ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಕರಿಗುಡ್ಡದ ಹತ್ತಿರ ಚಿರತೆಯೊಂದು ಬೋನಿಗೆ ಬಿದ್ದಿದೆ. ಈ ಭಾಗದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದ್ದು, ಗುರುವಾರ ಬೆಳಗಿನ ಜಾವ ಮತ್ತೂಂದು ಚಿರತೆ ಸೆರೆ ಸಿಕ್ಕಿದೆ. ಈ ಭಾಗದಲ್ಲಿ ಸೆರೆಸಿಕ್ಕ ಆರನೇ ಚಿರತೆ ಇದಾಗಿದ್ದು, ಸಂಡೂರಿನ ಕುರೆಕುಪ್ಪಿ ಮತ್ತು ಕಾಕುಬಾಳು ಗ್ರಾಮದಲ್ಲೂ ಚಿರತೆಗಳು ಸಿಕ್ಕಿದ್ದು ಈ ವರೆಗೆ ಒಟ್ಟು 8 ಚಿರತೆಗಳನ್ನು ಸೆರೆಹಿಡಿಯಲಾಗಿದೆ.
ಗ್ರಾಮದ ಕರಿಗುಡ್ಡ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ 6 ವರ್ಷದ ಎರಡು ಮೂಕ್ಕಾಲು ಅಡಿ ಎತ್ತರ, 4 ಅಡಿ ಉದ್ದವಿರುವ ಗಂಡು ಚಿರತೆ ಬಂಧಿಯಾಗಿದೆ. ಚಿರತೆ ಬೋನಿನಿಂದ ಹೊರಬರಲು ಪ್ರಯತ್ನಿಸಿದ್ದು, ಕಬ್ಬಿಣಿದ ಸರಳುಗಳು ತಾಗಿ ಮುಖದ ತುಂಬ ಗಾಯಗಳಾಗಿವೆ. ಗುಡ್ಡದ ಬಳಿ ಬಂದ ಜನ ಚಿರತೆ ಬೋನಿಗೆ ಬಿದ್ದಿರುವುದನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದರೋಜಿ ಕರಡಿಧಾಮದ ವಲಯ ಅಧಿಕಾರಿ ಟಿ.ಭಾಸ್ಕರ್, ವಿನೋದಕುಮಾರ್, ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎನ್.ಬಸವರಾಜ ಹಾಗೂ ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
2018ರ ಡಿ.11 ಮತ್ತು 25ರಂದು ನರಭಕ್ಷಕ ಚಿರತೆಗಳು ಇಬ್ಬರು ಮಕ್ಕಳನ್ನು ಬಲಿ ಪಡೆದು, ಈ ಭಾಗದಲ್ಲಿ ಆತಂಕ ಸೃಷ್ಟಿಸಿದ್ದವು. ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡು ಒಂದು ಚಿರತೆ ಸೆರೆ ಹಿಡಿಯುತ್ತಿದ್ದಂತೆ ಮತ್ತೂಂದು ಚಿರತೆ ಪ್ರತ್ಯಕ್ಷವಾಗುತ್ತಿತ್ತು. ನಂತರ ಕಾರ್ಯಾಚರಣೆ ಚುರುಕುಗೊಳಿಸಿ ಬೋನುಗಳ ಅಳವಡಿಕೆ, 3 ಡಿಜಿಟಲ್ ಟ್ರ್ಯಾಪ್ ಕ್ಯಾಮೆರಾ ಅಳವಡಿಸಿ ನಿಗಾ, ಜನರ ಸಹಕಾರದೊಂದಿಗೆ ಕೂಂಬಿಂಗ್, ಚಿರತೆ ಚಲನವಲನ ಕಂಡು ಹಿಡಿಯಲು ಡ್ರೋಣ್ ಕ್ಯಾಮೆರಾ ಬಳಕೆ ಸೇರಿ ನಿರಂತರವಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಪರಿಣಾಮವಾಗಿ 2018ರ ಡಿ.21, 28, 30 ಹಾಗೂ 2019ರ ಜ.3 ಮತ್ತು ಜ.15 ರಂದು ಒಟ್ಟು ಐದು ಚಿರತೆ ಸೆರೆ ಹಿಡಿಯಲಾಗಿತ್ತು.
ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕು ದೇವಲಾಪುರ ಗ್ರಾಮದಲ್ಲಿ ಗುರುವಾರ ಮತ್ತೂಂದು ಚಿರತೆ ಕಾಣಿಸಿಕೊಂಡಿದ್ದು, ಕುರಿ ಮೇಲೆ ದಾಳಿ ಮಾಡಿದೆ.
ಗ್ರಾಮದ ಕರೆಗುಡ್ಡದ ಬಳಿ ಮೇಕೆ ಮೇಲೆ ದಾಳಿ ಮಾಡಿದ ಚಿರತೆ ಅದನ್ನು ಹೊತ್ತೂಯ್ಯುತ್ತಿದ್ದಾಗ ಕುರಿ ಕಾಯುತ್ತಿದ್ದ ಸಿ.ಡಿ.ಗಿಡ್ಡಪ್ಪ, ಮಣಿ ಎನ್ನುವವರು ನೋಡಿ ಚಿರತೆಯನ್ನು ಓಡಿಸಿದ್ದಾರೆ. ಸಿಡಿ ಗಿಡ್ಡಪ್ಪ ಎಂಬುವವರು ರಾತ್ರಿ ವೇಳೆ ಕುರಿಗಳನ್ನು ಹಟ್ಟಿಗೆ ಹೊಡೆದುಕೊಂಡು ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ. ದೇವಲಾಪುರದಲ್ಲಿ ಗುರುವಾರ ಬೆಳಗ್ಗೆ ಚಿರತೆ ಸೆರೆಯಾಗಿದ್ದು, ಈಗ ಮತ್ತೆ ಚಿರತೆ ಕಾಣಿಕೊಂಡಿರುವುದರಿಂದ ಗ್ರಾಮಸ್ಥರು ಆತಂಕ ಸೃಷ್ಟಿಸಿದೆ.
ಕಂಪ್ಲಿ ತಾಲೂಕಿನ ಸೋಮಲಾಪುರ ಮತ್ತು ದೇವಲಾಪುರದಲ್ಲಿ ಈ ವರೆಗೂ 6 ಹಾಗೂ ಸಂಡೂರು ತಾಲೂಕಿನ ಕುರೆಕುಪ್ಪ, ಕಾಕುಬಾಳು ಗ್ರಾಮದಲ್ಲಿ ತಲಾ ಒಂದರಂತೆ ಒಟ್ಟು 8 ಚಿರತೆ ಸೆರೆ ಹಿಡಿದಿದ್ದು, ಇನ್ನು ಚಿರತೆಗಳು ಇವೆ ಎಂದು ಗ್ರಾಮಸ್ಥರು ಹೇಳುತ್ತಿರುವುದರಿಂದ ಇನ್ನೊಂದು ತಿಂಗಳು ಚಿರತೆಗಳ ಸೆರೆ ಹಿಡಿಯುವ ಕಾರ್ಯಚರಣೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
•ಡಾ| ಪಿ.ರಮೇಶ್‌ಕುಮಾರ್, ಬಳ್ಳಾರಿ ಪ್ರಾದೇಶಿಕ ವಿಭಾಗದ ಡಿಎಫ್‌ಒ