Advertisement

ಗೋಮಾಳ ಒತ್ತುವರಿ ಸಕ್ರಮ: ಜಯಚಂದ್ರ

03:50 AM Jan 19, 2017 | |

ಬೆಂಗಳೂರು: ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ಸಕ್ರಮಗೊಳಿಸುವ ನಿರ್ಣಯ ಕೈಗೊಂಡ ಬೆನ್ನ ಹಿಂದೆಯೇ, ಸರ್ಕಾರಿ ಗೋಮಾಳ ಜಮೀನು ಸಾಗುವಳಿ ಸಕ್ರಮಗೊಳಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

Advertisement

ಬಗರ್‌ ಹುಕುಂ ಸಾಗುವಳಿಯಡಿ ಗೋಮಾಳ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಜಮೀನು ಭಾಗ್ಯ ದೊರಕಿಸಿಕೊಡುವ ಉದ್ದೇಶ ಸರ್ಕಾರದ್ದಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ಕುಟುಂಬಕ್ಕೆ 4.38ಎಕರೆಗೆ ಸೀಮಿತಗೊಳಿಸಿ ಸಕ್ರಮಗೊಳಿಸಲು ಭೂ ಮಂಜೂರಾತಿ ಕಂದಾಯ ನಿಯಮಾವಳಿಗೆ ತಿದ್ದುಪಡಿ ತರಲು ಉದ್ದೇಶಿಸಿದೆ.

ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಬಗರ್‌ಹುಕುಂ ಸಾಗುವಳಿ ಜಮೀನು ಸಕ್ರಮಕ್ಕೆ ನಮೂನೆ-50 ಹಾಗೂ 53 ರಡಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಗೋಮಾಳ ಜಮೀನು ಸಕ್ರಮಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ  ಈಗಾಗಲೇ ಇತ್ಯರ್ಥಕ್ಕೆ ಬಾಕಿ ಇರುವ 3.45 ಲಕ್ಷ ಅರ್ಜಿಗಳ ಪೈಕಿ ಸರ್ಕಾರಿ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರಿಗೂ ಸಾಗುವಳಿ ಚೀಟಿ ದೊರೆಯಲಿದೆ. ಆದರೆ, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ, ಈಗಾಗಲೇ ಸಲ್ಲಿಸಿರುವ ಅರ್ಜಿಗಳಿಗೆ ಮಾತ್ರ ಇದು ಅನ್ವಯ ಎಂದು ತಿಳಿಸಿದರು.

ಬಗರ್‌ಹುಕುಂ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದವರ ಪೈಕಿ ಸರ್ಕಾರಿ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದವರೂ ಇದ್ದರು. ಆದರೆ,  ಈಗಿರುವ ನಿಯಮಾವಳಿ ಪ್ರಕಾರ ಗೋಮಾಳ ಜಮೀನು ಮಂಜೂರಾತಿ ಮಾಡಲು ಬರುವುದಿಲ್ಲ. ಹೀಗಾಗಿ, ನಿಯಮಾವಳಿಗೆ ತಿದ್ದುಪಡಿ ತಂದು ಒಂದು ಬಾರಿಗೆ ಗೋಮಾಳ ಜಮೀನು ಸಾಗುವಳಿ ಸಹ ಸಕ್ರಮ ಮಾಡುವ ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಸರ್ಕಾರಿ ಗೋಮಾಳ ಜಮೀನಿನಲ್ಲಿ ಸಾಗುವಳಿ ಸಕ್ರಮಕ್ಕೆ ಪ್ರತಿ ಕುಟುಂಬ 4.38 ಎಕರೆ ಮಾತ್ರ ಅರ್ಹತೆ ಹೊಂದಿರುತ್ತದೆ. ಅದಕ್ಕಿಂತ ಹೆಚ್ಚು ಸಾಗುವಳಿ ಇದ್ದರೆ ಸಕ್ರಮವಾಗದು. 4.38 ಎಕರೆಗೆ ಮಾತ್ರ ಸೀಮಿತಗೊಳಿಸಲಾಗುವುದು. ಅದಕ್ಕೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. 
 
ಏನಿದು ಗೋಮಾಳ ಜಮೀನು :
1978ಕ್ಕೆ ಪೂರ್ವದಲ್ಲಿ ಸರ್ಕಾರಿ ಕಂದಾಯ ಭೂಮಿಯಲ್ಲಿ  ಅನಧಿಕೃತವಾಗಿ ಕೃಷಿ ಚಟುವಟಿಕೆ ಮಾಡುತ್ತಿದ್ದವರಿಗೆ ಮಂಜೂರಾತಿ ನೀಡಲು ಬಗರ್‌ಹುಕುಂ ಸಾಗುವಳಿ ಕಾರ್ಯಕ್ರಮಡಿ 1989ರಲ್ಲಿ ನಿಯಮ 50 ಹಾಗೂ 1999ರಲ್ಲಿ ನಿಯಮ 53 ರಡಿ ಅರ್ಜಿ ಸ್ವೀಕಾರಕ್ಕೆ ತೀರ್ಮಾನಿಸಲಾಗಿತ್ತು. ಅದರಂತೆ 3.40ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ.  ಈ ನಡುವೆ, ಬಗರ್‌ಹುಕುಂ ಸಾಗುವಳಿ ಇತ್ಯರ್ಥಕ್ಕೆ ಬಂದ ಅರ್ಜಿಗಳಲ್ಲಿ ಸರ್ಕಾರಿ ಗೋಮಾಳ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ಅರ್ಜಿಗಳು ಸೇರಿದ್ದವು. ಈಗಿರುವ ನಿಯಮ ಪ್ರಕಾರ ಸರ್ಕಾರಿ ಗೋಮಾಳ ಮಂಜೂರು ಮಾಡಲು ಸಾಧ್ಯವಿಲ್ಲದ ಕಾರಣ ನಿಯಮಾವಳಿಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. 

ಅಲ್ಲದೆ, ರಾಜ್ಯದ ಅಂಗನವಾಡಿಗಳಲ್ಲಿ ಆರೈಕೆ ಪಡೆಯುತ್ತಿರುವ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು , ಸಹಾಯಕಿಯರಿಗೆ ವೈದ್ಯಕೀಯ ಕಿಟ್‌ ಖರೀದಿಸಲು 6.42 ಕೋಟಿ ರೂ., ಸಮವಸ್ತ್ರ ಖರೀದಿಗಾಗಿ 7.54 ಕೋಟಿ ರೂ. ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ. 

Advertisement

188 ಕೈದಿಗಳ ಬಿಡುಗಡೆ:
ಸನ್ನಡತೆ ಆಧಾರದಲ್ಲಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 188 ಕೈದಿಗಳನ್ನು ಬಿಡುಗಡೆ ಮಾಡುವ ಸಂಬಂಧ ರಾಜ್ಯಪಾಲರಿಗೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಧಾರವಾಡ ಜೈಲುಗಳಲ್ಲಿ 14 ವರ್ಷದ ಶಿಕ್ಷೆಗೊಳಗಾಗಿ 10 ವರ್ಷ ಪೂರೈಸಿರುವ 149 ಕೈದಿಗಳು ಹಾಗೂ ಇತರ ಕಾರಾಗೃಹಗಳಲ್ಲಿ 10 ವರ್ಷದ ಶಿಕ್ಷೆಗೊಳಗಾಗಿ 7 ವರ್ಷ ಪೂರೈಸಿರುವ 39 ಕೈದಿಗಳನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗುತ್ತಿರುವ 188 ಕೈದಿಗಳ ಪೈಕಿ 10 ಮಹಿಳೆಯರು ಇದ್ದಾರೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next