ಕುಂದಾಪುರ: ಕೆರಾಡಿ ಗ್ರಾಮದ ಚಪ್ಪರನಮಕ್ಕಿ ಎಂಬಲ್ಲಿ ಸೋಮವಾರ ಬೆಕ್ಕಿನ ಬೇಟೆಗಾಗಿ ಬಂದು ಆವರಣವಿಲ್ಲದ ಬಾವಿಗೆ ಬಿದ್ದಿದ್ದ ಭಾರಿ ಗಾತ್ರದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬಂದಿ ರಕ್ಷಿಸಿದ್ದಾರೆ.
ಕೆರಾಡಿ ಗ್ರಾಮದ ಕೃಷಿಕ ಚಪ್ಪರಮಕ್ಕಿ ಸುಕುಮಾರ ಶೆಟ್ಟಿ ಮನೆ ಸಮೀಪದ ಆವರಣವಿಲ್ಲದ ಬಾವಿಗೆ ಬೇಟೆ ಅರಸಿ ಬಂದಿದ್ದ ಚಿರತೆ ಆಯ ತಪ್ಪಿ ಬಿದ್ದಿತ್ತು. ಬಾವಿಗೆ ಬಿದ್ದ ಚಿರತೆಯ ಕೂಗಿನಿಂದ ವಿಷಯ ತಿಳಿದ ಮನೆಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಕುಂದಾಪುರದ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ನೇತೃತ್ವದಲ್ಲಿ ಸುಮಾರು ಎರಡೂವರೆ ತಾಸು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬಂದಿ, ಸ್ಥಳಿಯರ ಸಹಕಾರದಿಂದ ಇಲಾಖೆಯ ಬೋನಿನಲ್ಲಿ ಚಿರತೆಯನ್ನು ಬಂಧಿಸಿ, ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ವಲಯಾರಣ್ಯಾಧಿಕಾರಿ ಪ್ರಭಾಕರ್ ಕುಲಾಲ್, ಬಾವಿಗೆ ಬಿದ್ದು, ಸಹಾಯಕ್ಕಾಗಿ ನಿರೀಕ್ಷೆ ಮಾಡುತ್ತಿದ್ದ ಚಿರತೆಯನ್ನು ಬೋನು ಹಾಗೂ ಹಗ್ಗವನ್ನು ಬಳಸಿ ಮೇಲಕ್ಕೆ ಎತ್ತಲಾಗಿದೆ. ಸೆರೆಯಾದುದು ಹೆಣ್ಣು ಚಿರತೆಯಾಗಿದ್ದು, ಅಂದಾಜು ಮೂರರಿಂದ ಮೂರೂವರೆ ವರ್ಷ ಆಗಿರಬಹುದು. ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ, ಅರಣ್ಯಕ್ಕೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.
ಕುಂದಾಪುರ ಅರಣ್ಯ ಉಪವಿಭಾಗದ ಡಿಎಫ್‌ಓ ಆಶಿಶ್ ರೆಡ್ಡಿ, ಎಸಿಎಫ್ ಕ್ಲಿಫರ್ಡ್ ಲೋಬೊ ಮಾರ್ಗದರ್ಶನದಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ, ಉಪ ವಲಯಾರಣ್ಯಾಧಿಕಾರಿಗಳಾದ ಉದಯ್, ಸುನಿಲ್, ಗುರುರಾಜ್, ಶರತ್, ವೆಂಕಟೇಶ್, ಅರಣ್ಯ ರಕ್ಷಕರಾದ ಬಸವರಾಜ್, ಅಶೋಕ್, ಹರಿಪ್ರಸಾದ್, ರಾಘವೇಂದ್ರ, ವಿಜಯ್, ರಂಜಿತ್, ಗ್ರಾಮ ಅರಣ್ಯ ಸಮಿತಿ ಕಾರ್ಯಕರ್ತರು ಹಾಗೂ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.