Advertisement

ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ಅನಿರೀಕ್ಷಿತ

10:48 AM Dec 10, 2019 | Team Udayavani |

ಧಾರವಾಡ: 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನವಾಗಿ ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ ಹಾಗೂ ಕಾವ್ಯದ ಚರ್ಚೆ ಮಾಡಲಾಗುವುದು. ಜೊತೆಗೆ ಕರ್ನಾಟಕ ಎದುರಿಸುತ್ತಿರುವ ಬಿಕ್ಕಟ್ಟಿನ ಕುರಿತು ಮಾತನಾಡಲಾಗುವುದು ಎಂದು ಸಮ್ಮೇಳನಾಧ್ಯಕ್ಷ, ಹಿರಿಯ ಕವಿ ಡಾ| ಎಚ್‌.ಎಸ್‌. ವೆಂಕಟೇಶಮೂರ್ತಿ ಹೇಳಿದರು.

Advertisement

ಜಯನಗರದಲ್ಲಿರುವ ಸಂಗಾತ ಪತ್ರಿಕೆಯ ಕಚೇರಿಯಲ್ಲಿ ಯುವ ಸಾಹಿತಿಗಳೊಂದಿಗೆ ಸೋಮವಾರ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು. ಕನ್ನಡ ತಾಯಿ, ಸಮುದಾಯ ಪ್ರೀತಿಯಿಂದ ಸಮ್ಮೇಳನದ ಅಧ್ಯಕ್ಷತೆ ಕೊಟ್ಟಿದ್ದಾರೆ.

ಅದನ್ನು ಒಪ್ಪಿಕೊಳ್ಳದೇ ಇದ್ದರೆ ಅಹಂಕಾರ ಅನ್ನಿಸಲಿದೆ. ನಾನೊಬ್ಬ ಉತ್ಸವ ಮೂರ್ತಿ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅನಿರೀಕ್ಷಿತ. ಇದನ್ನು ಸಾಹಿತ್ಯ ಪರಿಷತ್ತು ನೀಡಿದೆ. ಸಮ್ಮೇಳನದ ರೂಪುರೇಷೆಗಳನ್ನು ಅದುವೇ ನೋಡಿಕೊಳ್ಳಲಿದೆ ಎಂದರು.

ಭಾರತಾಂಬೆ ಹಾಗೂ ಕನ್ನಡಾಂಬೆ 20ನೇ ಶತಮಾನದ ದೇವರು. ಬದಲಾವಣೆ ಜಗದ ನಿಯಮ. ಸಾಕಷ್ಟು ವ್ಯತ್ಯಾಸ ಕಾಣಬಹುದು.ದಾಸ ಸಾಹಿತ್ಯ, ನವೋದಯ, ನವ್ಯ, ಹೊಸ ಗನ್ನಡ, ಆಧುನಿಕ ಕನ್ನಡ ಹೀಗೆ ಆಯಾ ಕಾಲಘಟ್ಟಕ್ಕೆ ಕವಿತೆಗಳು ಬದಲಾಗಿವೆ. ಮೊದಲಿನಂತೆ ಕ್ಲಿಷ್ಟತೆ ಹಾಗೂ ಸಂಸ್ಕೃತದ ಪ್ರಭಾವ ಇಂದಿನ ಕವಿತೆಗಳಲ್ಲಿ ಇಲ್ಲ. ಕನ್ನಡ ತಾಯಿ, ಇಂಗ್ಲಿಷ್‌, ಹಿಂದಿ, ಸಂಸ್ಕೃತ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು ಸಮೃದ್ಧವಾಗಿ ಬೆಳೆದಿದ್ದಾಳೆ. ಹೀಗಾಗಿ ಯುವ ಕವಿಗಳು ಭಾಷೆಯ ಜ್ಞಾನ ಹಾಗೂ ಅರ್ಥದ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಯುವ ಸಾಹಿತಿಗಳು, ಬರಹಗಾರರು ತಮ್ಮ ಆತ್ಮ ಸ್ವರೂಪ ಕಳೆದುಕೊಳ್ಳಬಾರದು. ಇಂದಿನ ಭಾಷೆ ಹೇಗಿದೆ ಹಾಗೆಯೇ ವರ್ಣನೆ ಮಾಡಬೇಕು. ಭಾಷೆ ಬಗ್ಗೆ ವಿಶ್ವಾಸ ಇಡಬೇಕು. ಅವಸರದ ಸಾಹಿತ್ಯ ರಚಿಸಬಾರದು ಎಂದು ಸಲಹೆ ನೀಡಿದರು. ಸಾಹಿತಿ ಟಿ.ಎಸ್‌. ಗೊರವರ ಅವರು ಇದ್ದ ಕೆಲಸವನ್ನು ಬಿಟ್ಟು ಲಾಭದಾಯಕವಲ್ಲದ ಪತ್ರಿಕೆ ನಡೆಸುವ ಮೂಲಕ ಯುವ ಸಾಹಿತಿಗಳಿಗೆ ಅವಕಾಶ ನೀಡುತ್ತಿದ್ದಾರೆ. ಸಂಗಾತದಂತಹ ಪತ್ರಿಕೆ ಇಂದಿನ ತುರ್ತು ಎಂದರು. ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ, ಸಾಹಿತಿ ಟಿ.ಎಸ್‌. ಗೊರವರ, ಯುವ ಸಾಹಿತಿಗಳು, ಕನ್ನಡ ವಿಷಯದ ಸಂಶೋಧನಾ ವಿದ್ಯಾರ್ಥಿಗಳು ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next