ಬೇಕೆಂದರೂ ಸಿಗದ, ದೂರದಲ್ಲಿ ಬದುಕುತ್ತಿರುವ ಅಕ್ಕ-ತಂಗಿ-ತಮ್ಮಂದಿರು, ಬಾಲ್ಯ ಸ್ನೇಹಿತೆಯರು. ಸತ್ತು ಸ್ವರ್ಗ ಸೇರಿದ ಅಪ್ಪ-ಅಮ್ಮ- ಮಾಮ-ಅಣ್ಣ, ನನ್ನ ಪ್ರೀತಿಪಾತ್ರವಾಗಿ ಅಪಾರ ಸಂತೋಷ ಕೊಟ್ಟ ಈಗಿಲ್ಲದ ಬೆಕ್ಕುಗಳು, ಹುಟ್ಟೂರು, ನನ್ನ ಹವ್ಯಾಸಗಳು ಕೂಡ ಈಗ ನೆನಪು ಮಾತ್ರ. ಎಷ್ಟೋ ಚಟುವಟಿಕೆಗಳಲ್ಲಿ ನಾನು ಹೆಸರು ಪಡೆದಿದ್ದರೂ ಈಗ ಅವು ಬರೇ ನೆನಪು. ಎಷ್ಟೇ ರೂಪವತಿಯಾಗಿದ್ದರೂ ವಯಸ್ಸಾದಂತೆ ರೂಪ ಕೂಡ ನೆನಪೇ.
ಅಂದಮೇಲೆ, ನೀವು ಕೂಡ ನನ್ನ ನೆನಪಿನಲ್ಲಿ ಇರುವುದರಲ್ಲಿ ಏನು ವಿಶೇಷ? ಜಂಭ ಪಡಬೇಡಿ. ಬೇಡದ ನೆನಪುಗಳನ್ನು ಅಳಿಸುವುದು, ಅಮೂಲ್ಯ ವಾದವುಗಳನ್ನು ನೆನಪಿನ ಆಲ್ಬಮ್‌ಗಳಲ್ಲಿ ಭದ್ರವಾಗಿ ಜೋಪಾನ ಮಾಡುವುದು, ಪ್ರತಿ ದಿನ ಹೊಸ ನೆನಪುಗಳ ಖಜಾನೆಗೆ ಸ್ವಲ್ಪ ಸ್ವಲ್ಪವೇ ಭರ್ತಿ ಮಾಡುತ್ತಾ ಹೋಗುವುದೇ ಜೀವನವಲ್ಲವೆ? ನನ್ನ ಜೀವನದ ಅವಿಭಾಜ್ಯ ಅಂಗವಾಗಿ ಮನಸ್ಸಿಗೆ ಮುದ ನೀಡಿ ಈಗಿಲ್ಲದವರೂ, ಜೀವಂತವಿದ್ದೂ ನಮ್ಮೊಂದಿಗೆ ಇಲ್ಲದವರೂ ನನ್ನ ನೆನಪುಗಳಲ್ಲಿದ್ದಾರೆ.
ಮನಸ್ಸಿನ ಫೋಟೋ ಆಲ್ಬಮ್‌ಗಳಲ್ಲಿ. ನಕ್ಷತ್ರಗಳು ತುಂಬಿದ ಆಕಾಶ, ಬೆಳದಿಂಗಳು, ತಂಗಾಳಿ, ಹುಟ್ಟೂರು, ಸೂರ್ಯಚಂದ್ರರನ್ನು ನನ್ನದು ಎನ್ನಬಹುದಾದರೆ ನೀವು ನನ್ನೊಟ್ಟಿಗಿಲ್ಲ ಎಂದು ಏಕೆ ಭಾವಿಸಬೇಕು? ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೊಡನೆ ಬದುಕುವ ಅದೃಷ್ಟವಿಲ್ಲ. ಅವರು ನಮ್ಮೊಡನೆ ಇಲ್ಲ ಎಂದೇನೂ ನಾವು ಭಾವಿಸುವುದಿಲ್ಲ. ಗಂಡನ ಮನೆಯಲ್ಲಿದ್ದಾರೆ ಎಂದು ಸಂತೋಷಪಡುತ್ತೇವೆ. ನೀವೂ ಹಾಗೇ, ಸದಾಕಾಲ, ಪ್ರತಿಕ್ಷಣವೂ ನನ್ನೊಂದಿಗೆ ಇದ್ದೀರಿ.
ದೇವರು ಸದಾ ನನ್ನೊಂದಿಗೆ ಇದ್ದಾನೆ ಎನ್ನುವುದಿಲ್ಲವೆ ನಾವು? ಯಾವ ಕಷ್ಟಕ್ಕೆ ತಾನೇ ಆಗಿದ್ದಾನೆ? ಕೂಗಿದಾಗ ಎಂದಾದರೂ ಬಂದಿದ್ದಾನೆಯೇ? ಹಾಗೆ… ನನ್ನ ಬಳಿ ಈಗ ಎಲ್ಲವೂ ಇದೆ. ಎಲ್ಲರೂ ಇದ್ದಾರೆ. ಸವಿನೆನಪುಗಳಲ್ಲಿ. ಪ್ರತಿದಿನ ಹೊಸ ಹೊಸ ನೆನಪುಗಳನ್ನು ಸೃಷ್ಟಿಸುವುದೇ ಬದುಕು. ಕೆಟ್ಟ ನೆನಪುಗಳನ್ನು ನಾನು ಆಗಿಂದಾಗ ಅಳಿಸಿ ಬಿಡುತ್ತೇನೆ. ಮೆಮೊರಿ ಫುಲ್ ಆದರೆ ಜೀವನವೆಂಬ ಫೋನೂ ಸ್ಲೋ ಆಗುತ್ತದೆ. ಹ್ಯಾಂಗ್ ಆಗುತ್ತದೆ. ಬೇಡದವುಗಳನ್ನು ಅಳಿಸುತ್ತಿರುತ್ತೇನೆ.
ಕಾಲವೆಂಬ ಕ್ಲೀನರ್ ಅಳಿಸಲಾಗದೆ ಇರುವಂಥದ್ದು ಯಾವುದೂ ಇಲ್ಲ. ಅದೇ ನಾವು ನಮ್ಮ ಭವಿಷ್ಯದ ಬಗ್ಗೆ ಕನಸು ಕಂಡರೆ ಆಹಾ ಓಹೋ… dream big ಎನ್ನುತ್ತಾರೆ. ಭೂತಕಾಲದ ನೆನಪುಗಳ ಮೇಲೆ ಕಬ್ಬಿಣದ ಪರದೆ ಎಳೆಯ ಬೇಕಂತೆ. ಯಾಕೋ? ಭೂತಕಾಲದ ನೆನಪುಗಳು ನನ್ನ ಆಸ್ತಿಯಲ್ಲವೆ? ಸಂಪತ್ತಿನ ಖಜಾನೆ. ನಾನು ಹೋರಾಡಿ ಗಳಿಸಿದ್ದು. ಸ್ವಯಾರ್ಜಿತ. ಸಾಯುವಾಗಲೂ ನನ್ನೊಂದಿಗೆ ಬರುತ್ತವೆ.
ನನ್ನ ಜೀನುಗಳಲ್ಲಿರುತ್ತವೆ. ಭೂತಕಾಲದಲ್ಲಿ ಎಲ್ಲವೂ ಕೆಟ್ಟದ್ದೇ ಆಗಿರುವುದೇನು? ಅಪಾರ ಅನುಭವ, ಸಂತೋಷ, ಆನಂದಗಳ ಭಂಡಾರವೇ ಇದೆಯಲ್ಲ, ಮುಂದಿನ ಜನ್ಮಗಳಿಗೂ ಸಾಲುವಷ್ಟು. ನನ್ನ ನೂರಾ ಒಂದು ನೆನಪುಗಳ ಹಣತೆಗಳಲ್ಲಿ ನಿಮ್ಮ ಹೆಸರಿನದೂ ಒಂದಿದೆ. ಸಾಲದೆ?
* ಸಂಗೀತಾ ಶೆಣೈ