Advertisement

ಎಲೆ ಬಿಚ್ಚಾಲಿಯಲಿ ಶುರುವಾಯ್ತು ವೀಳ್ಯದೆಲೆಯ ಹಂಗಾಮ

04:00 AM Oct 29, 2018 | |

ವೀಳ್ಯದೆಲೆ ಬೆಳೆಯುವ ಮೂಲಕ ಪ್ರಸಿದ್ಧಿ ಪಡೆದಿದ್ದ ಗ್ರಾಮವೊಂದು ನೆರೆ ಹೊಡೆತಕ್ಕೆ ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ತುಂಗಭದ್ರಾ ನದಿ ಪಾತ್ರದ 500ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿದ್ದ ಎಲೆ ತೋಟ ನಾಮವಶೇಷವಾಗಿ ಹೋಗಿತ್ತು. ಅದಾಗಿ ಎರಡು ದಶಕ ಕಳೆದರೂ ಬಾರದ ಬೆಳೆ ಈಚೆಗೆ ಮರುಜೀವ 

Advertisement

ರಾಯಚೂರು ಜಿಲ್ಲೆ ಹೇಳಿ ಕೇಳಿ ನೇಸರ ನಾಡು. ಉರಿ ಬಿಸಿಲಿಗೆ ಹೆಸರಾದ ಈ ಭಾಗದಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚಾಗಿ ಕಾಣಸಿಗುವುದಿಲ್ಲ. ಆದರೆ, ಈ ಮಾತಿಗೆ ಅಪವಾದ ಎನ್ನುವಂತೆ, ರಾಯಚೂರು ತಾಲೂಕಿನ ಒಂದು ಕಾಲದಲ್ಲಿ ಎಲೆಬಿಚ್ಚಾಲಿ ಗ್ರಾಮದ ರೈತರು ವೀಳ್ಯದೆಲೆ ಬೆಳೆಯುವ ಮೂಲಕ ದೊಡ್ಡಮಟ್ಟದ ಪ್ರಸಿದ್ಧಿ ಪಡೆದಿದ್ದರು. ಇಲ್ಲಿ ಬೆಳೆಯುವ ಎಲೆಗಳಿಂದಲೇ ಈ ಊರಿಗೆ ಆ ಹೆಸರು ಬಂತು ಎನ್ನುವ ಪ್ರತೀತಿ ಇದೆ. 

ತುಂಗಭದ್ರಾ ನದಿ ಪಾತ್ರದಲ್ಲಿರುವ ಈ ಊರು 90ರ ದಶಕಕ್ಕೂ ಮುನ್ನ ಸಮೃದ್ಧಿ ಹೊಂದಿತ್ತು. ಈ ಊರಲ್ಲಿ ಕೃಷಿ ಎಂದರೆ ಅದು ವೀಳ್ಯದೆಲೆ ಬೆಳೆಯುವ ಕಾಯಕ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿಯಾಗಿತ್ತು. ಗ್ರಾಮಸ್ಥರಿಗೆ ಜಗಲಿ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯಲು ಕೂಡ ಪುರುಸೊತ್ತಿರಲಿಲ್ಲವಂತೆ. ಅಷ್ಟೊಂದು ಕೆಲಸವಿರುತ್ತಂತೆ. ನಂತರ ಬಂದ ನೆರೆ ಹೊಡೆತಕ್ಕೆ ಗ್ರಾಮದ ಚಿತ್ರಣವೇ ಬದಲಾಗಿ ಹೋಯಿತು.

ಬಹುತೇಕ ಮಂದಿ ನದಿಪಾತ್ರದಲ್ಲೇ ತೋಟ ಮಾಡಿಕೊಂಡಿದ್ದರಿಂದ ನೆರೆ ಬಂದಾಗ ತೋಟಗಳೆಲ್ಲ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದವು. ಒಮ್ಮೆ ಬೆಳೆ ಹಾಳಾದರೆ ಏನಂತೆ ಎಂದು ರೈತರು ಮತ್ತೆ ವೀಳ್ಯದೆಲೆ ನಾಟಿ ಮಾಡಲು ಹೋದರೆ ಇಲ್ಲಿ ವೀಳ್ಯದೆಲೆ ನಾಟಲೇ ಇಲ್ಲ. ಒಂದಲ್ಲ ಎರಡಲ್ಲ, ಸತತ ಐದಾರು ವರ್ಷಗಳ ಕಾಲ ಇಲ್ಲಿನ ರೈತರು ವೀಳ್ಯದೆಲೆ ನಾಟಿ ಮಾಡಿ ಕೈ ಸುಟ್ಟುಕೊಂಡರು. ಪುನಃ ಬೆಳೆ ಕೂಡಲೇ ಇಲ್ಲ. ಇದರಿಂದ ವಿಧಿ ಇಲ್ಲದೇ ರೈತರು ಪರ್ಯಾಯ ಬೆಳೆಗಳಿಗೆ ಮೊರೆ ಹೋದರು. ಹೀಗಾಗಿ ಎಲೆಬಿಚ್ಚಾಲಿಗೆ ಹೆಸರೊಂದೇ ಉಳಿಯಿತು. 

ಮತ್ತೆ ಮರುಜೀವ: ಅದಾಗಿ ಎರಡು ದಶಕಗಳ ಬಳಿಕ ಈಗ ಮತ್ತೆ ವೀಳ್ಯದೆಲೆ ಚಿಗುರೊಡೆದಿದೆ. ಗ್ರಾಮದ ಯುವೋತ್ಸಾಹಿ ರೈತ ಕುಮಾರ ಅವರ, ಸತತ ಎರಡು ವರ್ಷಗಳ ಫ‌ಲದಿಂದ ಈಗ ಮತ್ತೆ ವೀಳ್ಯದೆಲೆ ಬೆಳೆ ನಾಟಿದೆ. ಇದು ಇಡೀ ಗ್ರಾಮದ ಜನರಿಗೆ ಅಚ್ಚರಿ ಜೊತೆಗೆ ಹೊಸ ಚೈತನ್ಯ ಮೂಡಿಸಿದೆ. ಈಗಾಗಲೇ ಕುಮಾರ ವೀಳ್ಯದೆಲೆ ಇಳುವರಿ ಪಡೆಯುತ್ತಿರುವ ಕಾರಣ, ಇತರೆ ರೈತರಿಗೂ ವಿಶ್ವಾಸ ಮೂಡಿದೆ. ಇತರೆ ರೈತರು ಕೂಡ ವೀಳ್ಯದೆಲೆ ಬೆಳೆಯುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ.

Advertisement

ಉತ್ತಮ ಇಳುವರಿ: ಈಗ ಕುಮಾರ ಎರಡು ಎಕರೆಯಲ್ಲಿ ನೀಳ್ಯದೆಲೆ ನಾಟಿ ಮಾಡಿದ್ದಾರೆ. ಎಕರೆಗೆ ಏನಿಲ್ಲವೆಂದರೂ ವರ್ಷಕ್ಕೆ ಒಂದು ಲಕ್ಷ ರೂ. ಖರ್ಚಾದರೆ, ತಿಂಗಳಿಗೆ ಕನಿಷ್ಠ ಏನಿಲ್ಲವೆಂದರೂ 40ರಿಂದ 50 ಸಾವಿರ ರೂ. ಆದಾಯ ಬರುತ್ತದೆ. ಈಗ ಇಳುವರಿ ಕೂಡ ಉತ್ತಮವಾಗಿ ಬರುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ವೀಳ್ಯದೆಲೆ ಬಳ್ಳಿಗೆ ಆಸರೆಗೆಂದು ನುಗ್ಗೆ ಗಿಡಗಳನ್ನು ನೆಡಲಾಗುತ್ತದೆ. ನಾಲ್ಕು ದಿನಕ್ಕೊಮ್ಮೆ ನೀರು ಹಾಯಿಸಿದರೆ ಸಾಕು.

ತುಂಗಭದ್ರಾ ನದಿ ಸಮೀಪವಿರುವ ಕಾರಣ ಪೈಪ್‌ಲೈನ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೆಲವರು ಬೋರ್‌ಗಳನ್ನು ಹಾಕಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ವೀಳ್ಯದೆಲೆಗೆ ಮಾತ್ರ ಯಾವುದೇ ರಾಸಾಯನಿಕ ಸಿಂಪರಣೆ ಬೇಕಿಲ್ಲ. ಒಮ್ಮೆ ನಾಟಿ ಮಾಡಿದರೆ ಎರಡು ವರ್ಷದವರೆಗೆ ಇಳುವರಿ ಬರುತ್ತಲೇ ಇರುತ್ತದೆ. ನಿತ್ಯ ಎಲೆಗಳನ್ನು ಬಿಡಿಸಿ ಮಾರುಕಟ್ಟೆಗೆ ಕಳುಹಿಸುವುದಷ್ಟೇ ನಮ್ಮ ಕೆಲಸ ಎನ್ನುತ್ತಾರೆ ಕುಮಾರ. 

ಹಣದ ಬೆಳೆ: ಒಂದು ಕಾಲಕ್ಕೆ ಈ ಗ್ರಾಮದ ರೈತರಲ್ಲಿ ಬಡತನ ಕಂಡವರು ವಿರಳಾತಿವಿರಳ. ಎಲ್ಲರಿಗೂ ವೀಳ್ಯದೆಲೆಯೇ ಕೃಷಿ. ಏಕೆಂದರೆ ಇದು ನಿತ್ಯ ಆದಾಯ ನೀಡುವ ಬೆಳೆ. ಅಲ್ಲದೇ, ಎಕರೆಗೆ ಮಾಸಿಕವಾಗಿಯೇ 20ರಿಂದ 30 ಸಾವಿರ ರೂ. ಆದಾಯ ಸಿಗುತ್ತದೆ. ದರ ಚನ್ನಾಗಿ ಸಿಕ್ಕರೆ ಇನ್ನೂ ಹೆಚ್ಚು ಲಾಭ ಸಿಗಲಿದೆ. ಹೀಗಾಗಿ, ಇದನ್ನು ಲಾಭದಾಯಕ ಕೃಷಿ ಎಂದೇ ಕರೆಯಬಹುದು. ಆದರೆ, ಸಾಕಷ್ಟು ಅಂತರ ಸೃಷ್ಟಿಯಾದ ಕಾರಣ ಈಗ ರೈತರಿಗೆ ಮಾರುಕಟ್ಟೆಯ ಹಳೆಯ ಸಂಪರ್ಕಗಳೇ ಕಳೆದು ಹೋಗಿವೆ.

ಈಗ ವಿಜಯವಾಡ, ಗುಂಟೂರು, ಗೋದಾವರಿ ಭಾಗದಲ್ಲಿ ಹೆಚ್ಚಾಗಿ ವೀಳ್ಯದೆಲೆ ಮಾರಾಟವಾಗುತ್ತಿದೆ. ಇದರಿಂದ ಎಲೆಬಿಚ್ಚಾಲಿ ರೈತರಿಗೆ ಮಾರುಕಟ್ಟೆ ಸವಾಲು ಸಮಸ್ಯೆಯಾಗಿ ಪರಿಣಮಿಸಿದೆ. ಈ ಬೆಳೆಯಿಂದ ನಷ್ಟವಂತೂ ಇಲ್ಲ. ಮೊದಲು ಸಿಗುತ್ತಿದ್ದ ದರಕ್ಕಲ್ಲದಿದ್ದರೂ ಕೊಂಚ ಕಡಿಮೆ ದರಕ್ಕೆ ಮಾರಾಟವಾಗುತ್ತದೆ. ನಮಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚಿನ ವೀಳ್ಯದೆಲೆ ಬೆಳೆಯಲು ಮುಂದಾಗಬಹುದು ಎನ್ನುವುದು ವೀಳ್ಯದೆಲೆ ಬೆಳೆಗಾರರ ಅನಿಸಿಕೆ.

* ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next