Advertisement

ಆರೇಳು ಶಾಸಕರು ಬಿಜೆಪಿಗೆ ಸೇರೋದು ಖಚಿತ

06:00 AM Dec 04, 2018 | Team Udayavani |

ಬೆಳಗಾವಿ: ಬಿಜೆಪಿಗೆ “ಆಪರೇಷನ್‌ ಕಮಲ’ ಹೊಸದೇನಲ್ಲ. ಬಿಜೆಪಿಯವರು ಹೇಳುವಂತೆ 25 ಜನ ಅಲ್ಲ, ಕಾಂಗ್ರೆಸ್‌ನ ಆರರಿಂದ ಏಳು ಜನ ಮಾತ್ರ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಆದರೆ, ಇದರಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವ ರೀತಿಯ ಅಪಾಯವೂ ಆಗಲ್ಲ.
ನಾನಂತೂ ಈ ಶಾಸಕರ ಪಟ್ಟಿಯಲ್ಲಿ ಇಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ನಡೆದಿರುವ ರಾಜಕೀಯ ಬೆಳವಣಿಗೆ ಗಮನಿಸಿದರೆ ಬಿಜೆಪಿ ನಾಯಕರು ಹೇಳುವಂತೆ 25 ಶಾಸಕರಂತೂ ಬಿಜೆಪಿಗೆ ಸೇರ್ಪಡೆಯಾಗುತ್ತಿಲ್ಲ. ಕಳೆದ ಆರು ತಿಂಗಳಿಂದ ಬಿಜೆಪಿ ನಾಯಕರು ಆಮಿಷ ಒಡ್ಡುತ್ತಲೇ ಇದ್ದಾರೆ. ಆಗಾಗ ಆಡಿಯೋ ಹಾಗೂ ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತಲೇ ಇದ್ದಾರೆ. ಆದರೂ, ಇದು
ಯಶಸ್ವಿಯಾಗಿಲ್ಲ. ಈ ಬಾರಿಯೂ ಬಿಜೆಪಿ ಪ್ರಯತ್ನ ವಿಫಲವಾಗಲಿದೆ. ಹೀಗಾಗಿ, ಈ ರೀತಿಯ ಆಪರೇಷನ್‌ ಕಮಲಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯ ಇಲ್ಲ ಎಂದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಅಧಿವೇಶನಕ್ಕೆ ಮುನ್ನ ಸಚಿವ ಸಂಪುಟ ವಿಸ್ತರಣೆ ಆಗಬಹುದು. ವಿಸ್ತರಣೆ ನಂತರ ಭಿನ್ನಮತ ಎದ್ದರೂ ಅದರಿಂದ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಸಂಪುಟ ವಿಸ್ತರಣೆ ಬೇಗ ಮಾಡಿದರೆ ಒಳ್ಳೆಯದು. ಆದರೆ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಶಾಸಕನಾಗಿಯೇ ನಾನು ಕೆಲ ಸಚಿವರಿಗಿಂತ ಹೆಚ್ಚು ಪ್ರಭಾವ ಶಾಲಿಯಾಗಿದ್ದೇನೆ. ಕ್ಷೇತ್ರಕ್ಕೆ ಬೇಕಾದ ಕೆಲಸಗಳು ಆಗುತ್ತಿವೆ. ಹೀಗಾಗಿ, ಸಚಿವ ಸ್ಥಾನವೇ
ಬೇಕು ಎಂಬುದು ನನ್ನ ಬೇಡಿಕೆ ಅಲ್ಲ. ಸಮ್ಮಿಶ್ರ ಸರ್ಕಾರ ಎಂದ ಮೇಲೆ ಅಸಮಾಧಾನ ಹಾಗೂ ಅತೃಪ್ತಿ ಇರುತ್ತದೆ. ಇದು ಸಹಜ. ಇದೇ ಕಾರಣದಿಂದ ಕೆಲವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸಿರಬಹುದು. ಇದರ ಮಾಹಿತಿ ನನಗೆ ಇಲ್ಲ. ಮೇಲಾಗಿ ನಾನು ದೂರು ನೀಡಿದವರ ಪರ ಇಲ್ಲ. ನಾನು ಕಾಂಗ್ರೆಸ್ಸಿಗ ಎಂದರು.

ಗೋವಾದಲ್ಲಿ ಮದುವೆ ಮುಗಿಸಿಕೊಂಡು ಬರುವಾಗ ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಸಾತವೇರಿ ರೆಸಾರ್ಟ್‌ಗೆ ಭೇಟಿ ನೀಡಿದ್ದೇನೆ ಅಷ್ಟೆ. ಅಲ್ಲಿಗೆ ಭೇಟಿ ನೀಡಿದ್ದು, ರೆಸಾರ್ಟ್‌ ರಾಜಕೀಯ ಮಾಡಲು ಅಲ್ಲ. ಮುಂದೆ ಪ್ರವಾಸಕ್ಕಾಗಿ ಬೇಕಾಗಬಹುದು ಎಂದು ನೋಡಿದ್ದೇನೆ ಅಷ್ಟೆ. 
● ಸತೀಶ ಜಾರಕಿಹೊಳಿ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next