Advertisement
ಅವಳು ಅತ್ತಾಗ ಕಂಬನಿಯಳಿಸಿ ಮೊಗದಲ್ಲಿ ನಗು ಅರಳಿಸುವ ಹೊಂಬೆಳಕು ಅವಳು. ಅಸ್ವಸ್ಥರಾದಾಗ ತನ್ನ ಮಡಿಲಲ್ಲಿ ಮಲಗಿಸಿ ಸಲಹಿದ ವೈದ್ಯೆ ಅವಳು. ಬಳಪ ಹಿಡಿದು ಜೀವನದ ವರ್ಣಮಾಲೆ ಕಲಿಸಿದ ಶಿಕ್ಷಕಿಯವಳು. ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು… ಎಂದು ಜೋಗುಳ ಹಾಡಿ ನಮ್ಮನ್ನು ನಿದಿರಾ ಲೋಕಕ್ಕೆ ಒಯ್ಯುತ್ತಿದ್ದ ಗಾಯಕಿ ಅವಳು. ನವಜಾತರಾಗಿದ್ದ ನಮ್ಮ ಹಸಿವಿನ ಕೂಗು ಕೇಳಿ, ತನ್ನ ಮೊಲೆ ಹಾಲುಣಿಸಿ ನಮ್ಮ ಹಸಿವು ನೀಗಿದ ಅನ್ನದಾತೆ ಅವಳು, ನಮ್ಮನ್ನು ಈ ಜಗತ್ತಿಗೆ ಪರಿಚಯಿಸಿದ ಜನ್ಮದಾತೆ ಅವಳು.
ಸ್ಮತಿಪಟಲದ ಪುಟಗಳನ್ನು ಒಮ್ಮೆ ಹಿಂದಿರುಗಿಸಿ ನೋಡಿದಾಗ ಆ ಸುಂದರ ಬಾಲ್ಯದ ದೃಶ್ಯಾವಳಿ ಕಣ್ಮುಂದೆ ಹರಿದಾಡುತ್ತವೆ. ತೊದಲುತ್ತ ಮಗುವೊಂದು ಮೊದಲ ಬಾರಿಗೆ “ಅಮ್ಮಾ!’ ಎಂದು ಕೂಗಿದಾಗ ತಾಯಿಯ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಕಂದನ ಮೊದಲ ನುಡಿ, ಮೊದಲ ನಗು, ಮೊದಲ ಪಾಠ, ಮೊದಮೊದಲ ತುಂಟತನ ಇವೆಲ್ಲ ತಾಯಿಯಾದವಳಿಗೆ ಮುತ್ತುರತ್ನಗಳಿಗಿಂತಲೂ ಅಮೂಲ್ಯವಾದವು. ಇನ್ನು ನನ್ನ ಅಮ್ಮನಿಗಂತೂ ನನ್ನನ್ನು ಮೊದಲ ಬಾರಿ ಶಾಲೆಗೆ ಕಳಿಸುವ ಹುಮ್ಮಸ್ಸು ತಾರಕಕ್ಕೇರಿತ್ತು. ಬ್ಯಾಗನ್ನು ಹೆಗಲಿಗೇರಿಸಿ, ಕುತ್ತಿಗೆಗೆ ನೀರಿನ ಬಾಟಲ್ ಜೋತುಹಾಕಿ, ಅಮ್ಮ ಕಟ್ಟಿದ ಎರಡು ಜುಟ್ಟನ್ನು 20 ಸಾರಿ ಕನ್ನಡಿಯಲ್ಲಿ ನೋಡಿದ ನಂತರ ಶಾಲೆಗೆ ಹೊರಡುತ್ತಿದ್ದೆ. ಹೊರಡುವಾಗ ನಗುನಗುತ್ತ ಹೊರಟರೂ, ಹಲವಾರು ಬಾರಿ ಶಾಲೆಯ ಗೇಟ್ ನೋಡಿಯೇ ಓಡಿ ಬರುತ್ತಿದ್ದ ನನ್ನ ಈ ಪ್ರಸಂಗವನ್ನು ಅಂದೊಮ್ಮೆ, ಇಂದೊಮ್ಮೆ ವಾಚಿಸುವ ಪರಂಪರೆಯನ್ನು ಅಮ್ಮ ಬೆಳೆಸಿಕೊಂಡಿದ್ದಾಳೆ !
Related Articles
Advertisement
ಅಮ್ಮನಿಲ್ಲದ ಜೀವನ ಊಹಿಸಲೂ ಸಾಧ್ಯವಿಲ್ಲ. ಎಲ್ಲರಿಗೂ ಈ ಅಮ್ಮನೆಂಬ ವರದಾನ ಲಭಿಸಿರುವುದಿಲ್ಲ. ಅವಳು ನಮ್ಮ ಬಳಿ ಇದ್ದಾಳೆಯೆಂದರೆ ನಾವು ಅತ್ಯಂತ ಭಾಗ್ಯವಂತರು. ತಾನು ಎಲ್ಲ ಕಡೆಯಲ್ಲೂ ಇರಲು ಸಾಧ್ಯವಿಲ್ಲ ಎಂದು ದೇವರು ತಾಯಿಯನ್ನು ಸೃಷ್ಟಿಸಿದನಂತೆ. ಆದರೆ, ನಾವು ದೇಗುಲದಲ್ಲಿ ದೇವರನ್ನು ಹುಡುಕುವ ಭರದಲ್ಲಿ, ಪ್ರತ್ಯಕ್ಷ ದೇವತೆಯನ್ನೇ ಮರೆಯುತ್ತೇವೆ. ಪ್ರತಿದಿನ, ಪ್ರತಿ ಕ್ಷಣ ನಮ್ಮನ್ನು ಕೊಂಚ ಹೆಚ್ಚು ಪ್ರೀತಿಸುವ ಅಮ್ಮನಿಗೆ ಶುಭ್ರವಾಗಿ ಮುಗುಳ್ನಕ್ಕು ಧನ್ಯವಾದ ಹೇಳಲು “ಮದರ್ ಡೇ’ಗೆ ಕಾಯಬೇಕಿತ್ತೆ? ನನ್ನ ಪಾಲಿಗೆ ಪ್ರತಿದಿನವೂ ಮದರ್ಸ್ ಡೇ !
ಇಂದೇ ಹೇಳಿ, ಉಹೂಂ ಈಗಲೇ ಹೇಳಿ. ಅಮ್ಮಾ ಥ್ಯಾಂಕ್ಯೂ!
-ಶಿವರಂಜನಿದ್ವಿತೀಯ ಪಿಯುಸಿ
ಗೋವಿಂದದಾಸ ಪ. ಪೂ. ಕಾಲೇಜು, ಸುರತ್ಕಲ್