Advertisement

ಚಿತ್ರಸಂತೆಗೆ ಮನಸೋತ ಬಿಸಿಲೂರ ಜನ

09:59 AM Feb 18, 2019 | Team Udayavani |

ರಾಯಚೂರು: ಬಹಳ ವರ್ಷಗಳ ಬಳಿಕ ನಗರದಲ್ಲಿ ನಡೆದ ಚಿತ್ರಕಲೆಗಳ ಪ್ರದರ್ಶನಕ್ಕೆ ಬಿಸಿಲೂರಿನ ಜನ ಮಾರು ಹೋದರು. ಕಲಾ ಸಂಕುಲ ಸಂಸ್ಥೆಯಿಂದ ಆಯೋಜಿಸಿದ್ದ ಚಿತ್ರ ಸಂತೆಗೆ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತಪವಾಯಿತು.

Advertisement

ನಗರದ ರಂಗಮಂದಿರ ಮುಂಭಾಗದ ಫುಟ್‌ಪಾತ್‌ ಮೇಲೆಯೇ ಕಲಾವಿದರ ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ನಿತ್ಯ ಖಾಲಿಯಾಗಿ ಬಣಗುಡುತ್ತಿದ್ದ ಈ ಪ್ರದೇಶ ಇಂದು ಮಾತ್ರ ಬಣ್ಣದಿಂದ ಕಂಗೊಳಿಸುತ್ತಿತ್ತು. ಅಲ್ಲದೇ ಇದು ಮುಖ್ಯ ರಸ್ತೆಯಾದ ಕಾರಣ ದಾರಿಹೋಕರು, ಕಲಾಸಕ್ತರು ಪ್ರದರ್ಶನ ಕಣ್ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು. 

ಬಗೆ ಬಗೆಯ ಕಲಾಕೃತಿಗಳು: ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 30ಕ್ಕೂ ಅಧಿಕ ಕಲಾವಿದರು ಪ್ರದರ್ಶನಕ್ಕೆ ಆಗಮಿಸಿದ್ದರು. ಅವರು ತಾವು ಬಿಡಿಸಿದ ಉತ್ತಮ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಅದರ ಜತೆಗೆ ಖರೀದಿಗೂ ಅವಕಾಶವಿತ್ತು. 500 ರೂ.ದಿಂದ 15 ಸಾವಿರ ರೂ. ಮೌಲ್ಯದ ಕಲಾಕೃತಿಗಳಿದ್ದವು. ಅದರ ಜತೆಗೆ ವುಡ್‌ ಪೇಂಟಿಂಗ್‌, ಮಣ್ಣಿನ ಮಡಕೆಗಳ ಮೇಲೆ ಬಿಡಿಸಿದ ಕಲಾಕೃತಿಗಳು ಕೂಡ ಪ್ರದರ್ಶಿಸಲ್ಪಟ್ಟವು. ಅಕ್ರಾಲಿಕ್‌, ಆಯಿಲ್‌ ಕಲರ್‌, ವಾಟರ್‌ ಪೇಂಟ್‌ ಸೇರಿ ವಿವಿಧ ಕಲಾಕೃತಿಗಳಿದ್ದವು.

ಆಕರ್ಷಕ ಚಿತ್ತಾರಗಳು: ಬೆಳಗಾವಿ, ಬೆಂಗಳೂರು, ಮೈಸೂರು ಮಾತ್ರವಲ್ಲದೇ ಈ ಭಾಗದ ಅನೇಕ ಕಲಾವಿದರು ಪಾಲ್ಗೊಂಡಿದ್ದರು. ಈ ಭಾಗದ ಐತಿಹಾಸಿಕ ಸ್ಥಳಗಳಾದ ಹಂಪಿ, ಆನೆಗುಂದಿ, ಮಲಯಬಾದ್‌, ಬೀದರ್‌ ಕೋಟೆ, ಗೋಲಗುಮ್ಮಟ ಹೀಗೆ ನಾನಾ ಕಲಾಕೃತಿಗಳಿದ್ದರೆ, ದಾಸರು, ಶರಣರ ಚಿತ್ರಗಳು ಆಕರ್ಷಕವಾಗಿದ್ದವು.

ಸ್ಥಳದಲ್ಲೇ ಚಿತ್ರ: ಕಲಾವಿದರು ಇನಸ್ಟಂಟ್‌ ಪ್ರೊಟೆಡ್‌ ಶೈಲಿಯಲ್ಲಿ ಸ್ಥಳದಲ್ಲೇ ಪೆನ್ಸಿಲ್‌ ಮೂಲಕ ಚಿತ್ರ ಬಿಡಿಸಿ ಕೊಡುತ್ತಿದ್ದರು. ಇಂತಿಷ್ಟು ಎಂದು ಶುಲ್ಕ ನಿಗದಿ ಮಾಡಲಾಗಿತ್ತು. ಸಾಕಷ್ಟು ಜನ ತಮ್ಮ ಚಿತ್ರವನ್ನು ಬಿಡಿಸಿಕೊಂಡು ಹೋಗಿದ್ದು ಕಂಡು ಬಂತು. ಇನ್ನು ಸಾಕಷ್ಟು ಜನತೆ, ಕಲಾಸಕ್ತರು ಸಣ್ಣಪುಟ್ಟ ಕಲಾಕೃತಿಗಳನ್ನು ಖರೀದಿಸುತ್ತಿದ್ದು ಕಂಡು ಬಂತು. ಆದರೆ, ದೊಡ್ಡ ಮೊತ್ತದ ಕಲಾಕೃತಿಗಳನ್ನು ಖರೀದಿಸಲು ಕಲಾಸಕ್ತರು ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಕಲಾವಿದರು.

Advertisement

ಗಾಳಿಗೆ ಪೇಂಟಿಂಗ್‌ಗಳು: ಆಯೋಜಕರು ಪೇಂಟಿಂಗ್‌ಗಳ ಪ್ರದರ್ಶನಕ್ಕೆ ಫುಟ್‌ ಪಾತ್‌ ನೀಡಿದ್ದರಿಂದ ಕಲಾವಿದರು ತಮ್ಮ ಕಲಾಕೃತಿಗಳನ್ನು ಗಾಳಿಯಿಂದ ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅದರ ಬದಲಿಗೆ ಪಕ್ಕದಲ್ಲೇ ಇರುವ ಉದ್ಯಾನವನ ಇಲ್ಲವೇ ಜಿಲ್ಲಾ ಕ್ರೀಡಾಂಗಣದಲ್ಲಿ ಅವಕಾಶ ಮಾಡಿಕೊಡಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರಚಾರ ಸಿಕ್ಕಿರದ ಕಾರಣ ರಸ್ತೆ ಬದಿ ಪ್ರದರ್ಶನಕ್ಕೆ ಇಟ್ಟಿರುವುದಕ್ಕೆ ಜನರಿಗೆ ಈ ಬಗ್ಗೆ ತಿಳಿಯಿತು ಎಂಬ ಮಾತುಗಳು ಕೇಳಿ ಬಂದವು.

ಚಿತ್ರ ಖರೀದಿಸಿ ಪ್ರೋತ್ಸಾಹಿಸಿ: ವಸಂತ
ರಾಯಚೂರು: ಯಾವುದೇ ಕಲೆ ಅಳಿಯದೆ ಉಳಿಯಬೇಕಾದರೆ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಹಾಗೂ ನೆರವು ಅಗತ್ಯ. ಹೀಗಾಗಿ ಇಲ್ಲಿ ಪ್ರದರ್ಶಿಸುವ ಕಲಾಕೃತಿಗಳನ್ನು ನೋಡಿ ಆನಂದಿಸುವುದರ ಜತೆಗೆ ಖರೀದಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತ ಕುಮಾರ ಹೇಳಿದರು.

ನಗರದ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದ ಡಾ| ಶಂಕರಗೌಡ ಬೆಟ್ಟದೂರು ವೇದಿಕೆಯಲ್ಲಿ ಕಲಾ ಸಂಕುಲ ಸಂಸ್ಥೆಯಿಂದ ಹಮ್ಮಿಕೊಂಡ ರಾಯಚೂರು ಚಿತ್ರಸಂತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈವರೆಗೆ ಜಿಲ್ಲೆಯಲ್ಲಿ ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಕೆಲಸ ಆಗಿಲ್ಲ. ರಾಜ್ಯದ ಮೂಲೆ-ಮೂಲೆಗಳಿಂದ ಕಲಾವಿದರನ್ನು ಕರೆಯಿಸಿ, ಚಿತ್ರ ಸಂತೆ ಮೂಲಕ ಅವರ ಕಲೆಗೆ ಆದ್ಯತೆ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಇಂದು ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಎಲ್ಲರೂ ಜಾಗೃತರಾಗಿ ನಮ್ಮ ಸುತ್ತ-ಮುತ್ತ ಜರುಗುವ ಉಗ್ರ ಚಟುವಟಿಕೆಗಳಗೆ ಕಡಿವಾಣ ಹಾಕಬೇಕು. ದೇಶದ ಅನ್ನ ತಿಂದು ಪಕ್ಕದ ದೇಶಕ್ಕೆ ಜೈಕಾರ ಹಾಕುವವರನ್ನು ತೊಲಗಿಸಬೇಕು ಎಂದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿ, ಹಿಂದೆ ಪಕ್ಷದ ಮುಖಂಡರು ಚಿತ್ರ ಬಿಡಿಸಿಕೊಡುವಂತೆ ಕಲಾವಿದರ ಮನೆಗಳಿಗೆ ಹೋಗುತ್ತಿದ್ದರು. ಆದರೆ, ಇಂದು ಫ್ಲೆಕ್ಸ್‌ ಹಾವಳಿ ಹೆಚ್ಚಾಗಿ ಕಲಾವಿದರಿಗೆ ಕೆಲಸವಿಲ್ಲದಾಗಿದೆ ಎಂದು ವಿಷಾದಿಸಿದರು. ಕಾರ್ಯಕ್ರಮ ಆರಂಭದಲ್ಲಿ ಹುತಾತ್ಮ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಾನಸಿಕ ರೋಗ ತಜ್ಞ ಡಾ| ಮನೋಹರ ವೈ.ಪತ್ತಾರ, ಸಾಹಿತಿ ವೀರ ಹನುಮಾನ್‌, ಕಲಾವಿದ ಚಾಂದಪಾಷಾ, ಗುತ್ತಿಗೆದಾರ ಮುಜಿಬುದ್ದೀನ್‌, ಸಾಹಿತಿ ಈರಣ್ಣ ಬೆಂಗಾಲಿ, ಬಿಜೆಪಿಯ ವಿಜಯರಾಜೇಶ್ವರಿ ಗೋಪಿಶೆಟ್ಟಿ, ಕಲಾ ಸಂಕುಲ ಸಂಸ್ಥೆ ಅಧ್ಯಕ್ಷೆ ರೇಖಾ ಬಡಿಗೇರ, ಅಮರೇಗೌಡ, ಶಶಿಕುಮಾರ ಹಿರೇಮಠ ಸೇರಿ ಇತರರಿದ್ದರು. ಮಾರುತಿ ಬಡಿಗೇರ ನಿರೂಪಿಸಿದರು.

ನಮ್ಮ ತಂದೆಯವರು ಮಡಿಕೆಗಳ ಮೇಲೆ ಬಣ್ಣದ ಕಲಾಕೃತಿಗಳನ್ನು ಬಿಡಿಸುತ್ತಾರೆ. ನನಗೆ ಪೇಂಟಿಂಗ್‌ ತುಂಬಾ ಇಷ್ಟವಾದ ಕಾರಣ ಈ ವರ್ಷ ಕೋರ್ಸಗೆ ಸೇರಿದ್ದೇನೆ. ನಮ್ಮ ತಂದೆಯ ಕಲಾಕೃತಿಗಳು, ನನ್ನ ಪೇಂಟಿಂಗ್‌ಗಳನ್ನು ತಂದು ಪ್ರದರ್ಶನಕ್ಕೆ ಇಟ್ಟಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.
 ಪದ್ಮಿನಿ ಕುಲಕರ್ಣಿ, ಕಲಾವಿದೆ, ಬೆಳಗಾವಿ

ರಾಯಚೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯ ಮಾತ್ರವಲ್ಲದೇ ಬೇರೆ ರಾಜ್ಯಗಳಿಂದಲೂ ಕಲಾವಿದರು ಬಂದಿದ್ದಾರೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಂಜೆಯಾಗುತ್ತಲೇ ಜನರ ಸಂಖ್ಯೆ ಹೆಚ್ಚಾಯಿತು.
 ಶಶಿಕುಮಾರ ಹಿರೇಮಠ, ಕಾರ್ಯಕ್ರಮ ಆಯೋಜಕರು

Advertisement

Udayavani is now on Telegram. Click here to join our channel and stay updated with the latest news.

Next