Advertisement

ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠ ಕೈಬಿಟ್ಟಿಲ್ಲ: ಸುದರ್ಶನ್‌ ಮೂಡುಬಿದಿರೆ

12:45 AM May 21, 2022 | Team Udayavani |

ಮಂಗಳೂರು: ಹತ್ತನೆಯ ತರಗತಿ ಪಠ್ಯದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠವನ್ನು ಕೈ ಬಿಟ್ಟಿಲ್ಲ. ಕಾಂಗ್ರೆಸ್‌ ಈ ಬಗ್ಗೆ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಅಸ್ತಿತ್ವ ಉಳಿಸಿಕೊಳ್ಳಲು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಬಳಸಿಕೊಳ್ಳುತ್ತಿದೆ. ಗಣರಾಜ್ಯೋತ್ಸವ ಪಥಸಂಚಲನದ ಸಂದರ್ಭದಲ್ಲೂ ಕಾಂಗ್ರೆಸ್‌ ಇದೇ ರೀತಿ ಮಾಡಿತ್ತು ಎಂದರು.

ಲೇಡಿಹಿಲ್‌ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡುವುದಕ್ಕೆ ಮಾಜಿ ಶಾಸಕ ಜೆ.ಆರ್‌. ಲೋಬೋ ಸೇರಿದಂತೆ ಕಾಂಗ್ರೆಸ್‌ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಕೇರಳದಲ್ಲಿ ಕಾಂಗ್ರೆಸ್‌ ಶಿವಗಿರಿ ಮಠಕ್ಕೂ ತೊಂದರೆ ಉಂಟು ಮಾಡಿತ್ತು ಎಂದು ಆರೋಪಿಸಿದ ಅವರು, ಇದೀಗ ಕಾಂಗ್ರೆಸಿಗರು ಗುರುಗಳ ಬಗ್ಗೆ ಯಾವ ನೈತಿಕತೆಯಿಂದ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

10 ತರಗತಿಯ ಪಠ್ಯ ಮುದ್ರಣವೇ ಆಗಿಲ್ಲ. ಆದರೆ ಮಾಜಿ ಶಾಸಕ ರಮಾನಾಥ ರೈ ಸೇರಿದಂತೆ ಕಾಂಗ್ರೆಸಿಗರು 10ನೇ ತರಗತಿ ಪಠ್ಯದಿಂದ ನಾರಾಯಣ ಗುರುಗಳ ಹೆಸರು ಕೈಬಿಟ್ಟಿರುವುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. 7ನೇ ತರಗತಿ ಪಠ್ಯದಲ್ಲೂ ನಾರಾಯಣ ಗುರುಗಳ ಪಾಠವಿದೆ. ಹತ್ತನೆಯ ತರಗತಿ ಪಠ್ಯದಲ್ಲೂ ಪಾಠ ಇರಲಿದ್ದು ಯಾವುದೇ ಕಾರಣಕ್ಕೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಪಠ್ಯದಲ್ಲಿ ಮಂಜೆ ಮಂಗೇಶರಾಯರು, ಗೋವಿಂದ ಪೈಗಳು, ಪರಿಸರ ತಜ್ಞ ಶಿವಾನಂದ ಕಳವೆ ಸೇರಿದಂತೆ ಹಲವು ಪ್ರಮುಖರ ವಿಷಯಗಳು ಬರಲಿವೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರವೇ ಪಠ್ಯಕ್ರಮ ಇರ‌ಲಿದೆ ಎಂದು ಸುದರ್ಶನ ಮೂಡುಬಿದಿರೆ ಹೇಳಿದರು.

Advertisement

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್‌ ಶೆಟ್ಟಿ ಕಣ್ಣೂರು, ವಕ್ತಾರರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ರಣದೀಪ್‌ ಕಾಂಚನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next