Advertisement

ದ್ರಾಕ್ಷಿ ಬೆಳೆಗಾರರ ಬದುಕು ಶೋಚನೀಯ

09:22 PM May 30, 2019 | Team Udayavani |

ದೇವನಹಳ್ಳಿ: ತಾಲೂಕಿನಲ್ಲಿ ದ್ರಾಕ್ಷಿ ಬೆಳೆ ವಾಣಿಜ್ಯ ಬೆಳೆಯಾಗಿರುವುದರಿಂದ ಆಲಿಕಲ್ಲು, ಬಿರುಗಾಳಿ ಮಳೆಯಿಂದಾಗಿ ಅಪಾರ ದ್ರಾಕ್ಷಿ ಬೆಳೆ ರೈತರ ಪಾಲಿಗೆ ಕಹಿಯಾಗಿದೆ. ರೈತರಿಗೆ ನೀರಿನ ಸಮಸ್ಯೆ, ವಿದ್ಯುತ್‌ ಅಭಾವ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ದ್ರಾಕ್ಷಿ ಬೆಳೆಗಾರರ ಬದುಕು ಶೋಚನೀಯವಾಗಿದೆ.

Advertisement

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ 1500ಕ್ಕೂ ಹೆಚ್ಚು ಅಡಿಗಳಿಗೆ ಬೋರ್‌ವೆಲ್‌ ಕೊರೆಸಿದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇರುವ ಅಲ್ಪಸ್ವಲ್ಪ ನೀರಿನಲ್ಲಿಯೇ ಉತ್ತಮ ಬೆಳೆ ಬೆಳೆದರೂ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ವಿದ್ಯುತ್‌ ಪೂರೈಕೆ ಸರಿಯಾಗಿರುವುದಿಲ್ಲ. ಹಾಗಾಗಿ, ದ್ರಾಕ್ಷಿ ಗಿಡಗಳಿಗೆ ನೀರುಣಿಸಲು ಆಗುವುದಿಲ್ಲ. ವಿದ್ಯುತ್‌ ಅಭಾವ ರೈತರನ್ನು ಕಾಡುತ್ತಿದೆ. ಬೆಳೆ ಕುಸಿತವಾಗುತ್ತಿರುವುದರಿಂದ ರೈತರು ಬೆಳೆದ ಬೆಂಗಳೂರು ಬ್ಲೂ ದ್ರಾಕ್ಷಿ ಬೆಲೆ ಪ್ರತಿ ಕೆ.ಜಿ.ಗೆ 50ರೂ. ಇದ್ದದ್ದು, ಮಳೆಯಿಂದಾಗಿ ಅಪಾರ ಬೆಳೆ ನಷ್ಟವಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಬದಲಾಗುತ್ತಿರುವ ವಾತಾವರಣದಿಂದಾಗಿ ಬೆಳೆ ಬೆಳೆಯುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ದ್ರಾಕ್ಷಿ ಬೆಳೆ ನಾಶ: ಕಳೆದ 8 ತಿಂಗಳಿನಿಂದ ಮಳೆಯಿಲ್ಲದೇ ಟ್ಯಾಂಕರ್‌ ನೀರಿನಿಂದ ಬೆಳೆ ಬೆಳೆದು ಮಗುವಿನಂತೆ ರಕ್ಷಿಸಿಕೊಂಡು ಬಂದ ರೈತರು ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಬೆಳೆ ಹಾನಿಗೀಡಾದ ಕಾರಣ ಕಂಗಾಲಾಗಿದ್ದಾರೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಹ್ಯಾಡಾಳ, ಬೀಡಿಗಾನಹಳ್ಳಿ, ದೊಡ್ಡಕುರುಬರಹಳ್ಳಿ, ಐಬಸಾಪುರ, ಪೋಲನಹಳ್ಳಿ ಇತರೆ ಕಡೆ ರೈತರು ಬೆಳೆದಿದ್ದ ದ್ರಾಕ್ಷಿ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ.

ಸಮಸ್ಯೆಗಳ ಆಗರ: ದ್ರಾಕ್ಷಿ ಬೆಳೆ ಬೆಳೆಯಲು ಹೆಚ್ಚಿನ ಹಣ ವೆಚ್ಚ ಮಾಡಬೇಕು. ದುಬಾರಿ ಉತ್ಪಾದನೆ ನಡುವೆಯೂ ರೈತರು ಹರಸಹಾಸ ಪಟ್ಟು ದ್ರಾಕ್ಷಿ ಹಣ್ಣು ಬೆಳೆಯುತ್ತಾರೆ. ತಾಲೂಕಿನಲ್ಲಿ ಅತೀ ಹೆಚ್ಚಿನ ರೈತರು ದ್ರಾಕ್ಷಿ ಬೆಳೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ದ್ರಾಕ್ಷಿ ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇತ್ತ ದ್ರಾಕ್ಷಿ ಬೆಳೆ ಬಿಡಲಾಗದೇ, ಮುಂದುವರೆಸಲೂ ಆಗದೇ ತೀವ್ರ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ. ಅಂತರ್ಜಲ ಮಟ್ಟ ತೀವ್ರ ಕುಸಿತ, ಮಳೆ ಮತ್ತು ವಿದ್ಯುತ್‌ ಅಭಾವ, ಬೆಲೆ ಕುಸಿತ, ಸೂಕ್ತ ಮಾರುಕಟ್ಟೆ ಕೊರತೆ, ದುಬಾರಿ ಉತ್ಪಾದನಾ ವೆಚ್ಚದ ನಡುವೆಯೂ ರೈತರು ಹೋರಾಟವನ್ನು ಮುಂದುವರಿಸಿರುವುದು ಕಂಡುಬರುತ್ತಿದೆ.

Advertisement

ಅಪಾರ ಬೆಳೆ ನಷ್ಟ: ಮಳೆಯಿಂದಾಗಿ 6ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಬೆಳೆಯಲಾಗಿತ್ತು. ಮಳೆಯಿಂದಾಗಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಇನ್ನೇನು ಒಂದು ತಿಂಗಳಿನಲ್ಲಿ ಹಣ್ಣು ಕಟಾವು ಮಾಡಿ ಮಾರಾಟ ಮಾಡಬೇಕಾಗಿತ್ತು. ಅಷ್ಟರಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಾಲ ಸೋಲ ಮಾಡಿ ಬೆಳೆ ಕಾಪಾಡಿಕೊಂಡು ಬರುತ್ತೇವೆ. ಆದರೆ, ಇಂತಹ ಆಲಿಕಲ್ಲು ಮಳೆಯಿಂದ ಬಿರುಗಾಳಿಯಿಂದಾಗಿ ಅಪಾರ ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂದು ರೈತ ಗೋಪಾಲರೆಡ್ಡಿ ಹೇಳುತ್ತಾರೆ.

ದ್ರಾಕ್ಷಿ ಬೆಳೆ ನಮ್ಮ ಜೀವನಾಡಿ: ದ್ರಾಕ್ಷಿ ಬೆಳೆ ನಮ್ಮ ಜೀವನಾಡಿಯಾಗಿದೆ. ದ್ರಾಕ್ಷಿ ಬೆಳೆ ಇಷ್ಟು ನಷ್ಟವಾಗಿದ್ದರೂ ಕ್ಷೇತ್ರದ ಶಾಸಕರಾಗಲಿ, ತಹಶೀಲ್ದಾರ್‌ ಆಗಲಿ, ಜಿಪಂ ಸದಸ್ಯರು, ತಾಪಂ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ತೋಟಗಳ ಸ್ಥಿತಿಗತಿಗಳನ್ನು ಅರಿಯಲು ಬಂದಿಲ್ಲ. ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ದ್ರಾಕ್ಷಿ ಬೆಳೆ ಕಾಪಾಡಿಕೊಂಡು ಬಂದಿದ್ದೇವೆ. ಟ್ಯಾಂಕರ್‌ ಮೂಲಕ ನೀರು ಹೊಡೆಸಿ ದ್ರಾಕ್ಷಿ ಬೆಳೆಯನ್ನು ಸಮೃದ್ಧವಾಗಿ ಬೆಳೆದಿದ್ದರೂ ಮಳೆಯಿಂದಾಗಿ ದ್ರಾಕ್ಷಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ ಎಂದು ಬೀಡಿಗಾನಹಳ್ಳಿ ರೈತ ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಇತ್ತೀಚೆಗೆ ಬಿದ್ದ ಆಲಿಕಲ್ಲು ಮತ್ತು ಬಿರುಗಾಳಿ ಸಹಿತ ಮಳೆಗೆ 30ರಿಂದ 35ಟನ್‌ಗಳಷ್ಟು ದ್ರಾಕ್ಷಿ ಬೆಳೆ ನಷ್ಟವಾಗಿದೆ. 2016ರಲ್ಲಿ ಕೇಂದ್ರ ಸರ್ಕಾರ ದ್ರಾಕ್ಷಿ ಮತ್ತು ಮಾವಿಗೆ ಬೆಳೆ ವಿಮೆ ಯೋಜನೆ ಜಾರಿಗೆ ತಂದಿದೆ. ಆದರೆ, ರೈತರ ಅಸಡ್ಡೆಯಿಂದ ಸರಿಯಾದ ರೀತಿ ವಿಮೆ ಮಾಡಿಸಲಾಗುತ್ತಿಲ್ಲ. ಈ ರೀತಿ ಹಾನಿಯಾದಾಗ ಹಣ ರೈತರ ಖಾತೆಗೆ ನೇರವಾಗಿ ಪರಿಹಾರ ಬರುತ್ತದೆ. ಒಂದು ವರ್ಷಕ್ಕೆ 5ಸಾವಿರ ರೂ. ದ್ರಾಕ್ಷಿ ಬೆಳೆಗೆ ಹಾಗೂ 6 ಸಾವಿರ ರೂ. ಅನ್ನು ಮಾವಿಗೆ ವಿಮೆ ಕಟ್ಟಬೇಕು. ಈ ರೀತಿ ನಷ್ಟವಾದಾಗ ರೈತರಿಗೆ ಇಂತಿಷ್ಟು ಹಣ ದೊರೆಯುತ್ತದೆ. ಒಂದು ಹೆಕ್ಟೇರಿಗೆ 18 ಸಾವಿರ ರೂ.ಪರಿಹಾರದ ನೀಡಲು ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತಿದೆ.
-ಜಿ.ಮಂಜುನಾಥ್‌, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ

* ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next