ಬೆಂಗಳೂರು: ಬಾಗೇಪಲ್ಲಿ-ಹಲಗೂರು ಹೆದ್ದಾರಿ ಅಗಲೀಕರಣಕ್ಕಾಗಿ ಕುದೂರು ವ್ಯಾಪ್ತಿಯಲ್ಲಿ ಮರಗಳನ್ನು ಕಡಿಯದಂತೆ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದರು.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಅವರು, ಬಾಗೇಪಲ್ಲಿ ಹಲಗೂರು ಹೆದ್ದಾರಿ ಅಗಲೀಕರಣಕ್ಕಾಗಿ ಕುದೂರು ವ್ಯಾಪ್ತಿಯಲ್ಲಿ ತಾವು ನೆಟ್ಟು ಪೋಷಿಸಿದ ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಇದನ್ನು ನಿಲ್ಲಿಸುವಂತೆ ಕೋರಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮರ ಕಡಿಯದಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಗ್ರಾಮದಲ್ಲಿ ಕೈಗೊಳ್ಳಬೇಕಾಗಿರುವ ಮೂಲಸೌಕರ್ಯ ಅಭಿವೃದ್ಧಿ ಕುರಿತು ತಿಮ್ಮಕ್ಕ ಮುಖ್ಯಮಂತ್ರಿಯವರ ಗಮನ ಸೆಳೆದರು.
ನೆರವು: ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಿಂದ ಮುಖ್ಯಮಂತ್ರಿಯವರನ್ನು ಕಾಣಲು ವಿಶಿಷ್ಠಚೇತನ ಮಹಿಳೆ ಮಾಯಕ್ಕ ಎಂಬುವರು ಬಂದು, ಸ್ವಯಂ ಉದ್ಯೋಗ ಮಾಡಲು ಆರ್ಥಿಕ ನೆರವು ಕೋರಿದರು. ಮುಖ್ಯಮಂತ್ರಿಯವರು ಸ್ವಉದ್ಯೋಗ ಕೈಗೊಳ್ಳಲು 50 ಸಾವಿರ ರೂ. ನೆರವು ಒದಗಿಸಿದರು. ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಚರ್ಚೆ: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಬೆಂಗಳೂರು ನಗರದಲ್ಲಿ ಮಳೆಯಿಂದ ಉಂಟಾಗುವ ಅನಾಹುತ ತಪ್ಪಿಸುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ತುರ್ತು ಕಾಮಗಾರಿಗಳ ಬಗ್ಗೆ ಚರ್ಚಿಸಿದರು.