Advertisement
ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗವು 1968ರಲ್ಲಿ ಕೆಆರ್‌ಇಸಿಯಲ್ಲಿ ಆರಂಭವಾದಾಗ ಮೈಸೂರು ವಿವಿಯಿಂದ ಮೂವರು ಉಪನ್ಯಾಸಕರನ್ನು ಕಳುಹಿಸಿದರು: ಜಯಗೋಪಾಲ ಉಚ್ಚಿಲ್, ಶ್ರೀಮತಿ ಜಯಶೀಲ ಉಚ್ಚಿಲ್ ಮತ್ತು ಬಿ. ಎಸ್. ನರಸಿಂಹ ಪ್ರಸಾದ್. ಕೆಆರ್‌ಇಸಿ ಭೌತಶಾಸ್ತ್ರ ವಿಭಾಗದ ಪ್ರೊಫೆಸರ್ ಬಾಗಲಕೋಟಿ ಅವರನ್ನು ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸ್ಥಳೀಯ ಮುಖ್ಯಸ್ಥರನ್ನಾಗಿ ನೇಮಕಮಾಡಿದರು. ಪ್ರೊ. ಬಾಗಲಕೋಟಿ ಅವರು ಫಿಸಿಕ್ಸ್ ಎಂಎಸ್ಸಿ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ವಿಷಯಗಳನ್ನು ಪಾಠ ಮಾಡುತ್ತಿದ್ದರು. 1971ರಲ್ಲಿ ಡಾ. ಎನ್. ಲಿಂಗಪ್ಪ ಅವರು ಹೊಸತಾಗಿ ರೀಡರ್ ಆಗಿ ನೇಮಕವಾಗಿ ಫಿಸಿಕ್ಸ್ ವಿಭಾಗವನ್ನು ಸೇರಿದಾಗ ತಾತ್ಕಾಲಿಕ ನೇಮಕಾತಿಯಾಗಿದ್ದ ಜಯಶೀಲ ಉಚ್ಚಿಲ್‌ರು ವಿಭಾಗವನ್ನು ಬಿಟ್ಟು ಬೇರೆ ಶಿಕ್ಷಣ ಸಂಸ್ಥೆಯನ್ನು ಸೇರಿದರು. ಫಿಸಿಕ್ಸ್ ಎಂಎಸ್ಸಿಯ ಮೊದಲ ತಂಡದ ವಿದ್ಯಾರ್ಥಿಯಾಗಿದ್ದ ರಂಜನ್ ಮೂಡಿತ್ತಾಯರು ತಮ್ಮ ಎಂಎಸ್ಸಿ ಪದವಿ ಬಳಿಕ ಸ್ವಲ್ಪ ಕಾಲ ವಿಭಾಗದಲ್ಲಿ ತಾತ್ಕಾಲಿಕ ಉಪನ್ಯಾಸಕರಾಗಿ ಕೆಲಸಮಾಡಿದರು. 1972ರಲ್ಲಿ ದಾಮೋದರದಾಸ್ ಅವರು ಉಪನ್ಯಾಸಕರಾಗಿ ವಿಭಾಗವನ್ನು ಸೇರಿದರು. 1972 ನವಂಬರದ ವೇಳೆಗೆ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಇದ್ದ ಮೈಸೂರು ವಿವಿಯ ಅಧ್ಯಾಪಕರು: ಡಾ. ಎನ್. ಲಿಂಗಪ್ಪ, ಜಯಗೋಪಾಲ ಉಚ್ಚಿಲ್, ಬಿ.ಎಸ್. ನರಸಿಂಹಪ್ರಸಾದ್ ಮತ್ತು ದಾಮೋದರದಾಸ್.
Related Articles
Advertisement
ಹೀಗೆ ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಇದ್ದ ಐದು ವಿಭಾಗಗಳು- ಕನ್ನಡ, ಫಿಸಿಕ್ಸ್, ಮ್ಯಾಥಮೆಟಿಕ್ಸ್, ಬಯೋಸಾಯನ್ಸ್ ಮತ್ತು ಕಾಮರ್ಸ್. ಹಾಗಾಗಿಯೇ ನಾವು ಪಂಚಪಾಂಡವರು! ಕೇಂದ್ರದ ನಿರ್ದೇಶಕರ ಕಚೇರಿಯು ಕರಂಗಲಪಾಡಿಯ ಕಟ್ಟಡದಲ್ಲಿ ಇದ್ದುದರಿಂದ ಉಳಿದ ನಾಲ್ಕು ವಿಭಾಗಗಳ ಅಧ್ಯಾಪಕರು ತಿಂಗಳಿಗೊಮ್ಮೆ ಸಂಬಳ ತೆಗೆದುಕೊಳ್ಳಲು ಅಲ್ಲಿಗೆ ಬರುತ್ತಿದ್ದರು. ಅಲ್ಲದೆ ಬೇರೆ ಸಂದರ್ಭಗಳಲ್ಲಿ ಬಂದಾಗಲೂ ನಾವು ಭೇಟಿ ಆಗುತ್ತಿದ್ದೆವು, ಯೋಗಕ್ಷೇಮ ಹಂಚಿಕೊಳ್ಳುತ್ತಿದ್ದೆವು. ಕೆಲವು ಅಧ್ಯಾಪಕರು ನಮ್ಮ ಕನ್ನಡವಿಭಾಗದ ಕಾರ್ಯಕ್ರಮಗಳಿಗೂ ಬರುತ್ತಿದ್ದರು. ಎಸ್ವಿಪಿ ಸಂಭಾವನಾ ಗ್ರಂಥ ಪೂರ್ಣಕುಂಭದ ಪ್ರಕಟಣೆಗೆ ಎಲ್ಲ ವಿಭಾಗಗಳ ಅಧ್ಯಾಪಕರು ಧನಸಹಾಯ ಮಾಡಿದ ಉಲ್ಲೇಖ ಆ ಗ್ರಂಥದ ಕೊನೆಯಲ್ಲಿ ಇದೆ. ಎಲ್ಲ ಐದು ವಿಭಾಗಗಳ ಅಧ್ಯಾಪಕರು ಹೆಚ್ಚಿನವರು ತರುಣರಾಗಿದ್ದುದರಿಂದ ನಮ್ಮ ನಡುವೆ ಆತ್ಮೀಯತೆಯ ಬಂಧುತ್ವವೊಂದು ನಿರ್ಮಾಣವಾಗಿತ್ತು. ಬಹಳ ಮಿತವಾದ ಭೌತಿಕ ಸೌಲಭ್ಯಗಳಲ್ಲಿ ಸವಾಲುಗಳನ್ನು ಎದುರಿಸುತ್ತ ಸಮಸ್ಯೆಗಳನ್ನು ನಾವೇ ನಿವಾರಿಸುತ್ತ ಸಂಸ್ಥೆಗಳನ್ನಾಗಲಿ ವ್ಯಕ್ತಿಗಳನ್ನಾಗಲಿ ದೂರಿಕೊಂಡು ಕಾಲಹರಣ ಮಾಡದೆ, ಅನ್ನ ಕೊಡುವ ಸಂಸ್ಥೆಗಾಗಿ ಪ್ರಾಮಾಣಿಕವಾಗಿ ದುಡಿಯಬೇಕು ಎನ್ನುವ ಜೀವನದೃಷ್ಟಿಯನ್ನು ನಾವು ಆ ಕಾಲದ ಎಲ್ಲ ಐದು ವಿಭಾಗಗಳ ಅಧ್ಯಾಪಕರು ರೂಢಿಸಿಕೊಂಡೆವು. ಸ್ನಾತಕೋತ್ತರ ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ, ಉದ್ಯೋಗಗಳ ದಾರಿಗಳನ್ನು ಕಂಡುಕೊಂಡಿದ್ದರು; ಬಹಳ ಮಂದಿ ಅಧ್ಯಾಪನ, ಬ್ಯಾಂಕ್ ಉದ್ಯೋಗಗಳ ಸಹಿತ ಉನ್ನತ ಹುದ್ದೆಗಳನ್ನು ಪಡೆದರು. ಮ್ಯಾಥಮೆಟಿಕ್ಸ್ ಎಂಎಸ್ಸಿಯ ಮೊದಲ ತಂಡದ ವಿದ್ಯಾರ್ಥಿಯಾಗಿದ್ದ ಅನಂತಕೃಷ್ಣರು ಮುಂದೆ ಕರ್ನಾಟಕ ಬ್ಯಾಂಕ್ ಸೇರಿ, ಅದರ ಅತ್ಯುನ್ನತ ಹುದ್ದೆಯಾದ ಅಧ್ಯಕ್ಷ ಹಾಗೂ ಸಿಇಒ ಆಗಿ ಒಳ್ಳೆಯ ಸಾಧನೆಮಾಡಿ ಹೆಸರು ಗಳಿಸಿದರು. ಇಂತಹ ಅನೇಕ ವಿದ್ಯಾರ್ಥಿಗಳು ಆರಂಭದ ತಂಡಗಳಲ್ಲಿ ಇದ್ದರು.
1968ರಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರ ಆರಂಭವಾದಾಗ ಗ್ರಂಥಾಲಯಕ್ಕೆ ಮೈಸೂರಿನಿಂದ ಬಂದವರು: ಸಹಾಯಕ ಗ್ರಂಥಪಾಲ ಹಿರೇಮಠ ಮತ್ತು ಗ್ರಂಥಾಲಯ ಸಹಾಯಕ ಕೆ. ವಾಮನ್. ಹಿರೇಮಠರು ಮೈಸೂರಿಗೆ ಹೋದಮೇಲೆ ಮಂಗಳೂರಿಗೆ ಬಂದ ಸಹಾಯಕ ಗ್ರಂಥಪಾಲರು ಅಸದುಲ್ಲಾ ಷರೀಫ್. ಕೆ. ವಾಮನ್‌ರು, ಆರಂಭದಿಂದ ತಮ್ಮ ನಿವೃತ್ತಿಯವರೆಗೆ ಗ್ರಂಥಾಲಯದ ಬೆಳವಣಿಗೆಯಲ್ಲಿ ಭಾಗಿಯಾದರು. ಸ್ನಾತಕೋತ್ತರ ಕೇಂದ್ರದ ಕಚೇರಿ ಸಿಬ್ಬಂದಿಯಲ್ಲಿ ಅನೇಕ ಮಂದಿ ಮೈಸೂರಿಗೆ ಹಿಂದಿರುಗಿದರು. ಸೂಪರಿಂಟೆಡೆಂಟ್ ಗೋಪಾಲ್‌ರ ಸ್ಥಾನಕ್ಕೆ ಕೃಷ್ಣಮೂರ್ತಿ ಬಂದರು. ಕೆಲವರನ್ನು ಸ್ಥಳೀಯವಾಗಿ ತಾತ್ಕಾಲಿಕ ನೆಲೆಯಲ್ಲಿ ತೆಗೆದುಕೊಳ್ಳಲಾಯಿತು.
1972 ನವಂಬರ: ನಾಲ್ಕೂವರೆ ವರ್ಷಗಳ ಮಂಗಳೂರು ವಾಸ್ತವ್ಯದ ಬಳಿಕ ಕೊಣಾಜೆಯ ಸ್ವತಂತ್ರ ಕ್ಯಾಂಪಸ್‌ಗೆ ಐದು ಸ್ನಾತಕೋತ್ತರ ವಿಭಾಗಗಳು ಕಚೇರಿ ಮತ್ತು ಗ್ರಂಥಾಲಯ ಸಹಿತ ವರ್ಗಾವಣೆಗೊಳ್ಳುವ ಸುಮುಹೂರ್ತ ಕೂಡಿ ಬಂದಿತು. ನಮಗೆ ಆಸರೆ ಕೊಟ್ಟ ಸೈಂಟ್ ಅಲೋಸಿಯಸ್ ಕಾಲೇಜು, ಕೆಆರ್‌ಇಸಿ ಮತ್ತು ಕೆಎಂಸಿಗಳ ಔದಾರ್ಯಕ್ಕೆ ನಮಿಸಿದೆವು. ನಾವು ಐದು ವಿಭಾಗಗಳ ಪಂಚಪಾಂಡವರು ಕೊಣಾಜೆಯ ವನವಾಸಕ್ಕೆ ಸಿದ್ಧರಾದೆವು. ನನಗೆ ಪು. ತಿ. ನರಸಿಂಹಾಚಾರ್ ಅವರ ಗೋಕುಲನಿರ್ಗಮನ ನಾಟಕ ನೆನಪಾಯಿತು. ಆ ನಾಟಕದಲ್ಲಿ ಕೃಷ್ಣನು ತನ್ನ ನೈಸರ್ಗಿಕ ಪರಿಸರವಾದ ಗೋಕುಲವನ್ನು ತ್ಯಜಿಸಿ, ನಗರವಾದ ಮಥುರೆಗೆ ಹೊರಡುತ್ತಾನೆ. ಆದರೆ, ನಮ್ಮದು ಅದಕ್ಕೆ ವಿರುದ್ಧವಾದುದು. ನಾವು ಮಂಗಳೂರು ಪಟ್ಟಣವನ್ನು ಬಿಟ್ಟು ಹಳ್ಳಿಯಾದ ಕೊಣಾಜೆಗೆ ಹೊರಟಿದ್ದೇವೆ. ಹಾಗಾಗಿ, ನಮ್ಮದು “ವಿಲೋಮ ಗೋಕುಲ ನಿರ್ಗಮನ’! ಅಥವಾ “ಗೋಕುಲ ಆಗಮನ!’
ಮಂಗಳೂರಿನಿಂದ ಕೊಣಾಜೆಗೆ ನಮ್ಮ ಕನ್ನಡ ವಿಭಾಗದ ಪೀಠೊಪಕರಣಗಳನ್ನು ಸಾಗಿಸುವ ಜವಾಬ್ದಾರಿಯನ್ನು ಪ್ರೊಫೆಸರ್ ನನಗೆ ಒಪ್ಪಿಸಿದರು. ಒಂದು ಲಾರಿಯಲ್ಲಿ ಕುರ್ಚಿ ಮೇಜು ಕಪಾಟುಗಳನ್ನು ತುಂಬಿಸಿಕೊಂಡು, ನಾನು ಲಾರಿಯಲ್ಲಿ ಡ್ರೈವರ್ ಹತ್ತಿರ ಕುಳಿತುಕೊಂಡು ಕೊಣಾಜೆಗೆ ಅಭಿಮುಖವಾಗಿ ಹೊರಟೆ. ಹೊಸಮನೆಯ ಒಕ್ಕಲಿಗೆ ಹೋಗುವ ಉತ್ಸಾಹ ಸಂಭ್ರಮದಲ್ಲಿ ಲಾರಿಯ ಜಿಗಿತಗಳು ಯಕ್ಷಗಾನದ ಕುಣಿತಗಳ ಹಾಗೆ ಭಾಸವಾದುವು. ನಳದಮಯಂತಿ ಯಕ್ಷಗಾನ ಬಯಲಾಟದ ಅಳಕೆ ರಾಮಯ್ಯ ರೈ ಅವರ ಋತುಪರ್ಣ ಪಾತ್ರದಂತೆ ನನ್ನನ್ನು ಕಲ್ಪಿಸಿಕೊಂಡು, ರಥದಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದ ಬಾಹುಕನ ಕಡೆಗೆ ಹರುಷದ ನೋಟವನ್ನು ಬೀರುತ್ತ, ಮುಂದೆ ಸಾಗಿದಾಗ ತೊಕ್ಕೊಟ್ಟಿನಲ್ಲಿ ಎದುರಾದ ವಾಣಿಜ್ಯ ತೆರಿಗೆ ತಪಾಸಣೆಯ ಗೇಟಿನಿಂದ ರಸಭಂಗವಾಯಿತು. ಲಾರಿಯಿಂದ ಇಳಿದು, ಕೇಂದ್ರದ ನಿರ್ದೇಶಕರು ಕೊಟ್ಟ ಸಾಗಾಣಿಕೆಯ ಪ್ರಮಾಣಪತ್ರವನ್ನು ತಪಾಸಣೆಯ ಕೇಂದ್ರದಲ್ಲಿ ತೋರಿಸಿದೆ. ಅಲ್ಲಿ ಇದ್ದ ಅಧಿಕಾರಿ ಹೆಚ್ಚು ವಿಚಾರಣೆ ಮಾಡದೆ ಸೀಲ್ ಹೊಡೆದು ಕೊಟ್ಟ. ಮತ್ತೆ ನಮ್ಮ ರಥ ಶರವೇಗದಲ್ಲಿ ಸಾಗಿತು. ಅದು ಕೊಣಾಜೆ ತಲುಪಿ ನಮ್ಮ ನೂತನ ಕಟ್ಟಡದ ಬಳಿ ನಿಲ್ಲುತ್ತಿದ್ದಂತೆ ನಮ್ಮ ವಿಭಾಗದ ವಿದ್ಯಾರ್ಥಿಗಳು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು. ಅವರ ಉಲ್ಲಾಸ-ಉದ್ಘೋಷಗಳ ಆವರಣದಲ್ಲಿ ಸ್ನಾತಕೋತ್ತರ ಕೇಂದ್ರ ಮಂಗಳಗಂಗೋತ್ರಿಯ ಉಜ್ವಲ ಭವಿಷ್ಯದ ಕನಸು ಮೂಡಿತು. ವಿದ್ಯಾರ್ಥಿಗಳೆಲ್ಲ ಸೇರಿ ಪೀಠೊಪಕರಣಗಳನ್ನು ಲಾರಿಯಿಂದ ತೆಗೆದು ಕಟ್ಟಡದ ಒಳಗೆ ಜೋಡಿಸಿದರು. ಮಂಗಳಗಂಗೋತ್ರಿಯಲ್ಲಿ ಹೊಸ ಅಧ್ಯಾಯವೊಂದು ಆರಂಭವಾಯಿತು.
ನಾವು ಕೊಣಾಜೆಗೆ ಹೋದ ಆರಂಭದಲ್ಲಿ ಅಲ್ಲಿಗೆ ಮಂಗಳೂರಿನಿಂದ ಸಿಟಿಬಸ್ ಇರಲಿಲ್ಲ. ಮೂರು ಸರ್ವಿಸ್ ಬಸ್‌ಗಳು ಇದ್ದವು. ಸಿಪಿಸಿ ಮತ್ತು ಶಂಕರವಿಠuಲ್‌ಗಳು ಕೊಣಾಜೆ ಮೂಲಕ ವಿಟ್ಲಕ್ಕೆ , ಇನ್ನೊಂದು ಕೊಣಾಜೆ ಮೂಲಕ ಬಾಕ್ರಬೈಲ್‌ಗೆ. ಆ ಸರ್ವಿಸ್ ಬಸ್‌ಗಳು ಮಂಗಳೂರಿನಿಂದ ಕೋಟೆಕಾರ್ ಬೀದಿ ಮೂಲಕ ಕೊಣಾಜೆ ಮಾರ್ಗವಾಗಿ ಹೋಗುತ್ತಿದ್ದುವು. ಎಸ್‌ವಿಪಿ ಅವರು ಮಂಗಳೂರಿನಿಂದ ಕೊಣಾಜೆಗೆ ಹೆಚ್ಚಾಗಿ ಬರುತ್ತಿದ್ದದ್ದು ಬಾಕ್ರಬೈಲ್ ಸರ್ವಿಸ್ ಬಸ್ಸಿನಲ್ಲಿ. ಅವರು ಬಾಕ್ರಬೈಲ್ ಬಸ್ಸಿನ ಬಗ್ಗೆ ಒಂದು ವಚನವನ್ನೂ ಬರೆದಿದ್ದಾರೆ! ಮುಂದೆ ನಮ್ಮ ಹಕ್ಕೊತ್ತಾಯದ ಪರಿಣಾಮವಾಗಿ ಮಂಗಳೂರಿನಿಂದ ಕೊಣಾಜೆಗೆ ಸಿಟಿಬಸ್‌ಗಳು ಆರಂಭವಾದುವು. ಮೊದಲು ಬಂದ ಸಿಟಿಬಸ್‌ಗಳು “ಜ್ಯೋತಿ’ ಮತ್ತು “ವಜ್ರೆàಶ್ವರಿ’. ಬಳಿಕ “ಭಾರತ್’ ಬಸ್ ಬಂದಿತು. ಆ ಸಿಟಿಬಸ್‌ಗಳು ಮಂಗಳೂರಿನಿಂದ ತೊಕ್ಕೊಟ್ಟು-ಕುತ್ತಾರು ಮೂಲಕ ಕೊಣಾಜೆಗೆ ಬರಲು ಆರಂಭಿಸಿದವು. ಕೊಣಾಜೆಯಿಂದ ಮಂಗಳೂರಿಗೆ ಹೋಗುವ ಸಂಜೆಯ ಬಸ್ ತಪ್ಪಿಹೋದಾಗ, ಕೊಣಾಜೆಯಿಂದ ತೊಕ್ಕೊಟ್ಟುವರೆಗೆ ನಡೆದುಕೊಂಡು ಹೋಗಿ, ಅಲ್ಲಿಂದ ಬಸ್‌ನಲ್ಲಿ ಮಂಗಳೂರಿಗೆ ಹೋದ ಪಾದಯಾತ್ರೆಯ ದಿನಗಳು ನೆನಪಾಗುತ್ತವೆ.
ಅಷ್ಟು ಹೊಸತೇನಲ್ಲ ನಾಳೆಯೋದುವ ವರದಿ. ಸ್ಮತಿಪಥದ ಬೆಳ್ಳಿದಾರದ ಸುರುಳಿ ಬಿಚ್ಚುತಿದೆ- ಕೆ. ಎಸ್. ನರಸಿಂಹಸ್ವಾಮಿ ಅವರ ಮನೆಯಿಂದ ಮನೆಗೆ ಕವನದ ಈ ಸಾಲುಗಳು ಕೊಣಾಜೆಯಲ್ಲಿನ ನಮ್ಮ ಮುಂದಿನ ವರ್ಷಗಳ ಅನುಭವಗಳಿಗೂ ಅನ್ವಯವಾಗುತ್ತವೆ.
ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ಬರೆದ “ಸದಾಶಿವ ಗುರು’ ಅಂಕಿತದ ವಚನಗಳುಅಲ್ಲಿ ದೇವಾಲಯ, ಇಲ್ಲಿ ಸ್ನಾತಕೋತ್ತರ ಕೇಂದ್ರ
ಅಲ್ಲಿ ಭಕ್ತಭಕ್ತೆಯರು, ಇಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು
ಅಲ್ಲಿ ಅರ್ಚಕರು, ಇಲ್ಲಿ ಅಧ್ಯಾಪಕರು
ಅಲ್ಲಿ ಅರ್ಚನ , ಇಲ್ಲಿ ಪ್ರವಚನ
ಅದು ಮಂಗಳಾಂಬಾ ದೇವಾಲಯ
ಇದು ಮಂಗಳಗಂಗೋತ್ರಿಯ ಜ್ಞಾನಾಲಯ ಸದಾಶಿವಗುರು
.
ಮಂಗಳಗಂಗೋತ್ರಿಯೆ ನನ್ನ ಕಾಶಿ
ಮಂಗಳಗಂಗೋತ್ರಿಯೆ ನನ್ನ ರಾಮೇಶ್ವರ
ಇಲ್ಲಿ ಸರಸ್ವತಿಯ ಸೇವೆಗೈದರೆ ಅದು ನಿನಗೆ ತೃಪ್ತಿಯಾಗುತ್ತದೆ
ಎಂಬುದನು ನಾ ಬಲ್ಲೆ ಸದಾಶಿವಗುರು
.
ತರಗತಿ ತರಗತಿಗಳಲ್ಲಿ , ತರತರದ ಗತಿಗಳಲ್ಲಿ ಪಾಠ ನಡೆಯುತ್ತಿದೆ
ಮತಿಮತಿಗಳಲ್ಲಿ , ಮತಮತವ ಮಥಿಸಿ , ತತ್ವದ ನವನೀತವ ತೆಗೆಯಲಾಗುತ್ತಿದೆ
ಮಂಗಳಗಂಗೋತ್ರಿಯ ಈ ಕೇಂದ್ರದ ಉದಯ ನಿಮ್ಮ ದಯ, ಸದಾಶಿವಗುರು ಬಿ. ಎ. ವಿವೇಕ ರೈ