳ್ಳ ಅವರ ಕಥೆಗಳು ಮಾನವೀಯತೆಯನ್ನೇ ಪ್ರತಿಪಾದಿಸು ವಂಥವು. ಹಳ್ಳಿಯ ಜನರ ಮುಗ್ಧತೆಯನ್ನು ಚಿತ್ರಿಸುತ್ತಲೇ ಅದನ್ನು ಶೋಷಿಸುವ ಸಮಾಜದ ಕ್ರೌರ್ಯವನ್ನು ಅವರು ಬರಹದಲ್ಲಿ ತೆರೆದಿಡು ತ್ತಾರೆ. ಮುಗ್ಧ ಜನರ ಪರವಾದ ಅನುಕಂಪ ಅವರ ಕಥೆಗಳ ದೃಷ್ಟಿ.
ಕಾಳಜಿಯ ಗಟ್ಟಿ ಧ್ವನಿಸುಮಾರು ಮೂವತ್ತೈದಕ್ಕೂ ಹೆಚ್ಚು ಕಾದಂಬರಿಗಳು ಕಟ್ಟೀಮನಿಯವರ ಕೈಯಲ್ಲಿ ಅರಳಿವೆ. ಇದು ಕಟ್ಟಿàಮನಿಯವರದ್ದೇ ಕೃತಿ ಎಂಬಷ್ಟರ ಮಟ್ಟಿಗೆ ಕಾದಂಬರಿಗಳಲ್ಲಿ ಅವರ ಛಾಪನ್ನು ಗುರುತಿಸಬಹುದು. ಸಾಹಿತ್ಯವನ್ನು ಸಾಹಿತ್ಯೇತರ ಕಾರಣಗಳ ಹೂರಣವನ್ನು ತುಂಬಿದರು. ಕಾದಂಬರಿ ಎಂದರೆ ಅವರಿಗೆ ಕೇವಲ ಸಾಹಿತ್ಯದ ಕುಸುರಿ ಕೆಲಸವಲ್ಲ. ಬದಲಾಗಿ ಸಮಾಜದ ಧೋರಣೆಗಳನ್ನು ಪ್ರಶ್ನಿಸುವ ಕಾಳಜಿಯಿರುವ ಗಟ್ಟಿ ದನಿ. ಹಾಗಾಗಿಯೇ ಅವರ ಕಾದಂಬರಿಯ ಭಾಷೆ, ವಸ್ತು, ಶೈಲಿ ಕಾಲ್ಪನಿಕ ಎನ್ನುವಂತಿಲ್ಲ. ಇಡೀ ಸಮಾಜವೇ ಅವರ ಶ್ರದ್ಧೆಯ ಕೇಂದ್ರವಾಗಿತ್ತು. ಪ್ರಗತಿಶೀಲ ಚಳುವಳಿಯ ಮುಂಚೂಣಿಯಲ್ಲಿದ್ದೂ “ಇದಮಿತ್ಥಂ’ ಎಂದು ಅವರು ಹೇಳುವ ಗೋಜಿಗೇ ಹೋಗಲಿಲ್ಲ. ತಾವು ನಂಬಿದ್ದನ್ನು ಶ್ರದ್ಧೆಯಿಂದ ಬರೆದರು. ಸ್ವಾತಂತ್ರ್ಯ, ಕಾರ್ಮಿಕ ಸಮಸ್ಯೆ, ಬಾಲ್ಯವಿವಾಹ, ಜಾತಿಕಲಹ, ವಿಷಮ ದಾಂಪತ್ಯ, ವೇಶ್ಯಾವೃತ್ತಿ, ಇತಿಹಾಸದ ಘಟನೆಗಳು, ಜೀವನ ಚರಿತ್ರೆ ಮುಂತಾದವು ಕಟ್ಟಿàಮನಿ ಸಾಹಿತ್ಯದ ವಿಷಯಗಳು. 1946ರ ಸ್ವಾತಂತ್ರ್ಯದೆಡೆಗೆ ಕಾದಂಬರಿಯಿಂದ ಆರಂಭಗೊಂಡ ಅವರ ಕಾದಂಬರಿ ಪಯಣ ದಿಟ್ಟ ನಿಲುವುಗಳನ್ನು ತೋರ್ಪಡಿಸುವ ಮೂಲಕ ಸಮಾಜದ ಅನೇಕ ಹುಳುಕುಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಯಿತು. ಕಟ್ಟೀಮನಿಯವರ ಸ್ವಾತಂತ್ರ್ಯ ಹೋರಾಟದ ಅನುಭವದ ಫಲವಾಗಿ ಮೂಡಿಬಂದ ಮಾಡಿ ಮಾಡಿದವರು ಕನ್ನಡದ ಉತ್ತಮ ಕಾದಂಬರಿ. ಬೆಳಗಾವಿ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ವಿಷಯವನ್ನು ಈ ಕಾದಂಬರಿ ಹೇಳುತ್ತದೆ. ಮೋಹದ ಬಲೆಯಲ್ಲಿ ಮತ್ತು ಜರತಾರಿ ಜಗದ್ಗುರು ಕಾದಂಬರಿಗಳು ಸಿದ್ದವೀರ ಸ್ವಾಮೀಜಿಯ ಕಾಮಜೀವನದ ಕಥೆಯನ್ನು ಹೇಳುವಂಥವು. ಇದನ್ನು ಪ್ರಧಾನವಾಗಿಟ್ಟುಕೊಂಡು ಸಮಾಜದ ಸಮಸ್ಯೆಗಳನ್ನು ಕಾದಂಬರಿಗಳು ಅನಾವರಣಗೊಳಿಸುತ್ತವೆ. ಗಂಡಿನ ಸೋಗಿನ ಕಾಮ ಹೇಗೆ ಹೆಣ್ಣು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ ಮತ್ತು ಹೊರಕ್ಕೆ ಬರಬೇಕೆಂದರೂ ಬರಲಾಗದ ಸ್ಥಿತಿಯಲ್ಲಿ ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುತ್ತದೆ ಎಂಬುದನ್ನು ಚಿತ್ರಿಸುವ ಕಾದಂಬರಿಗಳನ್ನು ಬರೆದರು. ಸಂಯಮದ ನಿರೂಪಣೆಯಿಂದ ಮೋಹದ ಬಲೆಯಲ್ಲಿ ಕಾದಂಬರಿ ಸಾಹಿತ್ಯಿಕವಾಗಿ ಗೆದ್ದಿದೆ.
1951ರಲ್ಲಿ ಪ್ರಕಟವಾದ ಜ್ವಾಲಾಮುಖೀಯ ಮೇಲೆ ಎಂಬ ಕಾದಂಬರಿ ಕಾರ್ಮಿಕ ಹೋರಾಟವನ್ನು ಚಿತ್ರಿಸಿದೆ. ಕಟ್ಟೀಮನಿಯ ವರನ್ನು ಅಂತರಾಷ್ಟ್ರೀಯ ಕೀರ್ತಿಗೆ ಏರಿಸಿದ ಈ ಕಾದಂಬರಿ ಅವರ ಸ್ವಾನುಭವದ ಮೂಸೆಯಿಂದಲೇ ಎದ್ದು ಬಂದದ್ದು. ಬೀದಿಯಲ್ಲಿ ಬಿದ್ದವಳು ಅಮಾಯಕ ಹೆಣ್ಣುಗಳ ಕರುಣಾಪೂರಿತ ಕಥೆ. ವೇಶ್ಯಾ ಸಮಸ್ಯೆಯನ್ನು ದಾಖಲಿಸುವ ಇದು, ಸಮಾಜ ಹೆಣ್ಣುಮಕ್ಕಳ ವಿಷಯದಲ್ಲಿ ತನ್ನ ಮಾನವೀಯತೆಯನ್ನೆಲ್ಲ ಹೇಗೆ ಹರಾಜು ಹಾಕಿದೆ ಎಂಬುದನ್ನು ಚಿತ್ರಿಸುವ ಕಾದಂಬರಿ. “ಪೌರುಷ ಪರೀಕ್ಷೆ’ ಟಿಪ್ಪುವಿನ ವಿರುದ್ಧ ಕಿತ್ತೂರನ್ನು ರಕ್ಷಿಸಿಕೊಂಡ ಹೆಣ್ಣುಮಗಳ ಕಥೆ. 1956ರಲ್ಲಿ ಪ್ರಕಟವಾದ ಗಿರಿಯ ನವಿಲು ಶಿವಶರಣೆ ಅಕ್ಕಮಹಾದೇವಿಯ ಜೀವನವನ್ನು ಮಾನವೀಯ ನೆಲೆಯಲ್ಲಿ ಚಿತ್ರಿಸುವ ಕಾದಂಬರಿ. ಇದಕ್ಕೆ ಸಾಕಷ್ಟು ಪರ-ವಿರೋಧ ವಾದಗಳು ಹುಟ್ಟಿಕೊಂಡವು. ಕಟ್ಟೀಮನಿಯವರಂತೆ ಪ್ರಗತಿಶೀಲ ಲೇಖಕರಲ್ಲಿ ಚಳುವಳಿಯ ಮೂಲಕವೇ ತಮ್ಮನ್ನು ಗುರುತಿಸಿಕೊಂಡವರು ಕಡಿಮೆ. ಅವರ ಬರವಣಿಗೆಯ ಆವೇಶ, ರೊಚ್ಚು , ಸಮಾಜದ ಬಗೆಗಿನ ಅವರ ದೃಷ್ಟಿಕೋನವನ್ನು ತಿಳಿಸುತ್ತದೆ. ಅದು ಪೊಳ್ಳು ಅನುಭವವಲ್ಲ. ಅನ್ಯಾಯದ ವಿರುದ್ಧ ಸಿಡಿದ ಭಾಷೆಯದು. ಆರಂಭದ ಕೆಲವು ಕಾದಂಬರಿಗಳು ಭಾಷಾ ಜಾಳುತನವನ್ನು ತೋರಿಸಿದರೂ ನಂತರದ ಕಾದಂಬರಿಗಳು ಅವರ ಬರವಣಿಗೆಯ ಪಕ್ವತೆಯನ್ನು ಸಾರಿ ಹೇಳುತ್ತವೆ. ಅವರ ಭಾವದ ಅಪ್ಪಟತೆಗಾಗಿ ನಾವಿಂದು ಅವರನ್ನು ನೆನಪಿಸಿಕೊಳ್ಳಲೇಬೇಕು. 52ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿಧಾನಪರಿಷತ್ ಸದಸ್ಯರಾಗಿ ಅವರು ಕನ್ನಡಕ್ಕೆ ಸೇವೆ ಸಲ್ಲಿಸಿದ್ದನ್ನು ಕನ್ನಡ ಜನತೆ ಮರೆಯುವಂತಿಲ್ಲ. ಸಂಧ್ಯಾಹೆಗಡೆ