ಬೆಂಗಳೂರು: ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಬಳಿ ಎಲ್ಲ ಕೆಲಸಗಳನ್ನು ಮಾಡಿಸಿಕೊಂಡ ಶಾಸಕರೇ ಇದೀಗ ನನ್ನ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಆ ಮೂಲಕ “ಹೇಸಿಗೆ’ ತಿನ್ನುವಂತಹ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಭಾನುವಾರ ಸಂಜೆ ನಗರದ ತಾಜ್ ವಿವಾಂತ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ತಮ್ಮ ನೋವು ಹಾಗೂ ಬೇಸರವನ್ನು ಹೊರಹಾಕಿದರು ಎನ್ನಲಾಗಿದೆ.
ಮುಖ್ಯಮಂತ್ರಿ ಆಗಿದ್ದಾಗ ಬಸವರಾಜು, ಸೋಮಶೇಖರ್, ಮುನಿರತ್ನ ಹೇಳಿದ ಕೆಲಸವನ್ನೆಲ್ಲ ಮಾಡಿಕೊಟ್ಟೆ. ಆದರೆ, ಅವರೇ ನನ್ನ ಬೆನ್ನಿಗೆ ಚೂರಿ ಹಾಕಿದರು. ಇವರು ಮಾಡಿದ ಕೆಲಸದಿಂದ ನೋವಾಗಿದೆ. ರಾಜಕೀಯದಲ್ಲಿ ಯಾರನ್ನು ನಂಬಬೇಕು ಎಂಬುದೇ ತಿಳಿಯುತ್ತಿಲ್ಲ. ನಂಬಿಕೆ ಎಂಬ ಪದಕ್ಕೆ ಇಲ್ಲಿ ಅರ್ಥವೇ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕೆಲ ಶಾಸಕರು ನನಗೆ ಆಪ್ತರು. ನಾನೇ ಅವರನ್ನು ಕಳುಹಿಸಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಹೋದವರಷ್ಟೇ ಅಲ್ಲ, ಇಲ್ಲಿ ಇರುವವರೂ ನನಗೆ ಆಪ್ತರು. ನಾನು ನಿಮ್ಮಲ್ಲಿ ಯಾರಿಗಾದರೂ ಬಿಜೆಪಿಗೆ ಹೋಗುವಂತೆ ಹೇಳಿದ್ದೀನಾ ಎಂದು ಶಾಸಕರಿಗೆ ಪ್ರಶ್ನಿಸಿದ ಸಿದ್ದರಾಮಯ್ಯ, ಅಂತಹ ನೀಚ ಕೆಲಸವನ್ನು ನಾನು ಮಾಡಲಾರೆ ಎಂದಿದ್ದಾರೆ.
ಶ್ರೀಮಂತ ಪಾಟೀಲ್ ಬಗ್ಗೆ ಮೊದಲಿನಿಂದಲೂ ಅನುಮಾನ ಇತ್ತು. ಅವರ ಮೇಲೆ ಕಣ್ಣಿಡುವಂತೆ ನಾನೇ ಹೇಳಿದ್ದೆ. ಹೋಗಬೇಕು ಎಂದು ತೀರ್ಮಾನ ಮಾಡಿದವರನ್ನು ತಡೆಯಲು ಸಾಧ್ಯವೇ? ನನ್ನ ಬಗ್ಗೆ ಅಪಪ್ರಚಾರ ಮಾಡಿದರೆ ಸಿಗುವ ಲಾಭವಾದರೂ ಏನು? ಎಂಟಿಬಿ, ಮುನಿರತ್ನ, ಸುಧಾಕರ್ ಜೊತೆ ಗಂಟೆಗಟ್ಟಲೆ ಮಾತನಾಡಿದಾಗ ನಾವೂ ಎಲ್ಲೂ ಹೋಗುವುದಿಲ್ಲ ಎಂದು ಹೇಳಿ ಕೈ ಕೊಟ್ಟರು. ಮೋಸ ಮಾಡಿದರು, ಇದಕ್ಕಿಂತ ನೋವು ಇನ್ನೇನು ಆಗಬೇಕು ಎಂದು ಸಭೆಯಲ್ಲಿ ಸಿದ್ದರಾಮಯ್ಯ ತಮ್ಮ ಮನಸ್ಸಿನ ನೋವು ಹೇಳಿಕೊಂಡರು ಎನ್ನಲಾಗಿದೆ.