ಬಸವನಬಾಗೇವಾಡಿ: ಸರ್ಕಾರ 1973ರಲ್ಲಿ ಜಿಲ್ಲಾ ಸಾರ್ವಜನಿಕ ಗ್ರಂಥಾಲಯದ ಶಾಖೆಯೊಂದನ್ನು ಪಟ್ಟಣದಲ್ಲಿ ಸ್ಥಾಪಿಸಿ 46 ವರ್ಷ ಗತಿಸಿದರೂ ಸಹ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಬೇರೆ ಬೇರೆ ಇಲಾಖೆ ಜಾಗೆಗಳಲ್ಲಿ ಬಾಡಿಗೆ ರೂಪದಲ್ಲಿ ಅಲೆದಾಡುವ ಸ್ಥಿತಿಯಿದ್ದು ಪುಸ್ತಕಗಳು, ಅಮೂಲ್ಯ ಗ್ರಂಥಗಳು ಮೂಲೆಯಲ್ಲಿ ಕೊಳೆಯುವಂತಾಗಿದೆ.
10 ವರ್ಷದ ಹಿಂದೆ ಪುರಸಭೆಯಿಂದ ಸಾರ್ವಜನಿಕ ಗ್ರಂಥಾಲಯಕ್ಕೆ 40×60 ಜಾಗೆ ದೊರಕಿತ್ತು. ಗ್ರಂಥಾಲಯದ ನಿರ್ಮಾಣಕ್ಕಾಗಿ ರಾಜ್ಯ ಸರಕಾರ 18 ಲಕ್ಷ ಅನುದಾನ ಕೂಡಾ ಬಿಡುಗಡೆ ಮಾಡಿತ್ತು. ಆದರೆ ಪುರಸಭೆ ನೀಡಿರುವ ಜಾಗೆ ಪಟ್ಟಣದ ಮಧ್ಯ ಸ್ಥಳದಿಂದ ಸ್ವಲ್ಪ ದೂರ ಇರುವ ಕಾರಣಕ್ಕಾಗಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿದ್ದರಿಂದ ಆ ಜಾಗೆಯನ್ನು ಬಿಟ್ಟು ಈಗ ಪುರಸಭೆ ಕೆಳ ಮಹಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದೆ.
ವಿವಿಧ ಗ್ರಾಮಗಳಿಂದ ಬರುವ ಜನರಿಗೆ ಗ್ರಂಥಾಲಯದಲ್ಲಿ ಕುಳಿತುಕೊಂಡು ಓದಲು ಸ್ಥಳದ ಅಭಾವ ಕಾಡುತ್ತಿದೆ. ಹೀಗಾಗಿ ಅನೇಕ ಪುಸ್ತಕಗಳನ್ನು ಗಂಟು ಮೂಟೆ ಕಟ್ಟಿ ಒಂಡೆಡೆ ಇಟ್ಟಿದ್ದಾರೆ. ಗ್ರಂಥಾಲಯದಲ್ಲಿ ಕುಡಿಯುವ ನೀರು, ಶೌಚಾಲಯ, ಆಸನದ ವ್ಯವಸ್ಥೆ ಸಮರ್ಪಕವಾಗಿಲ್ಲ. ಸಾರ್ವಜನಿಕ ಗ್ರಂಥಾಲಯ 2,330 ಸದಸ್ಯರನ್ನು ಹೊಂದಿದ್ದು 32 ಸಾವಿರಕ್ಕೂ ಅ ಧಿಕ ಪುಸ್ತಕಗಳಿವೆ. 8 ಕನ್ನಡ ದಿನಪತ್ರಿಕೆಗಳು, 2 ಆಂಗ್ಲ ಪತ್ರಿಕೆಗಳು, 12 ವಾರ, ಮಾಸ, ತ್ತೈ ಮಾಸಿಕ ಪತ್ರಿಕೆಗಳು ಬರುತ್ತವೆ. ಗ್ರಂಥಾಲಯ ನಿರ್ವಹಣೆಗಾಗಿ ಓರ್ವ ಶಾಖಾ ಗ್ರಂಥ ಪಾಲಕರು, ಒಬ್ಬ ಸಹಾಯಕರು ಇದ್ದಾರೆ. ಸಮಯಕ್ಕೆ ತಕ್ಕಂತೆ ಗ್ರಂಥಾಲಯ ಓದುಗರಿಗೆ ಲಭ್ಯವಿದ್ದು ಜ್ಞಾನಾಮೃತ ನೀಡುತ್ತಿದೆ. ಆದರೆ ಇದಕ್ಕೆ ಒಂದು ಸ್ವಂತ ಸೂರಿಲ್ಲಾ ಎಂಬುದೇ ವಿಪರ್ಯಾಸದ ಸಂಗತಿಯಾಗಿದೆ. ಬೆಳಗ್ಗೆ 8:30ರಿಂದ 11:30ರವರೆಗೆ ಸಂಜೆ 4ರಿಂದ ರಾತ್ರಿ 8ರವರೆಗೆ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತದೆ. ಪ್ರತಿ ಸೋಮವಾರ ರಜೆ ಹಾಗೂ ತಿಂಗಳ ಎರಡನೇ ಮಂಗಳವಾರ ಹಾಗೂ ಸರಕಾರಿ ರಜೆ ದಿನಗಳಲ್ಲಿ ಗ್ರಂಥಾಲಯಕ್ಕೆ ರಜೆ ಇರುತ್ತದೆ.
-ಪ್ರಕಾಶ ಬೆಣ್ಣೂರ