Advertisement

ಕಾಂಗ್ರೆಸ್‌ ಕಣ್ಣಿಗೆ ಧೃತರಾಷ್ಟ್ರನ ಪಟ್ಟಿ

12:25 PM Feb 27, 2018 | |

ಬಸವಕಲ್ಯಾಣ (ಬೀದರ): ಕಾಂಗ್ರೆಸ್ಸಿನವರು ಕಣ್ಣಿಗೆ ಧೃತರಾಷ್ಟ್ರನ ಪಟ್ಟಿ ಕಟ್ಟಿಕೊಂಡಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಅವರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕೈ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ “ನವಶಕ್ತಿ ಸಮಾವೇಶ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಬಡ, ದೀನ- ದಲಿತರು ಸೇರಿದಂತೆ ಎಲ್ಲ ವರ್ಗದ ಜನರಿಗಾಗಿ 112 ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದ್ದು, ಅವುಗಳನ್ನು ಎಣಿಸುವಷ್ಟರಲ್ಲಿಯೇ ರಾಹುಲ್‌ ಬಾಬಾಗೆ ಸುಸ್ತಾಗಿ ಬಿಡುತ್ತದೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಸುತ್ತಾಡುತ್ತಿರುವ ರಾಹುಲ್‌ ಬಾಬಾ ಅವರು, ಮೋದಿ ಸರ್ಕಾರ ನಾಲ್ಕು ವರ್ಷದಲ್ಲಿ ಏನು ಮಾಡಿದೆ, ನಮಗೆ ಲೆಕ್ಕ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ, ಗಾಂಧಿ ಪರಿವಾರದ ನಾಲ್ಕು ಪೀಡೆಗಳು ದೇಶದಲ್ಲಿ ನಡೆಸಿರುವ ಅಧಿಕಾರದ ಲೆಕ್ಕ ಹೇಳಲಿ. ನಮಗೆ ಬೇಡ, ಕರ್ನಾಟಕದ ಜನತೆಗೆ ಕೊಡಬೇಕಿದೆ. ಸ್ವಾತಂತ್ರ್ಯ ಭಾರತದಲ್ಲಿ 60 ವರ್ಷ ಕಳೆದರೂ ಬ್ಯಾಂಕ್‌ ಖಾತೆ, ಶೌಚಾಲಯ ಸೌಲಭ್ಯ ಕಲ್ಪಿಸಲು ಈ ಕಾಂಗ್ರೆಸ್‌ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಬಿಜೆಪಿ ಸರ್ಕಾರ ಈ ಕೆಲಸವನ್ನು ಕೆಲವೇ ವರ್ಷಗಳಲ್ಲಿ ಮಾಡಿ ತೋರಿಸಿದೆ. ಬಿಜೆಪಿ
ಸರ್ಕಾರದ ಸಾಧನೆಗಳನ್ನು ಹೇಳಬೇಕಾದರೆ ಭಾಗವತ್‌ ಸಪ್ತಾಹ ಕೂಡಿಸಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯದ ಸಿದ್ಧರಾಮಯ್ಯ ಸರ್ಕಾರ ಭ್ರಷ್ಟಾಚಾರದ ಎಲ್ಲ ರಿಕಾರ್ಡ್‌ಗಳನ್ನು ಮುರಿದು ಹಾಕಿದ್ದು, ಭ್ರಷ್ಟಾಚಾರವನ್ನು ಮೆಡಲ್‌ನಂತೆ ಎದೆ ಮೇಲೆ ಹಾಕಿಕೊಂಡು ಸುತ್ತಾಡುತ್ತಿದೆ. ಈ ಕಾರಣಕ್ಕೆ ಕರ್ನಾಟಕ ಅಭಿವೃದ್ಧಿ ಹೊಂದುತ್ತಿಲ್ಲ. ಸಮಾಜ ಸುಧಾರಕ ಬಸವಣ್ಣನ ನೆಲ ಇದು. ಟಿಪ್ಪು ಸುಲ್ತಾನ್‌ ನನ್ನು ಸ್ಮರಿಸುವ ಕಾಂಗ್ರೆಸ್‌ಗೆ ಬಸವಣ್ಣನ ನೆನಪಿಲ್ಲ. ಪಕ್ಷದ ನಾಯಕರು ಬಸವಣ್ಣನವರ ಚಿಂತನೆಗಳನ್ನು ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಂಡಿದ್ದರೆ ರಾಜ್ಯದ ಸ್ಥಿತಿ ಹೀಗಾಗುತ್ತಿರಲಿಲ್ಲ. ಐದು ವರ್ಷದ ಆಡಳಿತದಲ್ಲಿ ಸಿದ್ದು ಸರ್ಕಾರದ ಸಾಧನೆ ದೇಶ-ವಿದೇಶದಲ್ಲಿ ಹರಡಿದೆ. 40 ಲಕ್ಷ ರೂ. ವೆಚ್ಚದ ವಾಚ್‌ನ್ನು ಹಾಕಿ ಅಧಿಕಾರ ನಡೆಸಿದ ಏಕೈಕ ಸಿಎಂ ಸಿದ್ದರಾಮಯ್ಯ ಎಂದು ಕಿಡಿಕಾರಿದರು. 

ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ 13ನೇ ಹಣಕಾಸು ಆಯೋಗದಂತೆ 88 ಸಾವಿರ ಕೋಟಿ ರೂ. ಅನುದಾನ ದೊರೆತಿದ್ದರೆ, ಈಗ ಬಿಜೆಪಿ ಸರ್ಕಾರದಲ್ಲಿ 14ನೇ ಹಣಕಾಸು ಆಯೋಗದಡಿ 2.19 ಲಕ್ಷ ಕೋಟಿ ರೂ. ಹಣ ನೀಡಲಾಗಿದೆ. ಇದರ ಜತೆಗೆ ವಿವಿಧ ಯೋಜನೆಗಳಡಿ ಕಳೆದ ನಾಲ್ಕು ವರ್ಷದಲ್ಲಿ 1.10 ಲಕ್ಷ ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕೇಂದ್ರದ ಹಣ ಕಾಂಗ್ರೆಸ್‌ ನಾಯಕರ ಜೇಬು ಸೇರಿ, ಟಿನ್‌ ಶಡ್‌ ಗಳಲ್ಲಿ ವಾಸಿಸುತ್ತಿದ್ದ ಮುಖಂಡರು ನಾಲ್ಕಂತಸ್ತಿನ ಮನೆ- ಕಾರುಗಳಲ್ಲಿ ಮೆರೆಯುತ್ತಿದ್ದಾರೆ ಎಂದು
ಹೇಳಿದರು.

Advertisement

ಸಮಾವೇಶದಲ್ಲಿಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ರಾಜ್ಯ ಪ್ರಭಾರಿ ಮುರಳಿಧರರಾವ್‌, ಸಹ ಪ್ರಭಾರಿ ಪುರಂದೇಶ್ವರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಜಿಲ್ಲಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಸಂಸದ ಭಗವಂತ ಖೂಬಾ, ಶಾಸಕ ಪ್ರಭು ಚವ್ಹಾಣ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಸೂರ್ಯಕಾಂತ ನಾಗಮಾರಪಳ್ಳಿ, ಶಿವರಾಜ ಗಂದಗೆ, ಕೊಳ್ಳೂರ ಗುರುನಾಥ, ಲಿಂಗರಾಜ ಪಾಟೀಲ ಅಟ್ಟೂರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next