ಹುಣಸೂರು: ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಭಾವೈಕ್ಯತಾ ಶಿಬಿರದ ಕೊನೆಯ ದಿನ 200ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ನಾಗರಹೊಳೆ ಉದ್ಯಾನದಲ್ಲಿ ಲಕ್ಷ್ಮಣತೀರ್ಥ ನದಿಯ ಉಗಮ ಸ್ಥಾನಕ್ಕೆ ಕರೆದೊಯ್ದು ಪರಿಸರ ಪಾಠ ಜೊತೆಗೆ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಯಿತು.
ಶಿಬಿರಾರ್ಥಿಗಳು ನಾಗರಹೊಳೆ ಉದ್ಯಾನ ಸಂದರ್ಶನದಲ್ಲಿ ಪ್ರಾಣಿ, ಪಕ್ಷಿ-ಪ್ರಭೇದ, ವನಸಿರಿ ಕಣ್ತುಂಬಿಕೊಂಡರು. ನಾಗರಹೊಳೆ ವಲಯ ಅರಣ್ಯಾಧಿಕಾರಿ ಅಮಿತ್‌ಗೌಡ ಉದ್ಯಾನದ ಬಗ್ಗೆ ಮಾಹಿತಿ ನೀಡಿ, ಈ ಉದ್ಯಾನವನ್ನು ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್‌ಎಂದು 1992ರಲ್ಲಿ ಮರು ನಾಮಕರಣ ಮಾಡುವ ಜೊತೆಗೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿತ್ತು.
ಇದರಿಂದಾಗಿ ಇಲ್ಲಿ ನೂರಕ್ಕೂ ಹೆಚ್ಚು ಹುಲಿಗಳು, ಕರಡಿ, ಕಪ್ಪು ಚಿರತೆ, ಚಿಪ್ಪು ಹಂದಿ, ಆನೆ, ಜಿಂಕೆ, ಕಾಡೆಮ್ಮೆ, ಆಮೆ, ಉಡ, ಸಪೆಂಟೈನಾ ಹದ್ದುಗಳು, ಸಸ್ತನಿಗಳು ಸ್ವತ್ಛಂದವಾಗಿ ವಿಹರಿಸುತ್ತಿವೆ. ಅನೇಕ ಸಸ್ಯ ಪ್ರಭೇದ ಇಲ್ಲಿದೆ ಎಂದು ಹೇಳಿದರು.
ಡಿಆರ್‌ಎಫ್‌ಒ ಶ್ರೀನಿವಾಸ್ ಮಾತನಾಡಿ, ಈ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದ್ದರಿಂದಾಗಿ ಅಕ್ರಮ ಪ್ರವೇಶಕ್ಕೆ ಕಡಿವಾಣ ಬಿದ್ದಿದ್ದು, 400 ವರ್ಷದಷ್ಟು ಹಳೆಯದಾದ ತೇಗದ ಮರ ಸೇರಿದಂತೆ ಬೀಟೆ, ನಂದಿ, ಮತ್ತಿ, ಹೊನ್ನೆ ಮರ, ವಿವಿಧ ಜಾತಿಯ ಮರ, ಸಸ್ತನಿಗಳಿಗೆ ಆಶ್ರಯ ತಾಣವಾಗಿದೆ. ಆಹಾರದ ಸರಪಳಿಗಾಗಿ ಬೀಳುವ ಯಾವ ಮರವನ್ನು ತೆಗೆಯದೆ ಬಿಡಲಾಗುತ್ತದೆ. ಇಂತಹ ಉದ್ಯಾನ ಸಂರಕ್ಷಣೆ ಎಲ್ಲರ ಹೊಣೆ ಎಂದರು.
ಇರ್ಪು ಜಲಪಾತ ಭೇಟಿ: ಲಕ್ಷ್ಮಣತೀರ್ಥ ನದಿ ಉಗಮ ಸ್ಥಾನವಾದ ಇರ್ಪು ಫಾಲ್ಸ್‌ಗೂ ಭೇಟಿ ಇತ್ತ ಶಿಬಿರಾರ್ಥಿಗಳು, ಜಲಪಾತದ ನೀರಿನ ಭೋರ್ಗರೆತ ಹಾಗೂ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊಂಡು ಸಂತಸಪಟ್ಟರು.
ದರ್ಶನ ನೀಡಿದ ಹುಲಿರಾಯ: ಸಾಮಾನ್ಯವಾಗಿ ಹುಲಿ, ಕಪ್ಪು ಚಿರತೆ ದರ್ಶನವಾಗುವುದು ದುಸ್ತರ. ಆದರೆ, ಈ ವಿದ್ಯಾರ್ಥಿಗಳಿಗೆ ವಾಪಾಸ್ ಬರುವ ವೇಳೆ ರಸ್ತೆಯಂಚಿನಲ್ಲೇ ಮಲಗಿದ್ದ ಹುಲಿ ಸಾಕಷ್ಟು ಹೊತ್ತು ದರ್ಶನ ನೀಡಿ ಪುಳಕಿತರನ್ನಾಗಿಸಿತ್ತು. ಮರದ ಮೇಲಿದ್ದ ಕಪ್ಪು ಚಿರತೆ ಜೊತೆಗೆ ಕರಡಿ, ಆನೆಗಳು ಸೇರಿ ಅನೇಕ ಪ್ರಾಣಿ ಪ್ರಭೇದ, ವಿವಿಧ ಜಾತಿಯ ಮರಗಳನ್ನು ಕಂಡು ವನಸಿರಿಗೆ ಮನಸೋತಿದ್ದರು.
ಶಿಬಿರಾಧಿಕಾರಿ ಡಾ.ಕೆ.ಎಸ್.ಭಾಸ್ಕರ್, ರಮಣಿನಾಯಕ್, ಡಾ.ನಂಜುಂಡಸ್ವಾಮಿ, ಡಾ.ಕಲಾಶ್ರೀ ಸೇರಿ ವಿವಿಧ ರಾಜ್ಯಗಳ ಎನ್‌ಎಸ್‌ಎಸ್ ಅಧಿಕಾರಿಗಳು ಭಾಗವಹಿಸಿದ್ದರು.