ಚನ್ನರಾಯಪಟ್ಟಣ: ತಪ್ಪು ಮಾಡಿದ ವ್ಯಕ್ತಿಗೆ ಜ್ಞಾನೋದಯವಾದರೆ ತನ್ನ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಬಹುದು ಎನ್ನುವುದಕ್ಕೆ ಮಹರ್ಷಿ ವಾಲ್ಮೀಕಿ ಅವರೇ ನಮಗೆ ನಿದರ್ಶನವಾಗಿದ್ದಾರೆ. ಅವರ ಜೀವನ ಮತ್ತು ಸಾಧನೆ ಎಲ್ಲರಿಗೂ ಪ್ರೇರಕವಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು. ತಾಲೂಕು ಆಡಳಿತ ಹಾಗೂ ವಿವಿಧ ಸಂಘಟನೆಯಿಂದ ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ವಾಲ್ಮೀಕಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ತಪ್ಪು ತಿದ್ದಿಕೊಂಡರೆ ಉತ್ತಮ ಜೀವನ: ಮಾನುಷ್ಯ ತಪ್ಪು ಮಾಡುವುದು ಸಹಜ ಮಾಡಿದ ತಪ್ಪನ್ನು ತಿದ್ದಿಕೊಂಡು ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು, ಇದರ ಬದಲಾಗಿ ಪದೇ ಪದೇ ತಪ್ಪು ಮಾಡುವ ಮೂಲಕ ಸಮಾಜ ಘಾತುಕರಾಗಬಾರದು ಎಂದು ತಿಳಿ ಹೇಳಿದರು.
ತತ್ವಾದರ್ಶ ಪಾಲಿಸಿ: ರಾಮಾಯಣ ಭಾರತದಲ್ಲಿ ನಡೆದಿದೆ ಎನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟವರು ವಾಲ್ಮೀಕಿ. ಅವರು ತಾಳೆ ಗರಿಯಲ್ಲಿ ರಾಮಾಯಣ ಬರೆಯದಿದ್ದರೆ ನಾವು ಇಂದು ಶ್ರೀರಾಮ, ಸೀತೆ ಹಾಗೂ ರಾವಣರ ಗುಣಗಳನ್ನು ತಿಳಿಯಲು ಸಾಧ್ಯವಾಗುತ್ತಿರಲಿಲ್ಲ . ವಾಲ್ಮೀಕಿ ಅವರ ಸಿದ್ಧಾಂತವನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ನೆಮ್ಮದಿಯಾಗಿ ಬದುಕ ಬಹುದು, ದೇಶಕ್ಕೆ ಉತ್ತಮ ಸಾಹಿತ್ಯ ನೀಡಿದ ಮಹಾತ್ಮರ ಸಂದೇಶ ಇಂದಿಗೂ ಮಾದರಿಯಾಗಿದೆ ಎಂದರು.
ರಾಮಾಯಣ ಓದಿ: ಯುವ ಸಮುದಾಯ ತಮ್ಮ ಬದುಕಿನ ಅಡೆ ತಡೆಯನ್ನು ದಾಟಿ ಉತ್ತಮ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ ರಾಮಾಯಣ ಓದಬೇಕು. ರಾಮಾಯಣ ಒಂದು ಕಾಲಕ್ಕೆ ಹಾಗೂ ಒಂದು ತಲೆ ಮಾರಿಗೆ ಸೀಮಿತವಾಗಿಲ್ಲ. ಎಲ್ಲಾ ಜನರಿಗೆ ಎಲ್ಲಾ ವರ್ಗದವರಿಗೆ ಎಲ್ಲಾ ಕಾಲಕ್ಕೂ ಅನುಗುಣವಾಗುತ್ತಿದೆ. ಯಾರು ರಾಮಾಯಣ ಮಹಾ ಗ್ರಂಥವನ್ನು ಓದುವುದಿಲ್ಲವೋ ಅವರು ರಾಮಾಯಣದ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳುತ್ತಾರೆ ಎಂದು ಹೇಳಿದರು.
ವಾಲ್ಮೀಕಿ ಭವನಕ್ಕೆ ನಿವೇಶನ: ತಾಲೂಕು ಕೇಂದ್ರದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ನಿವೇಶನ ನೀಡಲಾಗುವುದು. ಈ ಬಗ್ಗೆ ಈಗಾಗಲೆ ಪುರಸಭೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿ ಅನುಮತಿ ಪಡೆದು ನಿವೇಶನ ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುವೆ: ಸರ್ಕಾರ ನೀಡುವ ಅನುದಾನವನ್ನು ಹಿಂದುಳಿದ ಸಮುದಾಯದವರಿಗೆ ಸಮನಾಗಿ ಹಂಚಿಕೆ ಮಾಡುತ್ತಿರುವುದಲ್ಲದೇ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸರ್ಕಾರ ಎಸ್ಸಿ,ಎಸ್ಸಿ ಸಮುದಾಯಕ್ಕೆ ಜನಾಂಗಕ್ಕೆ ನೀಡಿರುವ ಅನುದಾನ ವಾಪಸ್ ಹೋಗದಂತೆ ಎಚ್ಚರಿಕೆಯಿಂದ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಈಗಾಗಲೆ ತಾಲೂಕು ಕೇಂದ್ರದಲ್ಲಿ ದೇವರಾಜ ಅರಸು ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ, ತಹಶೀಲ್ದಾರ್ ಮಾರುತಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಂಜುನಾಥ, ವಾಲ್ಮೀಕಿ ಸಮಾಜದ ಮುಖಂಡರಾದ ಕೃಷ್ಣ, ರಾಮಚಂದ್ರ, ರಾಮಾನಾಯಕ, ಮಂಜುನಾಥ ಉಪಸ್ಥಿತರಿದ್ದರು.