ವಿಧಾನಸಭೆ : ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಧಾನ ಮಂಡಲ ಕಲಾಪಕ್ಕೆ ಶಾಸಕರ ಗೈರು ಹಾಜರಿ ತೀವ್ರವಾಗಿ ಕಾಡಿತ್ತು. ಆದರೆ ಬುಧವಾರ ಸಚಿವರ ಪಡೆಯೇ ಕಲಾಪಕ್ಕೆ ಚಕ್ಕರ್ ಹೊಡೆದಿದ್ದು, ಸ್ವತಃ ಕಾಂಗ್ರೆಸ್ ಸದಸ್ಯರು, ಪ್ರತಿಪಕ್ಷಗಳು, ಮತ್ತು ಸ್ಪೀಕರ್ ಅವರ ಆಕ್ರೋಶಕ್ಕೆ ಕಾರಣವಾಯಿತು.
ಮಧ್ಯಾಹ್ನ ನಂತರದ ಕಲಾಪ ಆರಂಭಗೊಳ್ಳುವುದು ಸದಸ್ಯರ ಕೋರಂ ಕೊರತೆಯಿಂದ ವಿಳಂಭವಾಯಿತು. ಬೇಡಿಕೆಗಳ ಮೇಲಿನ ಚರ್ಚೆ ಆರಂಭಿಸಿದ ಬಿಜೆಪಿ ಸದಸ್ಯ ಜೀವರಾಜ್ ಸಚಿವರ ಹಾಜರಾತಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯುದ್ಧ ಆಡಲು ಶತ್ರು ಪಡೆ ಹೆಚ್ಚು ಬಲಶಾಲಿಯಾಗಿದ್ದರೆ ಮಜಾ ಬರುತ್ತದೆ. ಆದರೆ ಇಲ್ಲಿ ಶತ್ರು ಪಡೆಯೇ ಇಲ್ಲದೇ ಯಾರೊಂದಿಗೆ ಯುದ್ಧ ಮಾಡುವುದು ಎಂದು ವ್ಯಂಗ್ಯವಾಡಿದರು. ಇವರ ಮಾತಿಗೆ ಬೆಂಬಲಿಸಿದ ಬಿಜೆಪಿ ಸದಸ್ಯರಾದ ಲಕ್ಷ್ಮಣ ಸವದಿ, ಸಿ.ಟಿ.ರವಿ, ಸಭಾಧ್ಯಕ್ಷರಿಗೆ ಸಚಿವರು ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಹಾಜರಿರುವಂತೆ ನೋಡಿಕೊಳ್ಳಲು ಮನವಿ ಮಾಡಿಕೊಂಡರು.
ಕೂಡಲೇ ಸದನದಲ್ಲಿ ಹಾಜರು ಇರಲೇಬೇಕಾದ ಸಚಿವರ ಪಟ್ಟಿಯನ್ನು ಓದಿದ ಸ್ಪೀಕರ್ ಕೋಳಿವಾಡ ಅವರು, ಸದ್ಯಕ್ಕೆ ಕಡ್ಡಾಯವಾಗಿ ಸಚಿವರಾದ ಎಚ್.ಸಿ.ಮಹಾದೇವಪ್ಪ, ಡಿ.ಕೆ.ಶಿವಕುಮಾರ್, ಎಸ್.ಎಸ್. ಮಲ್ಲಿಕಾರ್ಜುನ್, ಎ.ಮಂಜು,ಶರಣಪ್ರಕಾಶ ಪಾಟೀಲ್ ಹಾಜರಿರಬೇಕಿತ್ತು. ಈ ಪೈಕಿ ಕೃಷ್ಣ ಭೈರೇಗೌಡ ಒಬ್ಬರೇ ಹಾಜರಿದ್ದಾರೆ. ಇನ್ನು ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್,ತನ್ವೀರ್ ಸೇಠ, ಬಸವರಾಜ ರಾಯರಡ್ಡಿ,ರಾಮಲಿಂಗಾರೆಡ್ಡಿ ಮತ್ತು ವಿನಯ್ ಕುಲಕರ್ಣಿ ಕೂಡ ಸಾಮಾನ್ಯ ಹಾಜರಾತಿ ಪಟ್ಟಿಯಲ್ಲಿದ್ದು, ಇವರು ಕೂಡ ಗೈರು ಹಾಜರಾಗಿದ್ದಾರೆ. ಇದು ನನಗೆ ತುಂಬಾ ವಿಷಾದ ಎನಿಸುತ್ತದೆ. ಸದನ ಕಲಾಪದ ಸಮಿತಿ ಸಭೆಯಲ್ಲಿ ಎಲ್ಲರೂ ಹಾಜರಿರಬೇಕು ಎಂದು ಹೇಳಿದ್ದರೂ ಈ ರೀತಿ ಗೈರು ಹಾಜರಾಗುತ್ತಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.
ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಈ ರೀತಿಯಾದರೆ ಸರ್ಕಾರದಿಂದ ಏನು ಉತ್ತರ ನಿರೀಕ್ಷೆ ಮಾಡಲು ಸಾಧ್ಯ ? ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಇದಕ್ಕೆ ಬೆಂಬಲಿಸಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಕಲಾಪವನ್ನು ನಾಳೆಗೆ ಮುಂದೂಡಿ ಬಿಡಿ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಸಚಿವರ ಸಾಲಿನಲ್ಲಿಯೇ ಕುಳಿತಿದ್ದ ಕಾಂಗ್ರೆಸ್ ಸದಸ್ಯ ಅಪ್ಪಾಜಿ ನಾಡಗೌಡ ಎದ್ದು ನಿಂತು, ಇದು ಹೀಗಾದ್ರೆ ಬಗೆ ಹರಿಯಲ್ಲ, ಮುಖ್ಯ ಸಚೇತಕರೇ ಗೈರು ಹಾಜರಿ ಇರುವ ಸಚಿವರಿಗೆ ನೋಟೀಸ್ ಕೊಡಿ ಎಂದು ಆಗ್ರಹಿಸಿದರು. ಕೊನೆಗೆ ಹಾಜರಿದ್ದ ಕೆಲವು ಸಚಿವರು ಸಮಜಾಯಿಷಿ ಕೊಟ್ಟು ಕಲಾಪ ಮುಂದುವರೆಸಿದರು.