Advertisement

ಪರಿವರ್ತನೆ ಜಗದ ನಿಯಮ; ಇದನರಿತು ನಡೆದರೆ ಸುಗಮ

09:54 AM Feb 12, 2020 | sudhir |

ಖಾಸಗಿ ವಿಮಾನಯಾನ ಸಂಸ್ಥೆಗಳು ವಿವಿಧ ರೀತಿಯ ಮಾರುಕಟ್ಟೆ ತಂತ್ರಗಳ ಮೂಲಕ ಪ್ರಯಾಣಿಕರನ್ನು ಆಕರ್ಷಿಸುತ್ತಾ ಹೆಚ್ಚಿನ ಆದಾಯ ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದರೆ, ಏರ್‌ ಇಂಡಿಯಾ ಇಂತಹ ತಂತ್ರಗಾರಿಕೆಯಲ್ಲಿ ವಿಫ‌ಲವಾಗಿದೆ. ಮಿತಿಮೀರಿದ ನಷ್ಟದಲ್ಲಿರುವ ಇದನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಯಿದ್ದು ಕೆಳಹಂತದ ಸಿಬ್ಬಂದಿಗಳ ಹಿತಾಸಕ್ತಿ ರಕ್ಷಣೆಯ ಷರತ್ತು ಇರುವುದಾಗಿ ಹೇಳಲಾಗುತ್ತದೆ. ಇದು ಕಾರ್ಯರೂಪಕ್ಕೆ ಬಂದಲ್ಲಿ ಇದನ್ನು ವಿರೋಧಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

Advertisement

ಇತ್ತೀಚೆಗೆ ಹೆಚ್ಚು ವಿವಾದಕ್ಕೊಳಗಾಗುತ್ತಿರುವ ಕೇಂದ್ರ ಸರಕಾರದ ನಿರ್ಧಾರಗಳಲ್ಲಿ ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಉದ್ದಿಮೆಗಳನ್ನು, ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಖಾಸಗಿ ಸಹಭಾಗಿತ್ವಕ್ಕೆ ತೆರೆದುಕೊಳ್ಳುವ ಪ್ರಕ್ರಿಯೆಯೂ ಒಂದು. ಈ ಸಾಲಿಗೆ ಇತ್ತೀಚೆಗೆ ಸೇರಿರುವ ಇನ್ನೆರಡು ವಿಷಯಗಳು ಏರ್‌ ಇಂಡಿಯಾ ಮತ್ತು ಜೀವ ವಿಮಾ ನಿಗಮದ ಶೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಪ್ರಸ್ತಾವ. ಹರಿಯುವ ನದಿಯ ನೀರು, ಸ್ಥಿರವಾಗಿ ನಿಂತಿರುವ ಕೊಳದ ನೀರಿನಂತೆ ಕಲುಷಿತವಾಗಿರದೆ ಪರಿಶುದ್ಧವಾಗಿರುತ್ತದೆ. ಈ ಸಿದ್ಧಾಂತ ವನ್ನು ಇಂದು ದೇಶದ ಹಲವಾರು ಸಾರ್ವಜನಿಕ ಉದ್ದಿಮೆಗಳಿಗೂ ಅನ್ವಯಿಸುವ ಕಾಲ ಬಂದಿದೆ.

ನಷ್ಟದ ಕಾರಣಕ್ಕೆ ಮುಚ್ಚುವಿಕೆ ಕೇವಲ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸೀಮಿತವಲ್ಲ. ಸರಕಾರಿ ಅಥವಾ ಖಾಸಗಿ ಸಂಸ್ಥೆಗಳೆರಡರಲ್ಲೂ ಮುಚ್ಚುಗಡೆಯಾದರೆ ಸಂಸ್ಥೆಯ ನೌಕರರ ಮೇಲೆ ಆಗುವ ಪರಿಣಾಮ ಒಂದೇ; ಅದೇ ಉದ್ಯೋಗ ನಷ್ಟ. ಕೆಲವು ಖಾಸಗಿ ಉದ್ದಿಮೆಗಳ ಉದಾಹರಣೆಗಳನ್ನು ನೋಡುವುದಾದರೆ, ಎಲ್ಲ ರೀತಿಯ ಚಿತ್ರೀಕರಣಕ್ಕೆ ಉಪಯೋಗಿಸುವ ಫಿಲ್ಮುಗಳ ಪೂರೈಕೆದಾರರಾಗಿದ್ದ ಮೆ| ಕೊಡಾಕ್‌ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ದೈತ್ಯಗಾತ್ರದ ಉದ್ದಿಮೆಯಾಗಿತ್ತು. ಸುಮಾರು ಎರಡು ಲಕ್ಷದಷ್ಟು ಉದ್ಯೋಗಿಗಳಿದ್ದ ಈ ಸಂಸ್ಥೆ ಕ್ರಮೇಣ ದಿವಾಳಿಯಾಗಿ 1998ರಲ್ಲಿ ಮುಚ್ಚಿಹೋಯಿತು. ಕಾರಣ ಇಷ್ಟೇ, ಚಿತ್ರೀಕರಣ ರಂಗದಲ್ಲಿ ಡಿಜಿಟಲ್‌ ತಾಂತ್ರಿಕತೆ ಕಾಲಿಟ್ಟಾಗ ಈ ದೈತ್ಯ ಸಂಸ್ಥೆ ತನ್ನ ತಾಂತ್ರಿಕತೆಯನ್ನು ಖೀಟಛಚಠಿಛಿ ಮಾಡುವ ಪ್ರಯತ್ನ ಮಾಡಲಿಲ್ಲ. ಪರಿಣಾಮವಾಗಿ ಸಂಸ್ಥೆ ಮುಚ್ಚಿ ಸಿಬ್ಬಂದಿ ಉದ್ಯೋಗ ಕಳೆದುಕೊಂಡರು. ಇದಕ್ಕೆ ಸಂಸ್ಥೆಯ ಆಡಳಿತ ವೈಫ‌ಲ್ಯವಷ್ಟೇ ಕಾರಣ ಹೊರತು ಬೇರೇನೂ ಅಲ್ಲ.

ಹೀಗೆ ಬದಲಾದ ತಾಂತ್ರಿಕತೆ, ಪೈಪೋಟಿಗಳನ್ನು ಸಮರ್ಥವಾಗಿ ಎದುರಿಸಲಾಗದೆ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಬೇಕಾದ ಬದಲಾವಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ವಿಫ‌ಲವಾದ ಸಂಸ್ಥೆಗಳ ಯಾದಿ ದೀರ್ಘ‌ವಿದೆ.

ಒಂದು ಕಾಲದಲ್ಲಿ ಆಯಾ ಕ್ಷೇತ್ರಗಳಲ್ಲಿ ಬಹುದೊಡ್ಡ ಮಾರುಕಟ್ಟೆ ಹೊಂದಿದ್ದ ಬಜಾಜ್‌ (ಸ್ಕೂಟರ್‌), ಡೈನೋರಾ (ಟಿವಿ), ಮರ್ಫಿ (ರೇಡಿಯೋ), ನೋಕಿಯಾ (ಮೊಬೈಲ…), ರಾಜದೂತ್‌ (ಬೈಕ್‌), ಅಂಬಾಸಿಡರ್‌ (ಕಾರು), ದಿನೇಶ್‌ (ಬಟ್ಟೆ), ಕಿಂಗ್‌ ಫಿಶರ್‌, ಜೆಟ್‌ ಏರ್‌ಲೈನ್ಸ್‌ ಇನ್ನಿಲ್ಲದಂತೆ ನೆಲಕಚ್ಚಿವೆ. ಅವುಗಳಲ್ಲಿ ನೋಕಿಯಾ ಫೀನಿಕ್ಸ್‌ ಹಕ್ಕಿಯಂತೆ ಮರುಜನ್ಮ ಪಡೆಯಲು ತನ್ನ ತಪ್ಪನ್ನು ತಿದ್ದಿಕೊಂಡಿರುವುದು ಕಾರಣ. ಹೀಗೆ ಬಾಗಿಲು ಮುಚ್ಚಿದ ಸಂಸ್ಥೆಗಳ ಸಾಲಿಗೆ ಸರಕಾರಿ ಸ್ವಾಮ್ಯದ ಎಚ್‌. ಎಂ.ಟಿ. ಈಗಾಗಲೇ ಸೇರಿಹೋಗಿದ್ದು, ಇನ್ನಷ್ಟು ಸಂಸ್ಥೆಗಳು ತೀವ್ರ ನಿಗಾ ಘಟಕದ ಹಾದಿಯಲ್ಲಿವೆ. ಬಿಎಸ್‌ಎನ್‌ಎಲ್‌, ಏರ್‌ ಇಂಡಿಯಾದಂತಹ ಕೆಲವು ಸಂಸ್ಥೆಗಳನ್ನು ಉಳಿಸಲು ಸರಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು, ಅದರ ಹಿಂದಿರುವ ಸದುದ್ದೇಶವನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಆದರೆ ಇಂದಿನ ಮನಃಸ್ಥಿತಿ ಹೇಗಿದೆಯೆಂದರೆ, ಸರಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಮುಕ್ತ ಮನಸ್ಸಿನಿಂದ ವಿಮರ್ಶಿಸಿ, ಸರಿಯಾದ ನಿರ್ಧಾರ ಕೈಗೊಳ್ಳುವ ಗೊಡವೆಗೆ ಹೋಗದೆ ಏಕಪಕ್ಷೀಯವಾಗಿ ಟೀಕಿಸುವ ಪ್ರವೃತ್ತಿ ಸರ್ವೇ ಸಾಮಾನ್ಯವಾಗಿರುವುದು.

Advertisement

ಸರಕಾರದ ನೇರ ನಿಯಂತ್ರಣದಲ್ಲಿ ಇರುವ ಸಂಸ್ಥೆಗಳ ಪ್ರಮುಖ ಸಮಸ್ಯೆಗಳೆಂದರೆ ನೀತಿ ನಿರ್ಧಾರ ಕೈಗೊಳ್ಳಲು ಇರುವ ಕೆಂಪು ಪಟ್ಟಿಯ ಅಡೆತಡೆ. ಈ ಕಾರಣದಿಂದಲೇ ಖಾಸಗಿಯವರೊಂದಿಗೆ ಸ್ಪರ್ಧಿಸುವಲ್ಲಿ ಅವುಗಳು ಎಡವುತ್ತಿರುವುದು. ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿರುವಂತೆ ಪ್ರತಿಭೆ-ಪರಿಶ್ರಮಗಳಿಗನುಸಾರ ವೇತನ, ಭಡ್ತಿ ನೀಡಲು ಅವಕಾಶವಿಲ್ಲ. ಮಾತ್ರವಲ್ಲ ನೇಮಕಾತಿ, ಭಡ್ತಿಗಳಲ್ಲಿ ಮೀಸಲಾತಿ ಎದುರು ತಾಂತ್ರಿಕ ಪರಿಣತಿ ಗಣನೆಗೆ ಬರುವುದಿಲ್ಲ. ಸರಕಾರಿ ಸ್ವಾಮ್ಯದ ಭಾರತೀಯ ದೂರಸಂಪರ್ಕ ನಿಗಮ ಸೇರಿದಂತೆ ಹಲವಾರು ಸರಕಾರಿ ಸಂಸ್ಥೆಗಳ ಇಂದಿನ ಸ್ಥಿತಿಗೆ ಇದೂ ಕಾರಣ. ಇದನ್ನು ಮುಚ್ಚುವ ಪ್ರಸ್ತಾವ ಸರಕಾರದ ಮುಂದಿದೆಯೆಂಬ ಸುದ್ದಿ ಹರಡಿತ್ತು. ಸಂಬಂಧಿಸಿದ ಸಚಿವರೇ ಇದನ್ನು ಅಲ್ಲಗಳೆದು ಸ್ಪಷ್ಟೀಕರಣ ನೀಡಿದರೂ ವದಂತಿಗಳು ಮುಂದುವರಿಯುತ್ತಲೇ ಇದ್ದವು. ಆದರೆ ಈ ಸಂಸ್ಥೆಯನ್ನು ತಾಂತ್ರಿಕವಾಗಿ ಉನ್ನತೀಕರಿಸುವ, ಹಳೆಯ ತಲೆಮಾರಿನ, ಹೊಸತನಕ್ಕೆ ಹೊಂದಿಕೊಳ್ಳಲು ಅಸಮರ್ಥವೆನಿಸುವ ವರ್ಗಕ್ಕೆ ಸೇರುವ ಸರಿ ಸುಮಾರು 90,000 ಸಿಬ್ಬಂದಿಯವರನ್ನು ಸ್ವಯಂಪ್ರೇರಿತ ನಿವೃತ್ತಿ ಗೊಳಪಡಿಸುವುದೇ ಮುಂತಾದ ಕ್ರಾಂತಿಕಾರಿ ಕ್ರಮಗಳನ್ನು ಸರಕಾರ ಜಾರಿಗೆ ತಂದಿದೆ. ಈ ಮೂಲಕ ಸಂಸ್ಥೆಯನ್ನು ಒಂದಿಷ್ಟು ಉಸಿರಾಡುವ ಸ್ಥಿತಿಗೆ ತರುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ.

ಆದರೆ ಋಣಾತ್ಮಕ ಚಿಂತಕರು ತೆರಿಗೆದಾರರ ಹಣದಿಂದ ಇಂತಹ ಬಿಳಿಯಾನೆಗಳನ್ನು ಸಾಕುವುದು ಎಷ್ಟರ ಮಟ್ಟಿಗೆ ಸರಿಯೆಂಬ ಬಗ್ಗೆ ಸಮಜಾಯಿಷಿ ನೀಡಲಾಗದಿದ್ದರೂ, ಸಿಬ್ಬಂದಿ ನಿವೃತ್ತಿ ತಪ್ಪೆಂದು ಗದ್ದಲವೆಬ್ಬಿಸಿದರು. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರವಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳೇ ಆಗಿರುವ ಆಕಾಶವಾಣಿ, ದೂರದರ್ಶನಗಳೇಕೆ ನಷ್ಟದಲ್ಲಿಲ್ಲ? ಇವೆರಡೂ ತಾಂತ್ರಿಕವಾಗಿ ಅಗತ್ಯಕ್ಕೆ ತಕ್ಕಂತೆ ಸ್ವಲ್ಪವಾದರೂ ಬದಲಾಗಿದ್ದೇ ಇದಕ್ಕೆ ಕಾರಣ.

ಖಾಸಗಿ ವಿಮಾನಯಾನ ಸಂಸ್ಥೆಗಳು ವಿವಿಧ ರೀತಿಯ ಮಾರುಕಟ್ಟೆ ತಂತ್ರಗಳ ಮೂಲಕ ಪ್ರಯಾಣಿಕರನ್ನು ಆಕರ್ಷಿಸುತ್ತಾ ಹೆಚ್ಚಿನ ಆದಾಯ ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದರೆ, ಏರ್‌ ಇಂಡಿಯಾ ಇಂತಹ ತಂತ್ರಗಾರಿಕೆಯಲ್ಲಿ ವಿಫ‌ಲವಾಗಿದೆ. ಮಿತಿಮೀರಿದ ನಷ್ಟದಲ್ಲಿರುವ ಇದನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆಯಿದ್ದು ಕೆಳಹಂತದ ಸಿಬಂದಿಗಳ ಹಿತಾಸಕ್ತಿ ರಕ್ಷಣೆಯ ಶರ್ತವಿರುವುದಾಗಿ ಹೇಳಲಾಗುತ್ತದೆ. ಇದು ಕಾರ್ಯರೂಪಕ್ಕೆ ಬಂದಲ್ಲಿ ಇದನ್ನು ವಿರೋಧಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

ರಾಜ್ಯದ ಸಂಸ್ಥೆಗಳಿಗೆ ಅನ್ವಯಿಸುವುದಾದರೆ, ಕರ್ನಾಟಕದ ವಿದ್ಯುತ್‌ ವಿತರಣಾ ಸಂಸ್ಥೆಗಳನ್ನು ಕಂಪೆನಿಗಳಾಗಿ ಪರಿವರ್ತಿಸಿದ ನಂತರ ಗ್ರಾಹಕರಿಂದ ವಿದ್ಯುತ್‌ ಶುಲ್ಕವನ್ನು ವಸೂಲಿ ಮಾಡುವ ಒತ್ತಡವಿದೆ. ಅದೇ ವೇಳೆ BMTC ಉಚಿತಗಳ ಭರಾಟೆಯಲ್ಲಿ ನಷ್ಟದಲ್ಲಿದ್ದರೆ, ಅದರ ಸಹ ಸಂಸ್ಥೆಯಾಗಿರುವ ರಾಜ್ಯ ಸಾರಿಗೆ ಸಂಸ್ಥೆ ಹಾಗಿಲ್ಲ. ಒಟ್ಟಿನಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆಗಳ ನಷ್ಟಕ್ಕೆ ನೂರಾರು ಕಾರಣಗಳಿರುತ್ತವೆ. ಇದೇ ವೇಳೆ ಜೀವವಿಮಾ ನಿಗಮದ ದೈನಂದಿನ ಆಡಳಿತದಲ್ಲಿ ಸಾರ್ವಜನಿಕರನ್ನೂ ಸೇರ್ಪಡೆಗೊಳಿಸುವ ಪ್ರಕ್ರಿಯೆಯೆಂದೇಕೆ ಭಾವಿಸಬಾರದು?

ಖಾಸಗಿ ಸಹಭಾಗಿತ್ವದಿಂದ ಸಾರ್ವಜನಿಕರ ನೇರ ನಿಯಂತ್ರಣ ಸಾಧ್ಯ. ಸಂಪೂರ್ಣ ಸರಕಾರಿ ನಿಯಂತ್ರಣವಾದರೆ ಕೇವಲ ರಾಜಕೀಯ ನಿಯಂತ್ರಣವಿರುತ್ತದೆ. ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವವರು ರಾಜಕೀಯವಾಗಿ ನೇಮಕಾತಿ ಹೊಂದಿದವರಾಗಿರುತ್ತಾರೆ. ಅದೇ ಖಾಸಗಿ ಸಹಭಾಗಿತ್ವವಿದ್ದರೆ ಶೇರುದಾರರಿಂದ ಆಯ್ಕೆಯಾದ, ಸಂಬಂಧಿಸಿದ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರಾಗಿರುವ ಸಾಧ್ಯತೆ ಯಿದೆ. ಇಷ್ಟಕ್ಕೂ ದೇಶದ ಆರ್ಥಿಕ ಸಮತೋಲದ ಹಿತದೃಷ್ಟಿಯಿಂದ ಕೈಗೊಳ್ಳುವ ಇಂತಹ ನಿರ್ಧಾರ, ಹಿಂದೊಮ್ಮೆ ಕಾಪು ದಾಸ್ತಾನಿನ ಚಿನ್ನವನ್ನು ಹೊರದೇಶಕ್ಕೆ ಮಾರಾಟ ಮಾಡಿದ ಕ್ರಮಕ್ಕಿಂತ ಉತ್ತಮವೆಂದೇಕೆ ಭಾವಿಸಬಾರದು?

– ಮೋಹನದಾಸ ಕಿಣಿ, ಕಾಪು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next