ಪೆರ್ಲ: ಇಡಿಯಡ್ಕ-ಪೆರ್ಲ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ಕ್ಷೇತ್ರ ಇದರ ನೂತನ ಧ್ವಜ ಪ್ರತಿಷ್ಠೆ ,ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಫೆ.1ರಂದು ಧ್ವಜ ಪ್ರತಿಷ್ಠೆ , ದೇವರ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ ಹಾಗೂ ರಂಗ ಪೂಜೆ ಮೊದಲಾದ ಕಾರ್ಯಕ್ರಗಳು, ಸಂಜೆ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಖ್ಯಾತ ವಾಗ್ಮಿ ನಿತ್ಯಾನಂದ ವಿವೇಕ ವಂಶಿ ಮತ್ತು ತಂಡದವರಿಂದ ಶಿವ ಭಾರತ ಗೀತಾ-ನೃತ್ಯ-ಕಥನ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಪರಮಾತ್ಮನ ಸೃಷ್ಠಿಯ ಈ ಭೂಮಿಯಲ್ಲಿ ಎಲ್ಲವೂ ಪರಮಾತ್ಮನ ಶಕ್ತಿಯಿಂದಲೇ ಕೆಲಸ ಮಾಡುತ್ತದೆ.ನಾವು ಜಗತ್ತಿಗೆ ಏನು ನೀಡಿದ್ದೇವೆಯೋ ಅದೇ ನಮಗೆ ತಿರುಗಿ ಲಭಿಸುತ್ತದೆ. ಎಂದವರು ಹೇಳಿದರು.
ಆದ್ದರಿಂದ ದುರ್ವಿಚಾರ,ದುಷ್ಕರ್ಮ,ನಾಸ್ತಿಕತೆ,ನಿರ್ವಿ ಕಾರ ಇದ್ದಲ್ಲಿ ಅಧರ್ಮ ನೆಲೆ ನಿಂತು ಅಕ್ರಮ ಮನೋವಿಕೃತ ಜನ ತುಂಬುತ್ತಾರೆ.ಆಸ್ತಿಕತೆ,ದೇವರಲ್ಲಿ ಭಕ್ತಿ ಭಾವ ನಂಬಿಕೆ ಇದ್ದಲ್ಲಿ ದೇವರ ಅಭಯ ಸದಾ ಸಿದ್ಧ. ಧರ್ಮದ,ಸಂಸ್ಕಾರದ ಬದುಕು ನಮ್ಮದಾಗ ಬೇಕು.ಅದಕ್ಕಾಗಿ ಧರ್ಮವನ್ನು ರಕ್ಷಿಸೋಣ,ಆ ಮೂಲಕ ಧರ್ಮ ನಮ್ಮನ್ನು ಕಾಪಾಡುತ್ತದೆ.ಸತ್ಕರ್ಮಗಳನ್ನು ಮಾಡುತ್ತಾ ಲೋಕದ ಸಮಸ್ತ ಜೀವಜಾಲಗಳಿಗೆ ಒಳಿತನ್ನು ಉಂಟುಮಾಡುವ ಎಂದು ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಡಾ| ಶ್ರೀಪತಿ ಕಜಂಪಾಡಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಬ್ರಹ್ಮಶ್ರೀ ವಾಸುದೇವ ತಂತ್ರಿ ಅನುಗ್ರಹ ಭಾಷಣ ಮಾಡಿದರು. ಮಂಗಳೂರು ಆಕಾಶವಾಣಿ ಕಾರ್ಯನಿರ್ವಾಹಕ ಸದಾನಂದ ಪೆರ್ಲ ಜನರು ಇಂದು ಬಹಿರಂಗವಾಗಿ ಸಂಭ್ರ ಮಿಸುವುದಿಲ್ಲ. ಕೇವಲ ಏಕತಾನತೆಯಿಂದ ಅಂತರ್ಮುಖೀಯಾಗಿದ್ದಾರೆ ಒತ್ತಡದಲ್ಲಿ ಬದುಕುತ್ತಿದ್ದಾರೆ ಎಂದರು.
ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ ಡಾ| ವಸಂತ ಕುಮಾರ ಪೆರ್ಲ ,ಸತ್ಕರ್ಮಗಳನ್ನು ಮಾಡುತ್ತಾ ರಾಷ್ಟ್ರ ಕಟ್ಟೋಣ,ನಾಡು ನುಡಿ ಸಂಸ್ಕೃತಿಯನ್ನು ಉಳಿಸೋಣ,ಬೆಳೆಸೋಣ ಎಂದು ಹೇಳಿದರು. ಮುಗು ಸುಬ್ರಾಯ ದೇಗುಲದ ಮೊಕ್ತೇಸರ ರವೀಂದ್ರನಾಥ್‌ನಾಯಕ್ ಶೇಣಿ-ತೋಟದ ಮನೆ ಶುಭ ಹಾರೈಸಿದರು. ಕ್ಷೇತ್ರ ಪ್ರಧಾನ ಸಂಚಾಲಕ ಟಿ.ಆರ್.ಕೆ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಲೋಕನಾಥ ಶೆಟ್ಟಿ ಮಾಯಿಲೆಂಗಿ ಸ್ವಾಗತಿಸಿದರು. ರಾಜಶೇಖರ್ ಪೆರ್ಲ ವಂದಿಸಿದರು. ಉದಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ರಾತ್ರಿ ಗೀತ-ನೃತ್ಯ-ಚಿತ್ರ-ಕಥನ ನಡೆಯಿತು.