Advertisement

ದುರಂತಗಳಿಗೆ ಬ್ರೇಕ್ ಹಾಕಲಿಲ್ಲ ಕಾನೂನು

12:30 PM Apr 24, 2017 | Team Udayavani |

ಬೆಂಗಳೂರು: ಕೊಳವೆ ಬಾವಿ ಅನಾಹುತ ಸಂಭವಿಸಿದಾಗಲೆಲ್ಲಾ ಅದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಆದೇಶ ಹೊರಡಿಸಿ, ಕೆಲ ದಿನಗಳ ಕಾಲ ಆದೇಶ ಪಾಲನೆ ಬಗ್ಗೆ ಗಮನಹರಿಸುವ ಸರ್ಕಾರ ನಂತರ ಅದನ್ನು ಮರೆತುಬಿಡುತ್ತದೆ ಎಂಬುದಕ್ಕೆ ಜ್ವಲಂತ ಸಾಕ್ಷಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಝುಂಜರವಾಡದಲ್ಲಿ ಆರು ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕಾಲುಜಾರಿ ನಿರುಪಯುಕ್ತ ಕೊಳವೆ ಬಾವಿಗೆ ಬಿದ್ದ ದುರಂತ. ಹೌದು, 2009ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ಕೊಳವೆಬಾವಿಯೊಳಗೆ ಬಿದ್ದು ಮೃತಪಟ್ಟ ಸಂದರ್ಭದಲ್ಲಿ ನಿರುಪಯುಕ್ತ ಮತ್ತು ವಿಫ‌ಲ ಕೊಳವೆಬಾವಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಾರದ ಕಾರಣ ಮತ್ತೆ ಅಂತಹುದೇ ದುರಂತ ಸಂಭವಿಸಿತ್ತು. 2014ರಲ್ಲಿ ಮತ್ತೆ ಅಂತಹುದೇ ದುರಂತ ಸಂಭವಿಸಿದಾಗ ಮತ್ತೆ ಅದೇ ರೀತಿಯ ಆದೇಶ ಹೊರಡಿಸಲಾಗಿತ್ತು.

Advertisement

ಆ ಸಂದರ್ಭದಲ್ಲಿ ಸರ್ಕಾರ ಎಚ್ಚರಿಕೆಯಿಂದಲೇ ಕ್ರಮ ಕೈಗೊಂಡಿತ್ತು. ರಾಜ್ಯದಲ್ಲಿರುವ ನಿರುಪಯುಕ್ತ ಕೊಳವೆಬಾವಿಗಳನ್ನು 2014ರ ಆಗಸ್ಟ್‌ 31ರೊಳಗೆ ಮುಚ್ಚಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿತ್ತು. ಅಲ್ಲದೆ, ಇಂತಹ ಕೊಳವೆ ಬಾವಿ ಮುಚ್ಚಿಸಿದ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಕಿರಿಯ ಎಂಜಿನಿಯರ್‌ ಮತ್ತು
ಗ್ರಾಮ ಲೆಕ್ಕಿಗರಿಂದ ಜಂಟಿ ಪ್ರಮಾಣಪತ್ರವನ್ನು ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿಗಳ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳು ಪಡೆಯಬೇಕು ಎಂದು ಆದೇಶಿಸಿತ್ತು.

ಜತೆಗೆ ಅನಾಹುತ ಸಂಭವಿಸಿದರೆ ಕೊಳವೆ ಬಾವಿ ಮಾಲೀಕರು ಮತ್ತು ಅದನ್ನು ಕೊರೆದ ಸಂಸ್ಥೆಯೇ ಜವಾಬ್ದಾರಿ ಹೊರಬೇಕು. ಕೊಳವೆ ಬಾವಿ ಕೊರೆಯುವ ಯಂತ್ರದ ಮಾಲೀಕರು, ತಾವು ಕೊಳವೆ ಬಾವಿ ಕೊರೆಯಲು ಆರಂಭಿಸುವಾಗ ಅದಕ್ಕೆ ಅನುಮತಿ ಪಡೆದಿರಬೇಕು. ಇಲ್ಲವಾದರೆ ಆ ಯಂತ್ರವನ್ನು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ವಶಪಡಿಸಿಕೊಳ್ಳಬಹುದು ಎಂದು ಮಾರ್ಗಸೂಚಿ ಹೊರಡಿಸಿತ್ತು. ಅಲ್ಲದೆ, ಕೊಳವೆ ಬಾವಿ ದುರಂತ ಸಂಭವಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿತ್ತು.

ಈ ಆದೇಶ ಜಾರಿಗೊಳಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದ್ದರಿಂದ ರಾಜ್ಯದಲ್ಲಿ ನಿರುಪಯುಕ್ತ ಅಥವಾ ವಿಫ‌ಲವಾದ ಕೊಳವೆಬಾವಿಗಳನ್ನು ಗುರುತಿಸುವ ಕಾರ್ಯ ನಡೆಸಲಾಯಿತು. ಅಲ್ಲದೆ, ತೆರೆದ ಕೊಳವೆ ಬಾವಿಗಳು
ಕಂಡು ಬಂದಲ್ಲಿ ಆ ಕುರಿತು 18004258666 ಟೋಲ್‌ μÅà ಸಂಖ್ಯೆಗೆ ಮಾಹಿತಿ ನೀಡಲು ಸರ್ಕಾರ ಸೂಚಿಸಿತ್ತು.

ಮತ್ತೆ ನಿರ್ಲಕ್ಷ್ಯ: ಇದಾದ ಬಳಿಕ ವಿಫ‌ಲ ಕೊಳವೆಬಾವಿಗಳ ಕುರಿತು ನಿರ್ಲಕ್ಷ್ಯ ಮುಂದುವರಿಯಿತು. ಖಾಸಗಿಯವರು ತೆಗೆಸಿರುವ ಬೋರ್‌ವೆಲ್‌ಗ‌ಳ ಸಮೀಕ್ಷೆ ಕಾರ್ಯ ನಡೆಸಲಾಯಿತಾದರೂ ಬಳಿಕ ಏನಾಯಿತು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮೂಲಗಳ ಪ್ರಕಾರ 2014ರ ಸೆಪ್ಟೆಂಬರ್‌ನಿಂದ ಈಚೆಗೆ ರಾಜ್ಯದಲ್ಲಿ ಕೊರೆಯಲಾದ ಸಹಸ್ರಾರು
ಕೊಳವೆಬಾವಿಗಳಲ್ಲಿ ನೀರು ಬತ್ತಿಹೋಗಿವೆ. ಅಷ್ಟೇ ಅಲ್ಲ, ಕೊರೆಯಲಾದ ಸಾವಿರಾರು ಕೊಳವೆಬಾವಿಗಳು
ನೀರಿಲ್ಲದೆ ವಿಫ‌ಲವಾಗಿವೆ. ಇಂತಹ ಎಷ್ಟು ಕೊಳವೆ ಬಾವಿಗಳಿವೆ? ಅವುಗಳ ಪೈಕಿ ಎಷ್ಟನ್ನು ಮುಚ್ಚಲಾಗಿದೆ?

Advertisement

ಇನ್ನೂ ಎಷ್ಟು ತೆರೆದ ಕೊಳವೆಬಾವಿಗಳಿವೆ ಎಂಬ ಅಂಕಿ ಅಂಶವೇ ಸರ್ಕಾರದ ಬಳಿ ಇಲ್ಲ ಎನ್ನಲಾಗಿದೆ.
ಬಿಜೆಪಿಯೂ ಸಂಕಲ್ಪ ಮಾಡಿತ್ತು: 2014ರಲ್ಲಿ ಕೊಳವೆ ಬಾವಿ ದುರಂತ ಸಂಭವಿಸಿದಾಗ ಪ್ರತಿಪಕ್ಷ ಬಿಜೆಪಿ ರಾಜ್ಯಾದ್ಯಂತ ಇರುವ ನಿರುಪಯುಕ್ತ ಕೊಳವೆಬಾವಿ ಮುಚ್ಚಲು ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿತ್ತು. ಆಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸಂಸದ ಪ್ರಹ್ಲಾದ ಜೋಶಿ, ರಾಜ್ಯದಲ್ಲಿರುವ ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚುವ ಸಾಮಾಜಿಕ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲ ತಾಲೂಕುಗಳಲ್ಲಿ ಆಗಸ್ಟ್‌ 15ರಂದು ಧ್ವಜಾರೋಹಣದ ನಂತರ
ಸ್ಥಳೀಯರ ನೆರವಿನೊಂದಿಗೆ ಪಾಳು ಬಿದ್ದ ಕೊಳವೆಬಾವಿಗಳನ್ನು ಮುಚ್ಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದಿದ್ದರು. ಆದರೆ, ಅದು ಕೂಡ ಅಲ್ಲಿಗೇ ಕೊನೆಯಾಗಿತ್ತು.

ಕೋರ್ಟ್‌ ಕೂಡ ಮಾರ್ಗಸೂಚಿ ನೀಡಿತ್ತು
ಕೊಳವೆಬಾವಿ ದುರಂತ ಹೆಚ್ಚುತ್ತಿದ್ದ ಬಗ್ಗೆ 2010ರಲ್ಲಿ ಆತಂಕ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್‌, ವಿಫ‌ಲ
ಕೊಳವೆಬಾವಿಗಳನ್ನು ಮುಚ್ಚಲು ಸೂಚಿಸಿತ್ತು. ಅಲ್ಲದೆ, 2014ರಲ್ಲಿ ಬಾಗಲಕೋಟೆಯಲ್ಲಿ ತಿಪ್ಪಣ್ಣ ಎಂಬ ಬಾಲಕ ಕೊಳವೆ ಬಾವಿಯೊಳಗೆ ಬಿದ್ದು ಮೃತಪಟ್ಟಾಗ ರಾಜ್ಯ ಹೈಕೋರ್ಟ್‌ ಕೂಡ ಸರ್ಕಾರಕ್ಕೆ ಕೆಲವೊಂದು ನಿರ್ದೇಶನ ನೀಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next