Advertisement

ಮೃಗರಾಜ ಕಲಿಸಿದ ಪಾಠ

07:50 AM Aug 10, 2017 | Harsha Rao |

ಒಂದು ಕಾಡಿನಲ್ಲಿ ಸಾಧು ಸ್ವಭಾವದ ನರಿಯೊಂದಿತ್ತು. ಅದು ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನಿರುತ್ತಿತ್ತು. ಆದರೆ, ಕಾಡಿನ ಇತರ ಪ್ರಾಣಿಗಳು ಪಾಪದ ನರಿಗೆ ಒಂದಲ್ಲಾ ಒಂದು ಕೀಟಲೆ ಕೊಡುತ್ತಲೇ ಇರುತ್ತಿದ್ದವು. ನರಿ ಮಾತ್ರ ಎಲ್ಲರ ಕೀಟಲೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತಿತ್ತು. ಅದರಲ್ಲೂ, ನರಿಗೆ ಅತಿಹೆಚ್ಚು ಉಪಟಳ ಕೊಡುತ್ತಿದ್ದುದು ಒಂಟೆ. 

Advertisement

ಅದೊಂದು ದಿನ ನರಿಗೆ ಒಂಟೆ ಜೋರಾಗಿ ಒದೆತ ಕೊಟ್ಟಿತು. ಒದೆತ ಎಷ್ಟು ಜೋರಾಗಿತ್ತೆಂದರೆ ನೋವಿನಿಂದ ನರಿ ಎರಡು ದಿನ ಮೇಲೇಳಲೇ ಇಲ್ಲ! ಇನ್ನು ಸಹಿಸಿಕೊಳ್ಳಬಾರದೆಂದು ನಿರ್ಧರಿಸಿ, ಮರುದಿನ ಮೃಗರಾಜ ಸಿಂಹದ ಎದುರು ನಿಂತು “ಅಯ್ನಾ ಮೃಗರಾಜ! ನಾನು ಎಂಥವನೆಂದು ನಿನಗೆ ತಿಳಿಯದ್ದೇನಲ್ಲ. ಮೊದಲೇ ಅಂಜುಬುರುಕ ಪುಕ್ಕಲು ಪ್ರಾಣಿ ನಾನು. ನನ್ನಂಥವನಿಗೆ ಕಾಡಿನ ಇತರ ಪ್ರಾಣಿಗಳು ಚಿತ್ರಹಿಂಸೆ ಕೊಡುತ್ತಿವೆ. ಅದರಲ್ಲೂ ನನಗೆ ಒಂಟೆಯಿಂದ ಬಹಳಷ್ಟು ಬಾರಿ ದೈಹಿಕ, ಮಾನಸಿಕ ಹಿಂಸೆಯಾಗಿದೆ. ನನ್ನಿಂದ ಇವನ್ನೆಲ್ಲ ತಡೆದುಕೊಳ್ಳಲಾಗದು. ಕಾಡಿಗೆ ರಾಜನಾದ ನೀನು ಆ ಒಂಟೆಗೆ ತಕ್ಕ ಶಿಕ್ಷೆ ವಿಧಿಸಿ ನನಗೆ ನ್ಯಾಯ ಒದಗಿಸಬೇಕು’ ಎಂದು ಅಂಗಲಾಚಿ ಬೇಡಿಕೊಂಡಿತು. 

ನರಿಯ ವೇದನೆಯನ್ನು ಆಲಿಸಿದ ಮೃಗರಾಜನಿಗೆ ಒಂಟೆಯ ಮೇಲೆ ಕೋಪ ಬಂತು. ಆ ಕೂಡಲೇ ಕಾಡಿನ ಎಲ್ಲ ಪ್ರಾಣಿಗಳನ್ನೂ ತನ್ನಲ್ಲಿಗೆ ಬರಲು ಹೇಳಿತು. ಮೃಗರಾಜ ಆದೇಶದಂತೆ ಒಂಟೆ ಹಾಗೂ ಇತರ ಪ್ರಾಣಿಗಳೆಲ್ಲಾ ಬಂದವು. ತನ್ನ ಪಾಡಿಗೆ ತಾನಿರುತ್ತಿದ್ದ ನರಿಯ ಮೇಲೆ ಒಂಟೆ ಹಲ್ಲೆ ನಡೆಸಿದ್ದನ್ನು ಕೇಳಿ ಮೃಗರಾಜ ಮೊದಲೇ ಅಸಮಾಧಾನ ಹೊಂದಿದ್ದ. ಒಂಟೆಯನ್ನು ಕಂಡ ತಕ್ಷಣ ಸಿಂಹದ ಸಿಟ್ಟು ಹೆಚ್ಚಾಯ್ತು. ಕೋಪವನ್ನು ನುಂಗಿಕೊಂಡು ಒಂಟೆಯನ್ನುದ್ದೇಶಿಸಿ, “ಉಳಿದೆಲ್ಲ ಪ್ರಾಣಿಗಳಿಗಿಂತ ನರಿರಾಯನಿಗೆ ನೀನೇ ಹೆಚ್ಚು ಕಿರುಕುಳ ಕೊಡುತ್ತಿದ್ದೀಯಂತೆ, ನಿಜವೇ?’ ಎಂದು ಕೇಳಿತು. 
ಒಂಟೆ ಧೈರ್ಯದಿಂದ “ಮೃಗರಾಜ, ನಾನು ನರಿರಾಯನಿಗೆ ಮಾಡಿದ್ದು ಬರೀ ತಮಾಷೆಯಷ್ಟೆ! ಅವನೂ ನನಗೆ ಹಾಗೆಯೇ ಮಾಡಬಹುದಲ್ಲ? ಇದೆಲ್ಲಾ ವಿಚಾರಣೆ ನಡೆಸುವಂಥ ಸಂಗತಿಯೆ? ಎಂದು ಉಡಾಫೆಯ ಮಾತಾಡಿತು.

ಒಂಟೆಯ ಸೊಕ್ಕಿನ ಮಾತುಗಳನ್ನು ಕೇಳಿದ ಮೃಗರಾಜನಿಗೆ ಸಿಟ್ಟು ಬಂತು. “ಒಂಟೆಗೆ ಬುದ್ದಿ ಕಲಿಸಬೇಕೆಂದು ನೀನು ತಮಾಷೆಗೆಂದು ನರಿಗೆ ಒದೆತ ಕೊಡುತ್ತೀಯಲ್ಲ; ಅದೇ ರೀತಿ ನಾನೂ ನಿನಗೆ ಒಂದೆರಡು ಪಂಚ್‌ ಕೊಡುತ್ತೇನೆ. ಆನಂತರ ನೀನು ನನಗೆ ಹಾಗೆಯೇ ಮಾಡು. ಈ ಪ್ರಯೋಗವನ್ನು ಈಗಲೇ ಮಾಡಿಬಿಡೋಣ’ ಎನ್ನುತ್ತಾ ಒಮ್ಮೆಲೇ ಮೇಲೆ ಜಿಗಿದು ತನ್ನ ಪಂಜದಿಂದ ಒಂಟೆಯ ಮುಖಕ್ಕೆ ಪಂಚ್‌ ಕೊಟ್ಟಿತು.

ಮೃಗರಾಜನ ದಿಢೀರ್‌ ದಾಳಿಯಿಂದ ಒಂಟೆ ತತ್ತರಿಸಿಹೋಯಿತು. ಈಗ ಸುಮ್ಮನಿದ್ದರೆ ಸಿಂಹ ಮತ್ತೂಂದು ಪಂಚ್‌ ಕೊಡುಬಹುದು ಎಂದು ಹೆದರಿ “ನನ್ನ ಅಪರಾಧವನ್ನು ಮನ್ನಿಸಿ ಮಹಾರಾಜರೇ. ಇನ್ನೆಂದೂ ನರಿಗೆ ನಾನು ಕಿರುಕುಳ ಕೊಡುವುದಿಲ್ಲ’ ಎಂದಿತು. ಒಂಟೆಯನ್ನು ಉದಾರ ಮನಸ್ಸಿನಿಂದ ಕ್ಷಮಿಸಿದ ಮೃಗರಾಜನು ನನ್ನ ಸಾಮ್ರಾಜ್ಯದಲ್ಲಿ ಎಲ್ಲರೂ ಸಂತೋಷದಿಂದ ಇರಬೇಕೆಂಬುದೇ ನನ್ನಾಸೆ ಎಂದು ಹೇಳಿತು. ನ್ಯಾಯ ಸಿಕ್ಕಿದ ಖುಷಿಯಲ್ಲಿ ನರಿಯೂ, ಜೀವ ಉಳಿಸಿಕೊಂಡ ಕಾರಣದಿಂದ ಒಂಟೆಯೂ ಹೊಸ ಬಗೆಯ ನ್ಯಾಯ ತೀರ್ಮಾನಕ್ಕೆ ಸಾಕ್ಷಿಯಾದೆವೆಂಬ ಸಂಭ್ರಮದಲ್ಲಿ ಉಳಿದ ಪ್ರಾಣಿಗಳೂ. 

Advertisement

-ಹನುಮಂತ ಮ. ದೇಶಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next