Advertisement

ಎಡ-ಬಲವೆಂದು ಕಚ್ಚಾಡಬೇಡಿ

03:29 PM Apr 08, 2017 | |

ಕಲಬುರಗಿ: ಶೋಷಿತರ ಮನಸ್ಸುಗಳಲ್ಲಿ ಮಡುಗಟ್ಟಿರುವ ಜಾತಿ ವ್ಯವಸ್ಥೆ ನಿರ್ಮೂಲನೆಗೆ ನಾವು ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಶೋಷಿತರ ಮಧ್ಯೆ ಇನ್ನಷ್ಟು ಕಂದಕ ಬೆಳೆಯುತ್ತದೆ. ಆದ್ದರಿಂದ ಎಚ್ಚೆತ್ತುಕೊಳ್ಳಬೇಕು ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ಉಪ ನಾಯಕ ಕೆ.ಬಿ. ಶಾಣಪ್ಪ ಹೇಳಿದರು. 

Advertisement

ಗುವಿವಿಯಲ್ಲಿ ಶುಕ್ರವಾರ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಡಾ| ಬಾಬು ಜಗಜೀವನರಾಮ ಅಧ್ಯಯನ ಸಂಶೋಧನಾ ಹಾಗೂ ವಿಸ್ತರಣಾ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ಹಸಿರುಕ್ರಾಂತಿಯ ಹರಿಕಾರ ಡಾ| ಬಾಬು ಜಗಜೀವನರಾಮ ಅವರ 110ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಶೋಷಿತ ಸಮುದಾಯದವರು ಎಡ, ಬಲ ಎಂದು ಕಚ್ಚಾಡುವುದನ್ನು ಬಿಡಬೇಕು. ಎಲ್ಲರೂ ಒಂದಾಗಿ ಒಟ್ಟಾಗಿರಬೇಕು. ಹುಟ್ಟು, ಸಾವು ಪ್ರತಿಯೊಬ್ಬರ ಜೀವನದಲ್ಲಿ ಇರುವಂತದ್ದೆ. ಆ ಹುಟ್ಟು ಸಾವಿನ ನಡುವೆ ಏನಾದರೂ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಸ್ವತಂತ್ರ ಭಾರತದಲ್ಲಿ ಜಾತಿ ವ್ಯವಸ್ಥೆ ಇರುವುದಾದಲ್ಲಿ ಅಂತಹ ಸ್ವಾತಂತ್ರ್ಯ ನನಗೆ ಬೇಡ ಎಂದು ಡಾ| ಬಾಬಾಸಾಹೇಬ ಅಂಬೇಡ್ಕರ್‌ ಹೇಳಿದ್ದನ್ನು ಉಲ್ಲೇಖೀಸಿದ ಅವರು, ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಮೂಲಕ ನಿಜವಾದ ಸ್ವಾತಂತ್ರ್ಯವನ್ನು ದೇಶದಲ್ಲಿ ತರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಜಾತಿ ವ್ಯವಸ್ಥೆ ನಿರ್ಮೂಲನೆಗಾಗಿ 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಸೇರಿದಂತೆ ಅನೇಕ ಶರಣರು ಸಾಮಾಜಿಕ ಕ್ರಾಂತಿ ಮಾಡಿದರು. ಅದಕ್ಕೆ ಅನುಭವ ಮಂಟಪವು ಬುನಾದಿಯಾಗಿತ್ತು. ಮಾಳಿಗೆ ಮಾರಯ್ಯ, ಉರಿಲಿಂಗ ಪೆದ್ದಿ ಮುಂತಾದ ಶರಣರು ದೇಶದ ಬೇರೆ, ಬೇರೆ ರಾಜ್ಯಗಳಿಂದ ಅನುಭವ ಮಂಟಪಕ್ಕೆ ಬಂದರು.

Advertisement

ಮಾಳಿಗೆ ಮಾರಯ್ಯ ಕಾಶ್ಮೀರದಿಂದ, ಉರಿಲಿಂಗ ಪೆದ್ದಿ ಮಹಾರಾಷ್ಟ್ರದಿಂದ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಬಂದರು ಎಂದು ಹೇಳಲಾಗುತ್ತಿದೆ. ಈ ಕುರಿತು ಸಂಶೋಧನೆ ಕೈಗೊಂಡು, 12ನೇ ಶತಮಾನದ ಸಮಗ್ರ ಇತಿಹಾಸ  ದಾಖಲಿಸಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಅಧ್ಯಯನ ಪೀಠವು ಸಂಶೋಧನೆ ಕೈಗೊಳ್ಳಬೇಕೆಂದು ಹೇಳಿದರು. 

ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ| ಜಿ.ಬಿ. ನಂದನ್‌ ಅವರು ಡಾ| ಬಾಬು ಜಗಜೀವನರಾಮ್‌ ಅವರ ಜೀವನ ಮತ್ತು ಧ್ಯೇಯ, ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕುಲಸಚಿವರಾದ ಪ್ರೊ| ದಯಾನಂದ ಅಗಸರ್‌, ಡಾ| ಸಿ.ಎಸ್‌. ಪಾಟೀಲ, ಸಿಂಡಿಕೇಟ್‌ ಸದಸ್ಯ ಈಶ್ವರ ಇಂಗನ್‌, ವಿದ್ಯಾ ವಿಷಯಕ ಪರಿಷತ್‌ ಸದಸ್ಯೆ ಶೋಭಾ ಪಾಟೀಲ, ವಿತ್ತಾಧಿಕಾರಿ ಪ್ರೊ| ರಾಜನಾಳಕರ್‌ ಹಾಜರಿದ್ದರು. 

ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ್‌ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ಡಾ| ದೇವಿದಾಸ ಮಾಲೆ ಸ್ವಾಗತಿಸಿದರು. ಡಾ| ಕಟ್ಟಿಮನಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next