ಕಾರಟಗಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿಗೆ ಹಿಂಗಾರು ಹಂಗಾಮಿನ ಭತ್ತದ ಪೈರು ನೆಲಕಚ್ಚಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತುಂಗಭದ್ರಾ ಎಡದಂಡೆ ನಾಲೆಗೆ ಈ ಬಾರಿ ಬೇಸಿಗೆಗೆ ನೀರು ಬಿಡದ ಕಾರಣ ಬೋರ್‌ವೆಲ್ ಇದ್ದ ಕೆಲ ಪಂಪ್ ಸೆಟ್ ಆಧಾರಿತ ರೈತರು ಭತ್ತ ನಾಟಿ ಮಾಡಿ, ಅಸಮರ್ಪಕ ವಿದ್ಯುತ್ ಪೂರೈಕೆ ನಡುವೆಯೂ ಭತ್ತ ಬೆಳೆದಿದ್ದರು. ಕಟಾವು ಸಮಯಕ್ಕೆ ಬಂದಿರುವ ಹೊತ್ತಿನಲ್ಲಿ ಬೀರುಗಾಳಿಗೆ ಸಿಲುಕಿ ಭತ್ತದ ಪೈರು ನೆಲ್ಕಕುರುಳಿದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ನೆಲಕ್ಕುರುಳಿದ ಭತ್ತವನ್ನು ಎತ್ತಿ ಸಿವುಡು ಮಾಡಿ ಕಟ್ಟಲು ಪ್ರತ್ಯೇಕವಾಗಿ ಕೂಲಿ ಆಳುಗಳನ್ನಿಡಬೇಕು.
ಮತ್ತೆ ಪ್ರತಿ ಎಕರೆಗೆ 5ರಿಂದ 6 ಸಾವಿರ ಹಣ ವ್ಯಯಿಸಬೇಕು. ಬೆಳೆಹಾಯಾದರೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿಲ್ಲ. ಎರಡೂಮೂರು ದಿನಗಳಿಂದ ಸಂಜೆಯಾಗುತ್ತಿದ್ದಂತೆ ಮೋಡ ಕವಿಯುತ್ತದೆ. ಆದರೆ ಮಳೆ ಬರುತ್ತಿಲ್ಲ. ಮಳೆ ಬಂದರೆ ನಮ್ಮ ಪರಿಸ್ಥಿತಿ ಅದೋಗತಿ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.
ಮುಂಗಾರು ಹಂಗಾಮಿನಲ್ಲಿ 75 ಕೆಜಿ ಭತ್ತಕ್ಕೆ 1300ರಿಂದ 1350. ರೂ. ವರೆಗೆ ಮಾರುಕಟ್ಟೆಯಲ್ಲಿ ಬೆಲೆ ದೊರಕಿತ್ತು. ಆದರೆ ಇಂದು ಮಾರುಕಟ್ಟೆಯಲ್ಲಿ 1240ರಿಂದ 1250 ರೂ. ಇದೆ. ಭತ್ತ ಕಟಾವು ಸಮಯದಲ್ಲಿ ಭತ್ತದ ಬೆಲೆ ಕುಸಿಯುತ್ತಿದೆ. ಇದರಿಂದಾಗಿ ರೈತರು ತೀವ್ರ ತೊಂದರೆಗೆ ಒಳಗಾಗುತ್ತಿದ್ದೇವೆ ಎಂದು ರೈತ ಶಿವರಾಜ ಸಜ್ಜನ ಹೇಳಿದರು.
ಪನ್ನಾಪುರ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 22 ಎಕರೆಯಲ್ಲಿ ಪಂಪ್‌ಸೆಟ್ ಉಳ್ಳ ರೈತರು ಎಕರೆ, ಎರಡೆಕರೆ ಗದ್ದೆಗಳಲ್ಲಿ ಭತ್ತ ನಾಟಿ ಮಾಡಿದ್ದಾರೆ. 10-15 ದಿನಗಳಲ್ಲಿ ಭತ್ತ ಕಟಾವು ಮಾಡಲಾಗುತ್ತಿತ್ತು. ಆದರೆ ಬೀರುಗಾಳಿಯಿಂದ ಪೈರು ನೆಲಕ್ಕುರುಳಿದೆ. ರೈತರಾದ ಶಿವರಾಜ್ ಸಜ್ಜನ, ಬುಡ್ಡನಗೌಡ ಖಾಜಾಸಾಬ್, ಬಸವರಾಜ ಪನ್ನಾಪುರ, ನಾಗಭೂಷಣ ಸಜ್ಜನ, ಇವರ ಭತ್ತದ ಗದ್ದೆಗಳಲ್ಲಿ ಪ್ರತಿ ಎಕರೆಗೆ ಶೇ. 40ರಷ್ಟು ಭತ್ತ ಹಾನಿಯಾಗಿದೆ ಎಂದು ರೈತ ಶರಣೆಗೌಡ ಮಾಲಿಪಾಟೀಲ್ ತಿಳಿಸಿದರು.