ಉಪ್ಪಿನಬೆಟಗೇರಿ: ಜೀವನದಲ್ಲಿ ಎರಡು ರೀತಿಯ ಹಸಿವು ಇರುತ್ತವೆ. ಒಂದು ನೆತ್ತಿಯ ಹಸಿವಾದರೆ, ಇನ್ನೊಂದು ಜ್ಞಾನದ ಹಸಿವು ಎಂದು ಮೂರು ಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.
ಗ್ರಾಮದೇವಿಯರಾದ ದ್ಯಾಮವ್ವ- ದುರ್ಗವ್ವ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಮೊದಲನೇ ದಿನದ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹೊಟ್ಟೆ ಹಸಿವು ಮೂರು ತಾಸುಗಳವರೆಗೆ ಆದರೆ ಜ್ಞಾನದ ಹಸಿವು ಕೊನೆಯವರೆಗೆ ಇರುತ್ತದೆ. ಪ್ರಪಂಚದಲ್ಲಿ ಶಿವ ಮತ್ತು ಶಕ್ತಿ ಇದ್ದಾಗ ಮಾತ್ರ ಜೀವಿರಾಶಿಗಳು ಬಾಳಲು ಸಾಧ್ಯ ಎಂದರು.
ಅಟ್ನೂರಿನ ಪಂ| ಕಲ್ಲಿನಾಥ ಶಾಸ್ತ್ರಿಗಳು ಪ್ರವಚನ ನೀಡಿ, ಶ್ರೀದೇವಿ ಚರಿತ್ರೆಯನ್ನು ಯಾವಾಗಲೂ ಪಠಣ ಮಾಡಬಹುದು. ಪ್ರಸ್ತುತ ಗ್ರಾಮದಲ್ಲಿ ಒಂದು ಕಡೆ ಅನ್ನ ದಾಸೋಹ, ಇನ್ನೋಂದು ಕಡೆ ಜ್ಞಾನ ದಾಸೋಹ ನಡೆಯುತ್ತಿದೆ. ಈ ಎರಡೂ ದಾಸೋಹಗಳನ್ನು ಗುರು ಬಸವಣ್ಣನವರು ನಡೆಸಿಕೊಂಡು ಬಂದ ಕಾಯಕಯೋಗಿಗಳು ಎಂದು ಹೇಳಿದರು.
ಜಾತ್ರಾ ಸಮಿತಿ ಅಧ್ಯಕ್ಷ ಚನಬಸಪ್ಪ ಮಸೂತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಆಯಟ್ಟಿ, ಉಪಾಧ್ಯಕ್ಷ ಅಬ್ದುಲ್ ಲಂಗೋಟಿ, ಶಬ್ಬೀರ ಅಹ್ಮದ ಸುತಗಟ್ಟಿ, ನಾಗರತ್ನಾ ಬೆಳವಡಿ, ಮಂಜುನಾಥ ಮಸೂತಿ, ವೀರಣ್ಣಾ ಪರಾಂಡೆ, ಮಲ್ಲಣ್ಣಾ ಅಷ್ಟಗಿ, ಬಾಬಾ ಮೊಹಿದ್ದೀನ ಚೌಧರಿ, ಕಲ್ಲಪ್ಪ ಪುಡಕಲಕಟ್ಟಿ, ರಾಮಲಿಂಗಪ್ಪ ನವಲಗುಂದ, ಬಸವರಾಜ ಮಸೂತಿ, ಮುಸ್ತಾಕ ಮಕಾನದಾರ, ಶಿವಪ್ಪ ವಿಜಾಪುರ, ಮಂಜುನಾಥ ಸಂಕಣ್ಣವರ, ಧರಣೇಂದ್ರ ಅಷ್ಟಗಿ ಇನ್ನಿತರರಿದ್ದರು.
ಕಾಶಪ್ಪ ದೊಡವಾಡ ಪ್ರಾಸ್ತಾವಿಕ ಮಾತನಾಡಿದರು. ವಿರೂಪಾಕ್ಷಪ್ಪ ಬಮ್ಮಶಟ್ಟಿ ಸ್ವಾಗತಿಸಿದರು. ಪಕ್ಕೀರಪ್ಪ ಮಡಿವಾಳರ ನಿರೂಪಿಸಿದರು. ಮೇ 5ರಿಂದ 13ರವರೆಗೆ ವಾರ ಬಿಡುವ ಉದ್ದೇಶದಿಂದ ಉಪ್ಪಿನಬೆಟಗೇರಿ, ಹನುಮನಕೊಪ್ಪ, ಸೈಬೀನಕೊಪ್ಪ ಗ್ರಾಮಸ್ಥರು ಎಲ್ಲಾ ದೇವರಿಗೆ ನೀರು ಹಾಕುವ ಮುಖಾಂತರ ಪೂಜೆ ಸಲ್ಲಿಸಿದರು.
ದೇವಸ್ಥಾನದಲ್ಲಿ ಹೋಮ-ಪೂಜೆ ಕಾರ್ಯಕ್ರಮವನ್ನು ಗೋಕಾಕ ವೈದಿಕ ವಿಜಯ ಸ್ವಾಮೀಜಿ ಹಿರೇಮಠ ನಡೆಸಿಕೊಟ್ಟರು. ನಂತರ ಶ್ರೀ ಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.