Advertisement

ಹುಬ್ಬಳ್ಳಿ: ಇನ್ನೂ ಸೆರೆಯಾಗದ ಚಿರತೆ

01:21 PM Sep 23, 2021 | Team Udayavani |

 |ಅರಣ್ಯ ಇಲಾಖೆಯ ಸಶಸ್ತ್ರಧಾರಿ ಎರಡು ತಂಡಗಳ ಕಾರ್ಯಾಚರಣೆ|  ಡ್ರೋನ್‌ ಕ್ಯಾಮರಾದಿಂದಲೂ ಇರುವಿಕೆ ಬಗ್ಗೆ ಸುಳಿವು ದೊರೆತಿಲ್ಲ

Advertisement

ಹುಬ್ಬಳ್ಳಿ: ನಗರದ ಶಿರಡಿ ನಗರದಲ್ಲಿ ಎರಡು ದಿನಗಳ ಹಿಂದೆ ಪ್ರತ್ಯಕ್ಷವಾಗಿದ್ದ ಚಿರತೆ ಮತ್ತೆ ತನ್ನ ಇರುವಿಕೆ ಮರೆಮಾಚಿಕೊಂಡು ತಿರುಗುತ್ತಿದ್ದು, ಅರಣ್ಯ ಇಲಾಖೆಯವರು ಅದರ ಸೆರೆಗೆ ಪ್ರತ್ಯೇಕ ಎರಡು ತಂಡಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ನೃಪತುಂಗ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರ ನಿದ್ದೆಗೆಡಿಸಿರುವ ಚಿರತೆ ಸೆರೆಗಾಗಿ ಆರ್‌ ಎಫ್‌ಒ ಶ್ರೀಧರ ತೆಗ್ಗಿನಮನಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ತಲಾ 10 ರಿಂದ 15 ಜನರಿದ್ದ ಸಶಸ್ತ್ರಧಾರಿ ಪ್ರತ್ಯೇಕ ಎರಡು ತಂಡಗಳು ರಾಜನಗರದ ಕೇಂದ್ರೀಯ ವಿದ್ಯಾಲಯ ಸುತ್ತ ಮಂಗಳವಾರ ರಾತ್ರಿ 11:00ರಿಂದ ತಡರಾತ್ರಿ 1:00 ಗಂಟೆವರೆಗೆ, ಬುಧವಾರ ಬೆಳಗ್ಗೆ 6:30ರಿಂದ ಮಧ್ಯಾಹ್ನ 1:30 ಗಂಟೆವರೆಗೆ ಹಾಗೂ 3:00ರಿಂದ ಸಂಜೆ 6:00ರವರೆಗೆ ಕಾರ್ಯಾಚರಣೆ ನಡೆಸಿವೆ. ಈ ತಂಡದವರೊಂದಿಗೆ ದಾಂಡೇಲಿ, ಗದಗ ಹಾಗೂ ಸುತ್ತಲಿನ ವನ್ಯಜೀವಿ ಸಂರಕ್ಷಣಾ ತಂಡದವರು ಹಾಗೂ ಅರವಳಿಕೆ ತಜ್ಞರು, ಪಶುವೈದ್ಯರು ಪಾಲ್ಗೊಂಡಿದ್ದರು. ನೃಪತುಂಗ ಬೆಟ್ಟ, ಕೇಂದ್ರೀಯ ವಿದ್ಯಾಲಯ, ಶಿರಡಿನಗರದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಗಂಡು ಆಗಿದ್ದರೆ ಅದು ಹೆಣ್ಣು ಚಿರತೆ ಹುಡುಕಿಕೊಂಡು ಬರಬಹುದೆಂಬ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಕೇಂದ್ರೀಯ ವಿದ್ಯಾಲಯ ಆವರಣದಲ್ಲಿ ಹೆಣ್ಣು ಚಿರತೆ ಕೂಗುವ ಶಬ್ದದ ಧ್ವನಿವರ್ಧಕ ಹಚ್ಚಲಾಗಿತ್ತು. ಆದರೆ ಚಿರತೆ ಮಾತ್ರ ಕಾಣಿಸಿಕೊಳ್ಳಲಿಲ್ಲ. ಡ್ರೋನ್‌ ಕ್ಯಾಮರಾ ಮೂಲಕ ಪತ್ತೆ ಮಾಡಿದರೂ ಅದರ ಇರುವಿಕೆ ಬಗ್ಗೆ ಸುಳಿವು ದೊರೆತಿಲ್ಲ ಎಂದು ತಿಳಿದು ಬಂದಿದೆ.

ಚಿರತೆ ಸೆರೆ ಹಿಡಿಯಲು ನೃಪತುಂಗ ಬೆಟ್ಟ ಸುತ್ತ ಹಾಗೂ ಕೇಂದ್ರೀಯ ವಿದ್ಯಾಲಯದಲ್ಲಿ ಒಂದು ಸೇರಿ ಒಟ್ಟು ಐದು ಬೋನ್‌ಗಳನ್ನು ಇರಿಸಲಾಗಿದ್ದು, ಬುಧವಾರ ಅವುಗಳ ಸುತ್ತಲೂ ಇರಿಸಿದ್ದ ಒಣಗಿದ್ದ ಗಿಡದ ಟೊಂಗೆಗಳನ್ನು ಸ್ವತ್ಛಗೊಳಿಸಿ ಹೊಸದಾಗಿ ಹಚ್ಚ ಹಸಿರಿನ ಟೊಂಗೆಗಳನ್ನು ಇಡಲಾಗಿದ್ದು, ಬೋನ್‌ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗಿದೆ.

ಚಿರತೆ ಮಲ-ಪಾದದ ಗುರುತು ಪತ್ತೆ 

Advertisement

ಹುಬ್ಬಳ್ಳಿ: ಅರಣ್ಯ ಇಲಾಖೆಯವರು ಬುಧವಾರ ನಡೆಸಿದ ಕಾರ್ಯಾಚರಣೆ ವೇಳೆ ಚಿರತೆಯ ಮಲ, ಪಾದದ ಗುರುತು ಹಾಗೂ ಅದು ತಿಂದು ಬಿಟ್ಟಿದ್ದ ಹಂದಿ, ನಾಯಿಯ ಮಾಂಸ ದೊರೆತಿವೆ. ಇವೆಲ್ಲವು 3-4 ದಿನದ ಹಿಂದಿನದ್ದಾಗಿವೆ. ಧಾರವಾಡ ತಾಲೂಕು ಕವಲಗೇರಿಯಲ್ಲಿ ಕಾಣಿಸಿಕೊಂಡ ಚಿರತೆ ನಗರದಲ್ಲಿ ಪ್ರತ್ಯಕ್ಷವಾಗಿದ್ದು ಇದ್ದರೂ ಇರಬಹುದು. ಏಕೆಂದರೆ ಇಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದಾಗ ಅದು ಅಮರಗೋಳ ಮೂಲಕ ಕವಲಗೇರಿಗೆ ತೆರಳಿರಬಹುದು ಎಂದು ಮೂಲಗಳು ತಿಳಿಸಿವೆ.

ಹೆಚ್ಚು ಕ್ಯಾಮೆರಾ ಅಳವಡಿಕೆ:

ಚಿರತೆಯ ಚಲನವಲನ ಪತ್ತೆಗಾಗಿ ಅರಣ್ಯ ಇಲಾಖೆಯವರು ಬುಧವಾರ ಹೆಚ್ಚುವರಿಯಾಗಿ ಮೂರು ಟ್ರ್ಯಾಪ್‌ ಕ್ಯಾಮರಾ ಅಳವಡಿಸಿದ್ದಾರೆ. ಈ ಮೊದಲು ನಾಲ್ಕು ಕ್ಯಾಮರಾ ಅಳವಡಿಸಿದ್ದರು. ಈಗ ಮುಂಡರಗಿಯಿಂದ ಮತ್ತೆ ಮೂರು ಟ್ರ್ಯಾಪ್‌ ಕ್ಯಾಮರಾ ತರಿಸಿ ಅಳವಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ 70ಕ್ಕೂ ಹೆಚ್ಚು ಸಿಬ್ಬಂದಿ:

ಚಿರತೆಯ ಸೆರೆಗಾಗಿ ಹಾವೇರಿ, ದಾಂಡೇಲಿಯ ಕಾಳಿ ಕ್ಯಾಂಪ್‌, ಕಲಘಟಗಿ, ಧಾರವಾಡ, ಗದಗ ವಿಭಾಗದ ಅರಣ್ಯ ಇಲಾಖೆಯ ಸುಮಾರು 70ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಜತೆಗೆ ವನ್ಯಜೀವಿ ಸಂರಕ್ಷಣಾ ಎನ್‌ಜಿಒಗಳು, ಅರವಳಿಕೆ ತಜ್ಞರು, ಪಶು ವೈದ್ಯರು, ಹಾವು ಹಿಡಿಯುವವರು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next