Advertisement

ಎಲ್ಲೆಂದರಲ್ಲಿ ಎಲೆ ಬೆಂಕಿಯ ಹೊಗೆ

12:22 PM Mar 06, 2018 | Team Udayavani |

ಬೆಂಗಳೂರು: ದಿಢೀರ್‌ ಎದುರಾಗುವ ದಟ್ಟ ಹೊಗೆ, ಮೂಗಿಗೆ ಬಡಿಯುವ ಕಮಟು ವಾಸನೆ, ಕ್ಷಣಾರ್ಧದಲ್ಲಿಯೇ ಶುರುವಾಗುವ ಕಣ್ಣುರಿ, ತುಸು ದೂರ ಕ್ರಮಿಸಿದ ಮೇಲಷ್ಟೇ ನಿರಾಳ… ರಾಜಧಾನಿಯ ಕೇಂದ್ರ ಭಾಗ ಸೇರಿದಂತೆ ಎಲ್ಲ ಕಡೆಗಳಲ್ಲಿ ಬೆಳಗ್ಗೆ ಒಣ ಕಸ ಹಾಗೂ ಎಲೆಗಳಿಗೆ ಬೆಂಕಿ ಹಾಕುತ್ತಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳಿವು.

Advertisement

ಎಲ್ಲೆಂದರಲ್ಲಿ ಎಲೆಗಳಿಗೆ ಬೆಂಕಿ ಹಚ್ಚುತ್ತಿರುವುದರಿಂದ ದಟ್ಟ ಹೊಗೆ ಕಾಣಿಸಿಕೊಂಡು ಸಮಸ್ಯೆ ಸೃಷ್ಟಿಯಾಗುತ್ತಿದ್ದು, ದಟ್ಟ ಹೊಗೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬೇಸಿಗೆ ಆರಂಭವಾಗುತ್ತಲೇ ಮರ-ಗಿಡಗಳಿಂದ ಒಣಗಿದ ಎಲೆಗಳು ಉದುರುವ ಪ್ರಮಾಣ ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ಉದ್ಯಾನ, ರಸ್ತೆಗಳು, ಬಡಾವಣೆಗಳು, ಖಾಲಿ ನಿವೇಶನ ಹೀಗೆ ಎಲ್ಲ ಕಡೆ ಎಲೆಗಳನ್ನು ಸಂಗ್ರಹಿಸಿ ಬೆಂಕಿ ಹಚ್ಚುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಇದರಿಂದ ಎಲ್ಲೆಡೆ ಹೊಗೆ ಹರಡಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು, ಮರ-ಗಿಡಗಳಿಂದ ಉದುರುವ ಎಲೆಗಳನ್ನು ಸಂಗ್ರಹಿಸಿ ಗೊಬ್ಬರವಾಗಿ ಪರಿವರ್ತಿಸಲು ಮುಂದಾಗಿದ್ದಾರೆ.

ನಗರದ ಪ್ರಮುಖ ಉದ್ಯಾನಗಳು, ರಕ್ಷಣಾ ಭೂಮಿ, ಬಡಾವಣೆ, ಖಾಸಗಿ ಆಸ್ತಿಗಳು ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಮರ-ಗಿಡಗಳಿರುವ ಕಡೆಗಳಲ್ಲಿ ಭಾರಿ ಪ್ರಮಾಣದಲ್ಲಿ ಎಲೆಗಳು ಉದುರುತ್ತವೆ. ಹೀಗೆ ಉದುರಿದ ಎಲೆಗಳನ್ನು ಅಲ್ಲಿನ ಸಿಬ್ಬಂದಿ ಒಟ್ಟುಗೂಡಿಸಿ ಒಂದೆಡೆ ಗುಡ್ಡೆ ಹಾಕುತ್ತಾರೆ. ಆದರೆ, ಗಾಳಿಗೆ ಮತ್ತೆ ಎಲೆಗಳು ಹರಡಿಕೊಳ್ಳುತ್ತಿರುವುದರಿಂದ ಸಿಬ್ಬಂದಿ ಎಲೆಗಳಿಗೆ ಬೆಂಕಿ ಹಾಕುತ್ತಿದ್ದಾರೆ. ಇದರಿಂದ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದೆ. 

ಹಾಗಾಗಿ ವಿಶೇಷ ಅಭಿಯಾನದ ಮೂಲಕ ಎಲೆಗಳಿಗೆ ಬೆಂಕಿ ಹಾಕುವುದನ್ನು ತಡೆಯಲು ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದು, ಅದರಂತೆ ಉದ್ಯಾನ, ರಕ್ಷಣಾ ಭೂಮಿ, ಬಡಾವಣೆ ಹಾಗೂ ಖಾಸಗಿ ಸ್ಥಳಗಳಲ್ಲಿ ಹೀಗೆ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ಎಲೆಗಳನ್ನು ಅಲ್ಲಿನವರಿಂದ ಪಡೆಯಲಾಗುತ್ತದೆ. ಜತೆಗೆ, ನಗರದ ಪ್ರಮುಖ ರಸ್ತೆಗಳಲ್ಲಿನ ಎಲೆಗಳನ್ನು ಪೌರಕಾರ್ಮಿಕರ ಮೂಲಕ ಸಂಗ್ರಹಿಸಿ ತ್ಯಾಜ್ಯ ಸಂಸ್ಕರಣೆ ಘಟಕಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ.

Advertisement

ಎಲೆ ವಿಲೇವಾರಿಗಿಲ್ಲ ಗಮನ: ರಸ್ತೆ ಬದಿಯಲ್ಲಿರುವ ಮರಗಳಿಂದ ಉದುರುತ್ತಿರುವ ಎಲೆಗಳನ್ನು ಸಮರ್ಪಕ ವಿಲೇವಾರಿಗೆ ಪಾಲಿಕೆ ಸಿಬ್ಬಂದಿ ಮುಂದಾಗುತ್ತಿಲ್ಲ. ಪರಿಣಾಮ ಒಣ ಎಲೆಗಳ ಮೇಲೆ ವಾಹನಗಳು ಸಂಚರಿಸಿ ಎಲೆಗಳು ಧೂಳಾಗಿ ಪರಿವರ್ತನೆಯಾಗುತ್ತಿರುವುದು ಕಂಡುಬಂದಿದೆ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಎಲೆಗಳ ಸಂಗ್ರಹಕ್ಕೆ ವಿಶೇಷ ವಾಹನ: ಈಗಾಗಲೇ ಪಾಲಿಕೆಯ ಎಲ್ಲ ವಲಯಗಳ ಅಧಿಕಾರಿಗಳಿಗೆ ಮಾಹಿತಿ ರವಾನಿಸಿರುವ ಹಿರಿಯ ಅಧಿಕಾರಿಗಳು, ಆಯಾ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಲೆಗಳು ಸಂಗ್ರಹವಾಗುವ ಸ್ಥಳಗಳು ಹಾಗೂ ಬೆಂಕಿ ಹಚ್ಚುತ್ತಿರುವ ಸ್ಥಳಗಳನ್ನು ಗುರುತಿಸಿ ವರದಿ ನೀಡುವಂತೆ ತಿಳಿಸಿದ್ದಾರೆ. ಅದರಂತೆ ಎಲ್ಲ ವಲಯಗಳಲ್ಲಿ ಸಂಗ್ರಹವಾಗುವ ಎಲೆಗಳನ್ನು ಪಡೆದು ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರವಾನಿಸಲು ಪಾಲಿಕೆಯಿಂದ ವಿಶೇಷ ವಾಹನವೊಂದನ್ನು ಕಾಯ್ದಿರಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. 

ಗೊಬ್ಬರವಾಗಿ ಪರಿವರ್ತನೆ: ಪಾಲಿಕೆಯ ಎಂಟು ವಲಯಗಳಲ್ಲಿ ಸಂಗ್ರಹಿಸಲು ಉದ್ದೇಶಿಸಿರುವ ಎಲೆಗಳನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಲು ಬೊಮ್ಮನಹಳ್ಳಿ ವಲಯದ ಕೆಸಿಡಿಸಿ ಘಟಕಕ್ಕೆ ರವಾನಿಸಲು ತೀರ್ಮಾನಿಸಲಾಗಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ನಾಗರಿಕ ಕ್ಷೇಮಾಭಿವೃದ್ಧಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿರುವ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು, ಒಣ ಕಸಕ್ಕೆ ಬೆಂಕಿ ಹಚ್ಚದಂತೆ ಹಾಗೂ ಸಂಗ್ರಹಿಸಿದ ಎಲೆಗಳು ಹಾಗೂ ಒಣ ಕಸವನ್ನು ಸಮೀಪದ ಉದ್ಯಾನಗಳು ಅಥವಾ ಪೌರಕಾರ್ಮಿಕರಿಗೆ ನೀಡುವಂತೆ ಮನವಿ ಮಾಡಿದ್ದಾರೆ. 

ನಗರದಲ್ಲಿ ಎಲೆಗಳಿಗೆ ಹಾಗೂ ಒಣ ಕಸಕ್ಕೆ ಬೆಂಕಿ ಹಾಕುವ ಪ್ರಕರಣಗಳು ಹೆಚ್ಚುತ್ತಿದ್ದು, ಹಲವು ಕಡೆಗಳಲ್ಲಿ ಎಲೆಗಳನ್ನು ಒಂದು ಕಡೆ ಸಂಗ್ರಹಿಸಿದರೂ, ಗಾಳಿಗೆ ತೂರಿ ಹೋಗುವುದರಿಂದ ಬೆಂಕಿ ಹಾಕುತ್ತಿದ್ದಾರೆ ಎಂದು ಅಂಶ ತಿಳಿದುಬಂದಿದೆ. ಹಾಗಾಗಿ ಪಾಲಿಕೆಯಿಂದ ವಿಶೇಷ ಅಭಿಯಾನದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ಎಲೆಗಳನ್ನು ಪೌರಕಾರ್ಮಿಕರ ಮೂಲಕ ಪಡೆಯಲಾಗುವುದು. ಅದಕ್ಕಾಗಿಯೇ ಎಲೆಗಳನ್ನು ಸಂಗ್ರಹಿಸಲು ವಿಶೇಷ ವಾಹನ ನಿಯೋಜಿಸಲಾಗುತ್ತಿದ್ದು, ಸಾರ್ವಜನಿಕರಿಗೂ ಸಹ ಎಲೆಗಳಿಗೆ ಬೆಂಕಿ ಹಚ್ಚದಂತೆ ಮನವಿ ಮಾಡಲಾಗಿದೆ. 
-ಸಫ್ರಾಜ್‌ ಖಾನ್‌, ಜಂಟಿ ಆಯುಕ್ತ, ಘನತ್ಯಾಜ್ಯ ಹಾಗೂ ಆರೋಗ್ಯ ವಿಭಾಗ

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next