ಬೀದರ: ಜ.30ರಿಂದ ಫೆಬ್ರವರಿ 13ರ ವರೆಗೆ ಜಿಲ್ಲಾದ್ಯಂತ ನಡೆಯಲಿರುವ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ-2019ರ ಭಿತ್ತಿ ಪತ್ರ, ಕರಪತ್ರ ಬ್ಯಾನರ್‌ಗಳನ್ನು ಸೋಮವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಎಲ್ಲಾ ಗ್ರಾಮ ಪಂಚಾಯಿತಿ, ಪುರಸಭೆಗಳಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಕುಷ್ಠರೋಗ ನಿವಾರಿಸಲು ‘ಕೈ ಕೈ ಜೋಡಿಸಿ ಕುಷ್ಠ ನಿವಾರಿಸಿ’ ಎಂಬ ಘೋಷಣೆಯಂದಿಗೆ ಸಾರ್ವಜನಿಕರ ಸಮೂಹದಲ್ಲಿ ಪ್ರತಿಜ್ಞೆ ಸ್ವೀಕರಿಸಬೇಕು. ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿಯೂ ಈ ಕಾರ್ಯಕ್ರಮ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮ ಯಶಸ್ವಿಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಸಹಕಾರ ಪಡೆಯುವಂತೆ ಸಲಹೆ ನೀಡಿದರು.ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆಗಳ ಬಗ್ಗೆ ಜನರು ತಮ್ಮ ನೆರೆ- ಹೊರೆಯವರಿಗೆ ತಿಳಿಸುವಂತಾಗಬೇಕು. ಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳನ್ನು ತಾರತಮ್ಯದಿಂದ ಕಾಣದೇ ಗೌರವಯುತವಾಗಿ ಉಪಚರಿಸಬೇಕು ಎಂದು ನಿರ್ದೇಶನ ನೀಡಿದರು.
ಇದು ಸಾಂಕ್ರಾಮಿಕ ರೋಗವಾಗಿದ್ದು, ಯಾವುದೇ ಶಾಪ-ಪಾಪದಿಂದ ಬರದೇ ಮೈಕೋ ಬ್ಯಾಕ್ಟ್ರೀಯಾ ಲೆಪ್ರ ಎಂಬ ರೋಗಾಣುವಿನಿಂದ ಬರುತ್ತದೆ. ಸೋಂಕಿತ ವ್ಯಕ್ತಿ ಸೀನುವುದು, ಕೆಮ್ಮಿದಾಗ ಹೊರಬರುವ ರೋಗಾಣುಗಳು ಗಾಳಿಯಲ್ಲಿ ಸೇರಿ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಈ ಕಾಯಿಲೆ ಇರುವವರು ಹೆದರಬೇಕಾಗಿಲ್ಲ. ರೋಗವನ್ನು ಗುಪ್ತವಾಗಿಡದೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿಗಳಿಗೆ ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು ಎನ್ನುವ ತಿಳಿವಳಿಕೆ ಎಲ್ಲರಲ್ಲಿಯೂ ಮೂಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ| ಎಂ.ಎ.ಜಬ್ಟಾರ್, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ| ರಾಜಶೇಖರ ಪಾಟೀಲ, ಮೇಲ್ವಿಚಾರಕ ವೀರಶೆಟ್ಟಿ ಚನ್ನಶೆಟ್ಟಿ, ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.