Advertisement

ಸರಸ್ವತಿ ಪುತ್ರರ ನಡುವೆ ಬದುಕಿದ್ದೇ ನನ್ನಜೀವನದ ಸಾರ್ಥಕತೆ: ರಾಜೇಶ್ವರಿ

03:35 PM Dec 14, 2018 | Team Udayavani |

ಚಿಕ್ಕಮಗಳೂರು: ದಿವ್ಯಶಕ್ತಿ ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿ ಅವರಂತಹ ಸರಸ್ವತಿ ಪುತ್ರರ ನಡುವೆ ಬದುಕಿದ್ದೇ ನನ್ನ ಜೀವನದ ಸಾರ್ಥಕತೆ ಎಂದು ರಾಜೇಶ್ವರಿ ತೇಜಸ್ವಿ ಹೇಳಿದರು. ನಗರದ ಕುವೆಂಪು ಕಲಾ ಮಂದಿರದಲ್ಲಿ ಮೈಸೂರು ರಂಗಾಯಣ ಪ್ರಸ್ತುತಪಡಿಸಿದ ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ರಂಗರೂಪ ವೀಕ್ಷಿಸಿ ತಮಗೆ 82 ವರ್ಷ ತುಂಬಿದ ಹಿನ್ನೆಲೆಯಲ್ಲಿ ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

Advertisement

ಕುವೆಂಪು ಬರೀ ವ್ಯಕ್ತಿಯಲ್ಲ, ಅವರೊಂದು ದಿವ್ಯಶಕ್ತಿ. ಪೂರ್ಣಚಂದ್ರ ತೇಜಸ್ವಿ ಕೂಡ ಸರಸ್ವತಿ ಪುತ್ರ. ಇಂತಹ ದಿವ್ಯಶಕ್ತಿಗಳ ಸಾನ್ನಿಧ್ಯದಲ್ಲಿ ನಾನು ಬದುಕಿದ್ದೆ ಎಂಬುದೇ ಒಂದು ಸಾರ್ಥಕ ಭಾವನೆ ನೀಡುತ್ತದೆ ಎಂದರು.
 
ಶ್ರೀರಾಮಾಯಣ ದರ್ಶನಂನಲ್ಲಿ ಕುವೆಂಪು ವೈಚಾರಿಕ ದರ್ಶನ ಮಾಡಿಸಿದ್ದಾರೆ. ಇಂತಹ ಮಹಾಕಾವ್ಯವನ್ನು ರಂಗರೂಪಕ್ಕೆ ಅಳವಡಿಸುವುದು ಸುಲಭದ ಮಾತಲ್ಲ. ಆದರೆ,
ಮೈಸೂರು ರಂಗಾಯಣ ಆ ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಮಾಡಿದೆ. ಇಡೀ ನಾಟಕ ನೋಡುವಾಗ ನಾನು ಭೂಮಿ ಮೇಲಿದ್ದೇನೋ ಮತ್ಯಾವುದೋ ಲೋಕದಲ್ಲಿದ್ದೇನೋ ಎಂದು ಭಾಸವಾಗುತ್ತಿತ್ತು. ಕುವೆಂಪು ಅವರ ಆಶಯಕ್ಕೆಧಕ್ಕೆಯಾಗದಂತೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಪ್ರದರ್ಶಿಸಿರುವುದು ತಮಗೆ ಅತೀವ ಸಂತಸ ನೀಡಿದೆ ಎಂದರು. ಹಳಗನ್ನಡದಲ್ಲಿ ರಚಿತವಾದ ಈ ಮಹಾಕಾವ್ಯವನ್ನು ಇಂದಿನ ತಲೆಮಾರಿಗೆ ರಂಗರೂಪದ ಮೂಲಕ ಕಟ್ಟಿಕೊಂಡು
ಅರ್ಥ ಮಾಡಿಸುವ ಮಹಾನ್‌ ಕೆಲಸವನ್ನು ಮೈಸೂರು ರಂಗಾಯಣ ಮಾಡಿದೆ. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಹಾಗೂ ಈ ನಾಟಕಕ್ಕಾಗಿ ದುಡಿದವರಿಗೆ ಎಷ್ಟು ನಮನಗಳನ್ನು ಹೇಳಿದರೂ ಕಡಿಮೆಯೇ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ| ಸಿ. ರಮೇಶ್‌ ಮಾತನಾಡಿ, ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದು 50 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಕೃತಿ ರಂಗರೂಪಕ್ಕೆ ಅಳವಡಿಸಿ ರಾಜ್ಯಾದ್ಯಂತ ಪ್ರದರ್ಶಿಸಲಾಗುತ್ತಿದೆ. ಜಿಲ್ಲೆಯಲ್ಲಿ ನಾಟಕಗಳನ್ನು ಆಸ್ವಾದಿಸುವ ಉತ್ತಮ ಪ್ರೇಕ್ಷಕ ವರ್ಗವಿದ್ದು, ರಂಗಭೂಮಿ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಮಂಜುಳಾ ಹುಲ್ಲಹಳ್ಳಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next