Advertisement

ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಫೈನಲ್‌ ಆಗಿಲ್ಲ

06:25 AM Oct 13, 2017 | Team Udayavani |

ಬೆಂಗಳೂರು: “ಮುಂದಿನ ವಿಧಾನಸಭೆ ಚುನಾವಣೆಗೆ ಇನ್ನೂ ಅಭ್ಯರ್ಥಿಗಳ ಪಟ್ಟ ಅಂತಿಮಗೊಳಿಸಿಲ್ಲ. ಹೀಗಾಗಿ, ಯಾರೂ
ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡಬಾರದು. ಅಲ್ಲದೆ, ಯಾವುದೇ ಕ್ಷೇತ್ರದಲ್ಲಿ ಇಬ್ಬರು ಆಕಾಂಕ್ಷಿಗಳಿಗಿಂತ ಹೆಚ್ಚಾಗಿದ್ದರೆ ಸಮೀಕ್ಷೆ ಮಾಡಿಸಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗುವುದು’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

Advertisement

ಜೆಡಿಎಸ್‌ ಕಚೇರಿಯಲ್ಲಿ ಕಾನೂನು ಘಟಕದ ಪದಾಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

“ಯಾವ ಕ್ಷೇತ್ರಕ್ಕೂ ಅಭ್ಯರ್ಥಿಯ ಹೆಸರನ್ನು ಫೈನಲ್‌ ಮಾಡಿಲ್ಲ. ಹೀಗಾಗಿ, ಯಾರೂ ನನಗೆ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಿಕೊಂಡು ತಿರುಗಾಡಬಾರದು. ಅಭ್ಯರ್ಥಿಗಳ ಪಟ್ಟಿಯನ್ನು ನಾನು ಮತ್ತು ಕುಮಾರಸ್ವಾಮಿ ಇಬ್ಬರೇ ಸೇರಿ
ಅಂತಿಮಗೊಳಿಸಲ್ಲ. ಪಕ್ಷದ ಕೋರ್‌ ಕಮಿಟಿ ಅಂತಿಮಗೊಳಿಸುತ್ತದೆ. ವೈ.ಎಸ್‌.ವಿ.ದತ್ತಾ ಹಾಗೂ ವೆಂಕಟರಾವ್‌ ನಾಡಗೌಡರ ರೀತಿಯಲ್ಲಿ ಮನೆ, ಮನೆಗೆ ಕುಮಾರಣ್ಣ ಅಭಿಯಾನ ಹಾಗೂ ಪಕ್ಷದ ಕಾರ್ಯಕ್ರಮ ತಲುಪಿಸಬೇಕು’ ಎಂದು ಹೇಳಿದರು.

ರಾಜ್ಯದಲ್ಲಿ 55 ಕ್ಷೇತ್ರಗಳಲ್ಲಿ ಒಬ್ಬರೇ ಆಕಾಂಕ್ಷಿಗಳಿದ್ದಾರೆ. ಕರಾವಳಿ ಭಾಗದಿಂದ ಟಿಕೆಟ್‌ ಆಕಾಂಕ್ಷಿಗಳು ಬಂದಿಲ್ಲ. ಮೈಸೂರಿನ ಚಾಮರಾಜ ಕ್ಷೇತ್ರದಿಂದ ಸಂದೇಶಸ್ವಾಮಿ, ಲಿಂಗಪ್ಪ ಅರ್ಜಿ ಹಾಕಿದ್ದಾರೆ. ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಮತ್ತು ಪ್ರದೀಪ್‌ಗೌಡ ಕೂಡ ಆಕಾಂಕ್ಷಿಗಳಾಗಿದ್ದಾರೆ. ಯಾರಿಗೂ ಫೈನಲ್‌ ಮಾಡಿಲ್ಲ ಎಂದು ತಿಳಿಸಿದರು.

ನವೆಂಬರ್‌ 7 ರಂದು ಅರಮನೆ ಮೈದಾನದಲ್ಲಿ ಯಾದವ ಸಮಾವೇಶವಿದೆ. 16ರಂದು ಪರಿಶಿಷ್ಟ ಜಾತಿ ಮತ್ತು ವರ್ಗದ ಸಮಾವೇಶ ಮಾಡುತ್ತೇವೆ ಎಂದು ತಿಳಿಸಿದರು.

Advertisement

ಜೆಡಿಎಸ್‌ನಲ್ಲಿ ಕಾನೂನು ಘಟಕ ಸ್ಥಗಿತವಾಗಿತ್ತು. ರಂಗನಾಥ್‌ ಮೂಲಕ ಮತ್ತೆ ಆರಂಭವಾಗಿದೆ. ರಾಜ್ಯಮಟ್ಟದಲ್ಲಿ ಸಮಾವೇಶ
ಮಾಡುವ ಚಿಂತನೆಯೂ ಇದೆ. ಜನ ಬೆಂಬಲವಿದ್ದು ಸ್ಪರ್ಧಿಸುವ ಮನಸ್ಸಿದ್ದರೆ ನಿಮಗೆ ಅವಕಾಶ ಮಾಡಿಕೊಡುತ್ತೇನೆ ಎಂದು ರಂಗನಾಥ್‌ ಅವರಿಗೆ ತಿಳಿಸಿದರು. ಪಕ್ಷದ ವತಿಯಿಂದ ನಾವು ನಿರಂತರ ಹೋರಾಟ ಹಮ್ಮಿಕೊಳ್ಳಬೇಕು. ಪಕ್ಷಕ್ಕೆ ಸಲಹೆ-ಸೂಚನೆ ನೀಡಲು ಕಾನೂನು ಘಟಕ ಅಗತ್ಯವಿದೆ ಎಂದರು. ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next